ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಜಗತ್ತಿನಲ್ಲಿ ಇಂದು ಅತಿಹೆಚ್ಚು ಕಡೆಗಣಿಸಲ್ಪಡುವವರು ವೃದ್ಧರಾದ ತಂದೆ ತಾಯಿಗಳು. ಕುಟುಂಬ ಸಂಬಂಧಗಳು ಶಿಥಿಲವಾಗುತ್ತಿದ್ದು, ಮಕ್ಕಳು ವೃದ್ಧ ತಂದೆತಾಯಿಗಳನ್ನು ವೃದ್ಧಾಶ್ರಮಕ್ಕೆ ಅಟ್ಟುತ್ತಿದ್ದಾರೆ. ಇಂದಿನ ತಲೆಮಾರಿಗೆ ಇಷ್ಟವಿಲ್ಲದ ಸ್ಥಳ ಇದ್ದರೆ ಅದು ಅವರ ಮನೆಯೇ ಆಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಕುಂಞಿ ಆತಂಕ ವ್ಯಕ್ತಪಡಿಸಿದ್ದಾರೆ.ಅವರು ಇಲ್ಲಿನ ಡಾನ್ ಬಾಸ್ಕೋ ಹಾಲ್‌ನಲ್ಲಿ ಜಮಾಅತೆ ಇಸ್ಲಾಮೀ ಹಿಂದ್‌ನಿಂದ ಹಮ್ಮಿಕೊಂಡ ಸದೃಢ ಕುಟುಂಬ, ಸುಭದ್ರ ಸಮಾಜ ಎಂಬ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಗತ್ತಿನ ಎಲ್ಲ ಧರ್ಮಗಳಲ್ಲಿಯೂ ಕೌಟುಂಬಿಕ ವ್ಯವಸ್ಥಗೆ ಬಹಳ ಪ್ರಾಮುಖ್ಯತೆ ಇದೆ. ಬ್ರಹ್ಮಾಂಡಕ್ಕೆ ಹೇಗೆ ಸೂರ್ಯ, ಮಳೆ, ಗಾಳಿ ಮುಖ್ಯವೋ, ಸಮಾಜಕ್ಕೆ ಕುಟುಂಬ ಅಗತ್ಯವಾಗಿದೆ. ಕುಟುಂಬ ಇಲ್ಲದಿದ್ದರೆ ಸಮಾಜ ಉಳಿಯುವುದಿಲ್ಲ ಎಂದವರು ಹೇಳಿದರು.ಮುಖ್ಯ ಅಥಿತಿ ಮಣಿಪಾಲ ಪೊಲೀಸ್ ಠಾಣಾಧಿಕಾರಿ ರಾಘವೇಂದ್ರ ಮಾತನಾಡಿ, ಇಂದು ಸಾಕಷ್ಟು ಯುವಕರು ಮದ್ಯ - ಮಾದಕ ದ್ರವ್ಯಗಳಿಗೆಗೆ ಬಲಿಯಾಗುತ್ತಿದ್ದಾರೆ. ಸೈಬರ್ ಕ್ರೈಂ, ಆನ್ ಲೈನ್ ಗೇಮಿಂಗ್‌ನಿಂದ ಲಕ್ಷಾಂತರ ರು.ಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಪೋಷಕರು ಎಚ್ಚೆತ್ತುಕೊಳ್ಳದಿದ್ದರೆ ಸಮಾಜ, ಕುಟುಂಬ ಇನ್ನಷ್ಟು ಹಾಳಾಗಲಿದೆ ಎಂದು ಎಚ್ಚರಿಸಿದರು.
ಡಾ.ಎ.ವಿ.ಬಾಳಿಗ ಆಸ್ಪತ್ರೆಯ ಮನೋವೈದ್ಯ ಡಾ.ಮಾನಸ್ ಮಾತನಾಡಿ, ಮೊಬೈಲ್ ಗೀಳಿನಿಂದ ಮಾನಸಿಕ ಸಮಸ್ಯೆಗಳು ಹೆಚ್ಚಾಗಿದ್ದು, ಅಂಥವರಿಗೆ ಸರಿಯಾದ ಮನೋವೈದ್ಯರ ಸಮಾಲೋಚನೆ ಅಗತ್ಯವಿದೆ ಎಂದರು.ಸುಗಮ್ಯ ಮಹಿಳಾ ಸಂಘ ಸ್ಥಾಪಕಾಧ್ಯಕ್ಷೆ ಜಾನೇಟ್ ಬರ್ಬೋಝ, ಸಮಾಜದಲ್ಲಿ ಪರಸ್ಪರ ಸೌಹಾರ್ದತೆಯಿಂದ ಕೂಡಿ ಬಾಳಿದರೆ ಕುಟುಂಬ ಸಂಬಂಧಗಳ ಜೊತೆಗೆ ಸಮಾಜಿಕ ಸಂಬಂಧಗಳು ಕೂಡ ಬಲಿಷ್ಠ ಆಗುತ್ತದೆ ಎಂದು ಹೇಳಿದರು.
ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ಘಟಕ ಮಹಿಳಾ ವಿಭಾಗದ ಅಧ್ಯಕ್ಷೆ ವಾಜಿದಾ ತಬಸ್ಸುಮ್ ವೇದಿಕೆಯಲ್ಲಿದ್ದರು. ಅಧ್ಯಕ್ಷ ನಿಸಾರ್ ಅಹಮದ್ ಪ್ರಾಸ್ತವಿಕವಾಗಿ ಮಾತನಾಡಿದರು. ಕಾರ್ಯಕ್ರಮ ಸಂಯೋಜಕ ರಯೀಸ್ ಅಹಮ್ಮದ್ ವಂದಿಸಿದರು. ಜಲಾಲುದ್ದಿನ್ ಹಿಂದ್ ಕಾರ್ಯಕ್ರಮ ನಿರೂಪಿಸಿದರು.ಈ ಸಂದರ್ಭದಲ್ಲಿ ಶಿಕ್ಷಕರಿಗಾಗಿ ಏರ್ಪಡಿಸಿದ್ದ ಜಿಲ್ಲಾಮಟ್ಟದ ಪ್ರಬಂಧ ಸ್ಪರ್ದೆಯಲ್ಲಿ ಡಾ.ಬಿ.ಬಿ.ಹೆಗ್ಡೆ ಕಾಲೇಜಿನ ಉಪನ್ಯಾಸಕ ಕೆ. ಸುಕುಮಾರ್ ಶೆಟ್ಟಿ ಪ್ರಥಮ, ಯಶಸ್ವಿ ಟುಟೋರಿಯಲ್ ಪಿಯು ಕಾಲೇಜಿನ ಸೂರಜ್ ದ್ವಿತೀಯ ಮತ್ತು ಪ್ಲವರ್ ಆಫ್ ಪ್ಯಾರಡೈಸ್‌ನ ಉಪನ್ಯಾಸಕಿ ಮರ್ಸೆಲ್ಲ ಡಿಸೋಜ ಅವರಿಗೆ ತೃತೀಯ ಬಹುಮಾನ ನೀಡಿ ಸನ್ಮಾನಿಸಲಾಯಿತು.