ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ದಸರಾ ಮಹೋತ್ಸವದ ಜಂಬೂಸವಾರಿಗೆ ಇನ್ನೂ 2 ದಿನಗಳು ಮಾತ್ರ ಬಾಕಿ ಇರುವ ಹಿನ್ನೆಲೆಯಲ್ಲಿ ಗಜಪಡೆ, ಅಶ್ವರೋಹಿ ದಳ ಹಾಗೂ ವಿವಿಧ ಪೊಲೀಸ್ ತುಕಡಿಗಳು ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಸೇರಿದಂತೆ ಜಂಬೂಸವಾರಿ ಅಂತಿಮ ಹಂತದ ತಾಲೀಮು ಯಶಸ್ವಿಯಾಗಿ ಜರುಗಿತು.ಮೈಸೂರು ಅರಮನೆಯ ಮುಂಭಾಗದಲ್ಲಿ ನಡೆದ ದಸರಾ ಜಂಬೂಸವಾರಿಯ ಅಂತಿಮ ತಾಲೀಮಿನಲ್ಲಿ ಅಂಬಾರಿ ಆನೆ ಅಭಿಮನ್ಯು, ಕುಮ್ಕಿ ಆನೆಗಳಾದ ಲಕ್ಷ್ಮಿ ಮತ್ತು ಹಿರಣ್ಯಾ, ಅಶ್ವರೋಹಿ ದಳ ಕುದುರೆಗಳು, ವಿವಿಧ ಪೊಲೀಸ್ ತುಕಡಿಗಳು, ಪೊಲೀಸ್ ಬ್ಯಾಂಡ್ ಪಾಲ್ಗೊಂಡಿದ್ದವು.
ಅಂಬಾರಿ ಹೊರಲಿರುವ ಅಭಿಮನ್ಯು ಆನೆಯು ವೇದಿಕೆ ಮುಂಭಾಗ ಬರುತ್ತಿದ್ದಂತೆ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿಗಳಾದ ಎಂ. ಮುತ್ತುರಾಜು, ಮಾರುತಿ, ಡಿಸಿಎಫ್ ಡಾ.ಐ.ಬಿ. ಪ್ರಭುಗೌಡ ಪುಷ್ಪಾರ್ಚನೆ ಮಾಡಿದರು. ಈ ವೇಳೆ ಪೊಲೀಸ್ ಬ್ಯಾಂಡ್ ರಾಷ್ಟ್ರಗೀತೆ ನುಡಿಸುತ್ತಿದ್ದಂತೆ ಅರಮನೆಯ ಹೊರ ಆವರಣದಲ್ಲಿ 7 ಪಿರಂಗಿಗಳನ್ನು ಬಳಸಿ ಒಟ್ಟು 21 ಕುಶಾಲತೋಪುಗಳನ್ನು ಪಿರಂಗಿ ದಳದ ಸಿಬ್ಬಂದಿ ಸಿಡಿಸಿದರು.ನಂತರ ಅಂಬಾರಿ ಆನೆ ಅಭಿಮನ್ಯು, ಕುಮ್ಕಿಗಳಾಗಿ ಲಕ್ಷ್ಮಿ ಮತ್ತು ಹಿರಣ್ಯಾ ಸಾಗಿದವು. ನಿಶಾನೆ ಆನೆಯಾಗಿ ಧನಂಜಯ, ನೌಫತ್ ಆನೆಯಾಗಿ ಗೋಪಿ, ಉಳಿದ ಭೀಮ, ಕಂಜನ್, ರೋಹಿತ್, ಏಕಲವ್ಯ, ಪ್ರಶಾಂತ, ಮಹೇಂದ್ರ, ಸುಗ್ರೀವ, ದೊಡ್ಡಹರವೆ ಲಕ್ಷ್ಮಿ ಸಾಲಾನೆಗಳಾಗಿ ಸಾಗಿದವು. ವಯಸ್ಸಿನ ಕಾರಣಕ್ಕೆ ವರಲಕ್ಷ್ಮಿ ಆನೆಯು ಈ ತಾಲೀಮಿನಲ್ಲಿ ಪಾಲ್ಗೊಂಡಿರಲಿಲ್ಲ.
ಪ್ರಧಾನ ದಳಪತಿಯಾಗಿ ಅಶ್ವರೋಹಿದಳ ಕಮಾಂಡೆಂಟ್ ಶೈಲೇಂದ್ರ, ಉಪ ಪ್ರಧಾನ ದಳಪತಿಯಾಗಿ ಸಾಸನೂರ್ ಅವರು ತಾಲೀಮು ಮುನ್ನಡೆಸಿದರು.ಅ.12 ರಂದು ದಸರಾ ಜಂಬೂಸವಾರಿ ದಿನ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಬರುವ ಮಾರ್ಗ, ಪುಷ್ಪಾರ್ಚನೆ ಮಾಡುವ ಸ್ಥಳ, ಆನೆಗಳ ತಂಡದ ಮುಂದೆ ಸಂಚರಿಸಲಿರುವ ಅಶ್ವರೋಹಿದಳ, ಪಥಸಂಚಲನದಲ್ಲಿ ಪಾಲ್ಗೊಳ್ಳುವ ಪೊಲೀಸ್ ತುಕಡಿಗಳು, ಪೊಲೀಸ್ ಬ್ಯಾಂಡ್ ಯಾವ ಕ್ರಮಾಂಕದಲ್ಲಿ ಸಾಗಬೇಕೆಂಬುದನ್ನು ಈ ತಾಲೀಮಿನಲ್ಲಿ ಪರಿಚಯಿಸಲಾಯಿತು.
‘ಅಂತಿಮ ಹಂತದ ಜಂಬೂಸವಾರಿ ಪುಷ್ಪಾರ್ಚನೆಯ ತಾಲೀಮು ನಡೆದಿದ್ದು, ಈ ಮೂಲಕ ದಸರಾ ಗಜಪಡೆಗೆ ನೀಡುತ್ತಿದ್ದ ಎಲ್ಲಾ ರೀತಿಯ ತಾಲೀಮುಗಳು ಮುಗಿದಿವೆ. ಶುಕ್ರವಾರ ಯಾವುದೇ ರೀತಿಯ ತಾಲೀಮು ಇರುವುದಿಲ್ಲ. ಗಜಪಡೆಯನ್ನು ದರ್ಗಾಗೆ ಕರೆದೊಯ್ಯಲಾಗುವುದು. ಜಂಬೂಸವಾರಿ ಮೆರವಣಿಗೆಯಲ್ಲಿ 9 ಆನೆಗಳು ಭಾಗಿಯಾಗಲಿವೆ. ಅಭಿಮನ್ಯು ಚಿನ್ನದ ಅಂಬಾರಿ ಹೊತ್ತು ಸಾಗಲಿದ್ದಾನೆ. ಅಭಿಮನ್ಯುವಿನ ಎಡಬಲದಲ್ಲಿ ಹಿರಣ್ಯಾ ಮತ್ತು ಲಕ್ಷ್ಮಿ ಕುಮ್ಕಿ ಆನೆಗಳಾಗಿ ಸಾಗಲಿವೆ. ಧನಂಜಯ ನಿಶಾನೆ ಆನೆಯಾಗಿ, ಗೋಪಿ ನೌಪತ್ ಆನೆಯಾಗಿ ಸಾಗಲಿದ್ದು, ಉಳಿದ ನಾಲ್ಕು ಆನೆಗಳು ಸಾಲಾನೆಗಳಾಗಿ ಸಾಗಲಿವೆ.’- ಡಾ.ಐ.ಬಿ. ಪ್ರಭುಗೌಡ, ಡಿಸಿಎಫ್