ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುದಸರಾ ಉತ್ಸವದ ಅಂಗವಾಗಿ ಅಕ್ಟೋಬರ್ 2 ರಂದು ನಡೆಯಲಿರುವ ಜಂಬೂ ಸವಾರಿ ಮೆರವಣಿಗೆಯಲ್ಲಿ ಸಾರೋಟಿನಲ್ಲಿ 50 ಗ್ರಾಮ ದೇವತೆಗಳು ಸಾಗಲಿವೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಅಂಬಾರಿ ಮೆರವಣಿಗೆ ಕುರಿತು ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು ತುಮಕೂರು ದಸರಾ ಉತ್ಸವದ ವೈಭವಯುತ ಅಂಬಾರಿ ಮೆರವಣಿಗೆಗೆ ಕಳಸ ಹೊತ್ತ 150 ಜನ ಮಹಿಳೆಯರು ಮೆರವಣಿಗೆಯಲ್ಲಿ ಭಾಗವಹಿಸಲು ಕ್ರಮವಹಿಸಬೇಕೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರಿಗೆ ಸೂಚಿಸಿದರು. ಮೆರವಣಿಗೆ ಸಾಗುವ ದಾರಿಯಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವಂತೆ ಬೆಸ್ಕಾಂ ಇಲಾಖೆಗೆ ಸೂಚಿಸಿದ ಅವರು, ಮೆರವಣಿಗೆಯಲ್ಲಿ ಭಾಗವಹಿಸುವ ಕಲಾವಿದರಿಗೆ ನೀರು ಹಾಗೂ ಲಘು ಉಪಹಾರ ವ್ಯವಸ್ಥೆ ಮಾಡಬೇಕೆಂದು ನಿರ್ದೇಶನ ನೀಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ, ತುಮಕೂರು ದಸರಾ ಅಂಬಾರಿ ಮೆರವಣಿಗೆ ಸಂಸ್ಕೃತಿ, ಭಕ್ತಿ ಮತ್ತು ಜನಪರಂಪರೆಯ ವೈಭವವನ್ನು ಒಟ್ಟುಗೂಡಿಸುವ ಉತ್ಸವವಾಗಿದ್ದು, ಸಾರಿಗೆ, ಅಗ್ನಿಶಾಮಕ, ಆರೋಗ್ಯ, ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಇಲಾಖೆಗಳು ಸಾರ್ವಜನಿಕರ ಭದ್ರತೆಗೆ ಸಹಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸೂಚಿಸಿದರು.ಜಿಲ್ಲಾ ಪೊಲೀಸ್ ಅಧೀಕ್ಷಕ ಅಶೋಕ್ ಕೆ.ವಿ. ಮಾತನಾಡಿ ದಸರಾ ಅಂಬಾರಿ ಮೆರವಣಿಗೆಗೆ ತುಮಕೂರು ತಾಲೂಕಿನ ವಿವಿಧ ೫೦ ಉತ್ಸವ ದೇವರುಗಳ ಸುರಕ್ಷತೆಗಾಗಿ ಪೊಲೀಸ್ ಸಿಬ್ಬಂದಿ ಹಾಗೂ ಕಂದಾಯ ನಿರೀಕ್ಷಕರನ್ನು ನೇಮಿಸಲಾಗುವುದು ಎಂದರು. ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಿ.ಗೋಪಾಲ್ ಹಾಗೂ ಎಂ.ಎಲ್. ಪುರುಷೋತ್ತಮ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.