ಎಚ್‌.ಡಿ.ಕುಮಾರಸ್ವಾಮಿಗೆ ಮಾಡಿದ್ದುಣ್ಣೋ ಮಾರಾಯ ಪರಿಸ್ಥಿತಿ: ಮಾಜಿ ಸಚಿವ ಸಿಎಂ ಇಬ್ರಾಹಿಂ

| Published : Nov 18 2024, 12:04 AM IST / Updated: Nov 18 2024, 12:54 PM IST

ಎಚ್‌.ಡಿ.ಕುಮಾರಸ್ವಾಮಿಗೆ ಮಾಡಿದ್ದುಣ್ಣೋ ಮಾರಾಯ ಪರಿಸ್ಥಿತಿ: ಮಾಜಿ ಸಚಿವ ಸಿಎಂ ಇಬ್ರಾಹಿಂ
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಸಿಎಂ, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಅವರ ತಂದೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಕುರಿತಾಗಿ ಸಚಿವ ಜಮೀರ್‌ ಅಹ್ಮದ್‌ ನೀಡಿರುವ ಹೇಳಿಕೆ ತಪ್ಪಾಗಿದೆ ಎಂದು ಮಾಜಿ ಸಚಿವ ಸಿಎಂ ಇಬ್ರಾಹಿಂ ಹೇಳಿದರು.

 ರಾಯಚೂರು : ಮಾಜಿ ಸಿಎಂ, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಅವರ ತಂದೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಕುರಿತಾಗಿ ಸಚಿವ ಜಮೀರ್‌ ಅಹ್ಮದ್‌ ನೀಡಿರುವ ಹೇಳಿಕೆ ತಪ್ಪಾಗಿದೆ ಎಂದು ಮಾಜಿ ಸಚಿವ ಸಿಎಂ ಇಬ್ರಾಹಿಂ ಹೇಳಿದರು.

ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮೀರ್‌ ಅವರನ್ನು ಬೆಳೆಸಿದ್ದೇ ಎಚ್‌ಡಿಕೆ ಅವರು ಇದೀಗ ಮಾಡಿದ್ದುಣ್ಣೋ ಮಾರಾಯ ಎನ್ನುವಂತಾಗಿದೆ. ಅವರು ಸಾಕಿರುವ ಜಮೀರ್‌ ಇದೀಗ ಅವರಿಗೆನೇ ಮುಳುವಾಗಿದ್ದಾರೆ ಎಂದರು.

ನಾವು ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿರಬೇಕು, ಜಮೀರ್‌ ಅಹ್ಮದ್‌ ಸಾಮಾನ್ಯ ವ್ಯಕ್ತಿಯಲ್ಲ ಅವರೊಬ್ಬ ಸಚಿವರಾಗಿದ್ದು , ಅವರ ಅಭಿಪ್ರಾಯವೇ ಸರ್ಕಾರದ ಅಭಿಪ್ರಾಯ ವಾಗುತ್ತದೆ ಹಾಗಾಗಿ ನಾನೇ ಒಕ್ಕಲಿಗ ಸಮಾಜಕ್ಕೆ ಕ್ಷಮೆ ಕೇಳಿದ್ದೇನೆ ಎಂದು ಹೇಳಿದರು.

ದೇಶದ ಮಾಜಿ ಪ್ರಧಾನಿ, 93 ವರ್ಷದ ಹಿರಿಯರಾಗಿರುವ ದೇವೇಗೌಡ ಅವರ ಕುರಿತಾಗಿ ಜಮೀರ್‌ ಖರೀದಿ ಮಾಡುತ್ತೇವೆ ಎಂದು ಹೇಳುವುದು ಎಷ್ಟು ಸರಿ? ಯಾರಿಗೆ ಯಾರನ್ನು ಖರೀದಿ ಮಾಡಲು ಆಗುತ್ತಾ? ಕನಿಷ್ಠ ಪಕ್ಷ ಅವರ ವಯಸ್ಸಿಗಾದರೂ ನಾವು ಗೌರವ ಕೊಡಬೇಕು, ರಾಜಕೀಯ ಸೈದ್ಧಾಂತಿಕ ಟೀಕೆ ಮಾಡಬೇಕೇ ಹೊರತು ಈ ರೀತಿಯ ಹೇಳುವುದರಲ್ಲಿ ಅರ್ಥವಿಲ್ಲ ಎಂದ ಬೇಸರ ವ್ಯಕ್ತಪಡಿಸಿದರು.

ಮಠ-ಮಾನ್ಯ, ರೈತರು ವಕ್ಫ್ ಆಸ್ತಿ ನಮ್ಮದು ಎನ್ನಲಾಗದು

ವಕ್ಫ್ ಆಸ್ತಿ ವಿವಾದಗಳೆಲ್ಲವೂ ಒಂದೇ ರೀತಿಯಾಗಿ ಇರುವುದಿಲ್ಲ, ಎಲ್ಲವುಗಳಿಗೆ ಒಂದೇ ಕ್ರಮವನ್ನು ಅನ್ವಯಿಸಲು ಆಗುವುದಿಲ್ಲ. ಪಹಣಿಯಲ್ಲಿ ವಕ್ಫ್‌ ಹೆಸರು ನಮೋದನೆಯಾಗಿದ್ದರೆ ಯಾವಾಗ ಆಗಿದೆ ಎನ್ನುವುದನ್ನು ಪರಿಗಣಿಸಬೇಕಾಗುತ್ತದೆ. ವಕ್ಫ್ ದೇವರ ಹೆಸರಿನಲ್ಲಿ ದಾನ ಮಾಡಿದ ಆಸ್ತಿಯಾಗಿದ್ದು, ಅದನ್ನು ಯಾರೂ ಕಬಳಿಸಲು ಬರುವುದಿಲ್ಲ, ಮಠ-ಮಾನ್ಯ, ರೈತರು ವಕ್ಫ್ಆಸ್ತಿ ನಮ್ಮದು ಎನ್ನಲು ಬರುವುದಿಲ್ಲ. 

ಇದು ಸೂಕ್ಷ್ಮ ವಿಚಾರವಾಗಿರುವುದರಿಂದ ಕಾನೂನಾತ್ಮಕವಾಗಿಯೇ ಬಗೆಹರಿಸಿಕೊಳ್ಳಬೇಕೆಯೇ ಹೊರತು ಇದನ್ನು ರಾಜ ಕೀಯಕ್ಕೆ ಬಳಸಿಕೊಳ್ಳಬಾರದು. ವಿವಾದವನ್ನು ರಾಜಕೀಯ ಮಾಡುತ್ತಿರುವುದು ಸಮಂಜಸವಲ್ಲ ಇದರಿಂದಾಗಿ ಸೌಹಾರ್ದತೆಗೆ ಧಕ್ಕೆ ಉಂಟಾಗಲಿದೆ. ಹಿಂದೂಗಳ ಆಸ್ತಿಯಲ್ಲಿ ಮುಸ್ಲಿಂರು, ಮುಸ್ಲಿಂರ ಆಸ್ತಿಯನ್ನು ಹಿಂದೂಗಳು ರಕ್ಷಣೆ ಮಾಡಿದಂತಹ ನೆಲೆ ನಮ್ಮದಾಗಿದೆ, ಅದೇ ನಮ್ಮ ಸಂಸ್ಕೃತಿಯಾಗಿದ್ದು, ಇಂದಿನ ರಾಜಕಾರಣಿಗಳು ಅದನ್ನು ಹದಗೆಡಿಸುವ ಕೆಲಸವನ್ನು ಮಾಡುತ್ತಿರುವುದು ಖಂಡನೀಯ ಸಂಗತಿಯಾಗಿದೆ.

ಮಂತ್ರಾಲಯದ ಜಾಗ ಯಾರು ಕೊಟ್ಟವರು?: ಮಂತ್ರಾಲಯದ ಜಾಗವನ್ನು ಯಾರು ಕೊಟ್ಟವರು ? ಆದೋನಿ ನವಾಬರು ಕೊಟ್ಟಂತಹ ಜಾಗವಾಗಿದೆ. ಅದು ವಕ್ಫ್‌ಬೋರ್ಡ್‌ ದ್ದು ಎಂದು ಯಾರಾದರೂ ಕೇಳಲು ಹೋಗಿದ್ದರೇ? ನವಾಬರ ಬಳಿಗೆ ಬಂದಿದ್ದ ಶ್ರೀರಾಘವೇಂದ್ರ ಸ್ವಾಮಿಗಳು ಜಾಗ ಕೇಳಿದಾಗ ಆ ಊರಿನ ಖಾಜಿಗೆ ಕೊಟ್ಟ ಜಾಗವನ್ನು ವಾಪಸ್ಸು ಪಡೆದು, ರಾಯರ ಬೃಂದಾವನಕ್ಕೆ ಸ್ಥಳ ನೀಡಿದ್ದಾರೆ. ಇದನ್ನು ಶ್ರೀಮಠದ ಸ್ವಾಮಿಗಳೇ ಹೇಳುತ್ತಾರೆ. ಶೃಂಗೇರಿ ಶಾರಾದಾ ಪೀಠಕ್ಕೆ ಪೇಶ್ವೆ ದಾಳಿಗೆ ಬಂದಾಗ ಟಿಪ್ಪು ಸುಲ್ತಾನ್ ಸೈನ್ಯ ಕಳುಹಿಸಿ ಮತ್ತೆ ಶಾರದಾ ಪೀಠವನ್ನ ಸ್ಥಾಪನೆ ಮಾಡಿ ದ್ದಾರೆ.ಇದು ಇತಿಹಾಸ, ಇದು ನಮ್ಮ ಪರಂಪರೆ,ಇದು ನಮ್ಮ ಸಂಸ್ಕೃತಿಯಾಗಿದೆ. ಆದರೆ ರಾಜಕಾರಣಗಳು ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಕ್ಫ್‌ ಗೊಂದಲ ವಿಚಾರವಾಗಿ ರೈತರು ಆತಂಕ ಪಡುವ ಅಗತ್ಯವಿಲ್ಲ, ಈ ಕುರಿತು ಈಗಾಗಲೇ ರೈತ ಮುಖಂಡರೊಂದಿಗೆ ಸಮಾಲೋಚಿಸಲಾಗಿದೆ. ತಹಸೀಲ್ದಾರರು, ಜಿಲ್ಲಾಧಿಕಾರಿಗಳು ಪ್ರಕರಣವನ್ನು ವಿಚಾರಿಸಿ ನ್ಯಾಯ ಕಲ್ಪಿಸಿಕೊಡುವ ಕೆಲಸ ಮಾಡಬೇಕು, ಕಾನೂನಾತ್ಮಕವಾಗಿಯೇ ಪರಿಹಾರ ಕಂಡುಕೊಳ್ಳಬೇಕು, ಇದರಲ್ಲಿ ರಾಜಕೀಯ ನಾಯಕರು ಕೈ ಹಾಕಬಾರದು ಎಂದು ಇಬ್ರಾಹಿಂ ಹೇಳಿದರು.