ಉತ್ತರಿ ಮಳೆಗೆ ಜಮಖಂಡಿ ತತ್ತರ

| Published : Sep 25 2024, 12:48 AM IST

ಸಾರಾಂಶ

ಉತ್ತರಿ ಮಳೆಗೆ ಅಕ್ಷರಶಃ ಜಮಖಂಡಿ ನಗರ ತತ್ತರಿಸಿ ಹೋಗಿದೆ. ಕಳೆದರಾತ್ರಿ ಸುರಿದ ಭಾರೀ ಮಳೆಗೆ ನಗರದ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ಜನ ಜೀವನ ಅಸ್ತವ್ಯಸ್ತವಾಗಿದೆ.

ಕನ್ನಡಪ್ರಭ ವಾರ್ತೆ ಜಮಖಂಡಿ

ಉತ್ತರಿ ಮಳೆಗೆ ಅಕ್ಷರಶಃ ಜಮಖಂಡಿ ನಗರ ತತ್ತರಿಸಿ ಹೋಗಿದೆ. ಕಳೆದರಾತ್ರಿ ಸುರಿದ ಭಾರೀ ಮಳೆಗೆ ನಗರದ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ಜನ ಜೀವನ ಅಸ್ತವ್ಯಸ್ತವಾಗಿದೆ.

ನಗರದ ಜಂಬುಕೇಶ್ವರಗಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ ಮಳೆನೀರು ನುಗ್ಗಿದ್ದು ಅವಾಂತರ ಸೃಷ್ಟಿಸಿದೆ. ಮುಧೋಳ ಬೈಪಾಸ್‌ ರಸ್ತೆ ಜಲಾವೃತವಾಗಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅವೈಜ್ಞಾನಿಕವಾಗಿ ನಿರ್ಮಿಸಿದ ಚರಂಡಿ ವ್ಯವಸ್ಥೆಯಿಂದಾಗಿ ಮಳೆಯ ನೀರು ಹರಿದು ಹೋಗದೇ ಜನ ವಸತಿ ಪ್ರದೇಶದಲ್ಲಿ ಸಂಗ್ರಹವಾಗಿದೆ. ಮಣ್ಣಿನ ಮನೆಗಳು ಕುಸಿದು ಬಿದ್ದು ಅಪಾರ ಹಾನಿಯಾಗಿದೆ. ಜಂಬಿಕೇಶ್ವರ ದೇವಸ್ಥಾನದ ಹತ್ತಿರದ ಹಣಮಂತ ಬಿಳ್ಳೂರ ಅವರ ಮನೆ ಬಿದ್ದುಹೋಗಿದೆ.

ಶಾಸಕರ ಭೇಟಿ:

ನಗರದಲ್ಲಿ ಜಲಾವೃತಗೊಂಡ ಪ್ರದೇಶಗಳಿಗೆ ಶಾಸಕ ಜಗದೀಶ ಗುಡಗುಂಟಿ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ತಹಸೀಲ್ದಾರ್‌ ಸದಾಶಿವ ಮುಕ್ಕೊಜಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರದಲ್ಲಿ ಮಳೆಯಾದ ಸಂದರ್ಭದಲ್ಲಿ ಜಲಾವೃತಗೊಳ್ಳುವ ಪ್ರದೇಶಗಳಲ್ಲಿ ವೈಜ್ಞಾನಿಕವಾಗಿ ನೀರು ಹರಿದು ಹೋಗುವಂತೆ ಚರಂಡಿ ನಿರ್ಮಿಸಲು ಶಾಸಕ ಗುಡಗುಂಟಿ ಅಧಿಕಾಗಳಿಗೆ ಸೂಚಿಸಿದರು.

ಮಳೆಯ ನೀರು ಹರಿದು ಲಕ್ಕನ ಕೆರೆಗೆ ಸೇರುವ ವ್ಯವಸ್ಥೆ ಇತ್ತು. ಆದರೆ ಕೊಳಚೆನೀರು ಕೆರೆಗೆ ಸೇರಿ ಕೆರೆಯ ನೀರು ಹಾಳಾಗಲು ಪ್ರಾರಂಭವಾಗಿದ್ದರಿಂದ ಚರಂಡಿಯ ನೀರು ಕೆರೆಗೆ ಸೇರದಂತೆ ಚರಂಡಿಗಳನ್ನು ಮುಚ್ಚಲಾಯಿತು. ಅದರಿಂದ ಮಳೆನೀರು ನೇರವಾಗಿ ತಗ್ಗು ಪ್ರದೇಶಗಳಿಗೆ ನುಗ್ಗುತ್ತಿದ್ದು ಪ್ರತಿಬಾರಿ ಮಳೆ ಬಂದಾಗ ಇದೇ ಪರಿಸ್ಥಿತಿ ಎದುರಾಗುತ್ತದೆ ಎಂದು ಸ್ಥಳೀಯ ನಿವಾಸಿಗಳ ಅಂಬೋಣ ವಾಗಿದೆ. ನಗರಸಭೆಯವರು ಶಾಶ್ವತ ಪರಿಹಾರ ಮಾಡಿಕೊಡಬೇಕೆಂದು ನಿವಾಸಿಗಳು ಆಗ್ರಹಿಸಿದ್ದಾರೆ. ಆರ್‌.ಐ.ಪ್ರಕಾಶ ಪವಾರ, ಮುಖಂಡರಾದ ಅಜಯ ಕಡಪಟ್ಟಿ, ಸುಮಿತ್ರಾ ಗೊರನಾಳ, ಮುಂತಾದವರಿದ್ದರು.