ಪ್ರಸ್ತುತ ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಿಧೇಯಕವನ್ನು ಮಂಡಿಸುವ ಅಗತ್ಯವೇ ಇರುತ್ತಿರಲಿಲ್ಲ ಎಂದು ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ ಹಾಗೂ ಎಂ.ಪಿ.ಅಪ್ಪಚ್ಚುರಂಜನ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ನ್ಯಾಯಾಲಯದ ಆದೇಶವನ್ನು ಕರಾರುವಕ್ಕಾಗಿ ಪಾಲಿಸಿದ್ದರೆ ಹಾಗೂ ಕಾಂಗ್ರೆಸ್ ಸರ್ಕಾರವೇ ಹೊರಡಿಸಿದ ಸುತ್ತೋಲೆಯೊಂದನ್ನು ವಾಪಸ್ ಪಡೆದಿದ್ದರೆ ಈಗ ಪ್ರಸ್ತುತ ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಿಧೇಯಕವನ್ನು ಮಂಡಿಸುವ ಅಗತ್ಯವೇ ಇರುತ್ತಿರಲಿಲ್ಲ ಎಂದು ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ ಹಾಗೂ ಎಂ.ಪಿ.ಅಪ್ಪಚ್ಚುರಂಜನ್ ಹೇಳಿದ್ದಾರೆ.ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕರಾದ ಬೋಪಯ್ಯ, ಜಮ್ಮಾಬಾಣೆ ಸಮಸ್ಯೆ ಈ ಹಿಂದೆಯೇ ಶೇ . 99ರಷ್ಟು ಭಾಗ ಇತ್ಯರ್ಥವಾಗಿತ್ತು ಎಂದರು.
2011 ಡಿಸೆಂಬರ್ 16ರಲ್ಲಿ ಸದಾನಂದಗೌಡ ಮುಖ್ಯಮಂತ್ರಿಯಾಗಿದ್ದಾಗ 2011ನೇ ಸಾಲಿನ ಕರ್ನಾಟಕ ಭೂ ಕಂದಾಯ (2ನೇ ತಿದ್ದುಪಡಿ) ವಿಧೇಯಕವನ್ನು ಮಂಡಿಸಿ ಸದನದ ಒಪ್ಪಿಗೆ ಪಡೆಯಲಾಗಿತ್ತು. ಆದರೆ, ಆಗಿನ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ಮಸೂದೆಯನ್ನು ರಾಷ್ಟ್ರಪತಿಗೆ ಕಳುಹಿಸಿದರು. ಅಂತಿಮವಾಗಿ ಆಗಿನ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಈ ಮಸೂದೆಗೆ ಅಂಕಿತ ಹಾಕಿದ ನಂತರ 2013ರ ಫೆಬ್ರುವರಿ 1ರಂದು ಜಾರಿಗೆ ಬಂದಿತು ಎಂದರು.ಈ ಕಾನೂನಿನ ವಿರುದ್ಧ 43 ಮಂದಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ಇವರಲ್ಲಿ ಕಾಂಗ್ರೆಸ್ ಪಕ್ಷದವರೂ ಇದ್ದರು. ಸುದೀರ್ಘವಾಗಿ ವಿಚಾರಣೆ ನಡೆಸಿದ ನ್ಯಾಯಾಲಯವು 2024ರ ಜುಲೈ 25ರಂದು ಈ ಅರ್ಜಿಗಳನ್ನು ವಜಾಗೊಳಿಸಿ ಜಮ್ಮಾಬಾಣೆ ಕುರಿತು ಸ್ಪಷ್ಟವಾಗಿ ತೀರ್ಮಾನ ನೀಡಿತು. ಜೊತೆಗೆ ಈ ತೀರ್ಪನ್ನು ಒಂದು ತಿಂಗಳೊಳಗೆ ಜಾರಿಗೊಳಿಸಬೇಕು ಎಂದೂ ಸೂಚಿಸಿತ್ತು. ಆದರೆ, ಸರ್ಕಾರ ಈ ಆದೇಶವನ್ನು ಜಾರಿಗೆ ತರಲಿಲ್ಲ ಎಂದು ತಿಳಿಸಿದರು.
ಈ ಮಧ್ಯೆ ಬಿಜೆಪಿ ಸರ್ಕಾರ 2020ರಲ್ಲಿ ನೋಟರಿ ಅಫಿಡವಿಡ್ ಕೊಡುವ ಮೂಲಕ ಸುಲಲಿತವಾಗಿ ವಿಭಾಗ ಮಾಡಿಕೊಡುವಂತಹ ಸುತ್ತೋಲೆಯೊಂದನ್ನು ಜಾರಿಗೆ ತಂದಿದ್ದೆವು. ಇದರಿಂದ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರ 2024ರ ಜನವರಿ 31ರಂದು ಸುತ್ತೋಲೆಯೊಂದನ್ನು ಹೊರಡಿಸಿ, ವಿಭಾಗ ಪತ್ರಗಳು ನೋಂದಾಯಿತವಾಗಿದ್ದಲ್ಲಿ ಮ್ಯೂಟೆಶನ್ ಮಾಡಬೇಕು ಎಂದು ಸೂಚಿಸಿತು. ಇಲ್ಲಿಂದ ಸಮಸ್ಯೆ ಆರಂಭವಾಯಿತು ಎಂದು ಹೇಳಿದರು.ಸರ್ಕಾರ ತಾನೆ ಹೊರಡಿಸಿದ ಈ ಸುತ್ತೋಲೆಯನ್ನು ವಾಪಸ್ ಪಡೆದಿದ್ದರೆ ಅಥವಾ 2024ರಲ್ಲಿ ನ್ಯಾಯಾಲಯ ನೀಡಿದ್ದ ಆದೇಶವನ್ನು ಜಾರಿಗೊಳಿಸಿದ್ದರೆ ಈಗ ಈ ವಿಧೇಯಕ ಮಂಡಿಸುವ ಅಗತ್ಯವೇ ಇರುತ್ತಿರಲಿಲ್ಲ ಎಂದು ಪ್ರತಿಪಾದಿಸಿದರು.
ಸ್ಪಷ್ಟತೆ ಇಲ್ಲ: ಈ ವಿಧೇಯಕದಲ್ಲೂ ಯಾವುದೇ ಸ್ಪಷ್ಟತೆ ಇಲ್ಲ. ನಿಯಮಾವಳಿಗಳನ್ನು ರಚಿಸಿಲ್ಲ. ತಹಸೀಲ್ದಾರ್ ಅವರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಅಪೀಲಿಗೂ ಅವಕಾಶ ಕೊಡಲಾಗಿದೆ. ಇದರಿಂದ ಇದು ಭ್ರಷ್ಟಾಚಾರಕ್ಕೆ ದಾರಿಯಾಗುವ ಹಾಗೂ ವಿವಾದ ಅನಾವಶ್ಯವಾಗಿ ವರ್ಷಾನುಗಟ್ಟಲೆ ಎಳೆದಾಡುವಂತಾಗುವ ಸಾಧ್ಯತೆಗಳೇ ಹೆಚ್ಚಿವೆ ಎಂದು ಹೇಳಿದರು.ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ಕಂದಾಯ ಕಾಯ್ದೆ ತಿದ್ದುಪಡಿ ವಿಧೇಯಕದ ಸಂದರ್ಭ ಜಾಗದ ಪಟ್ಟೆದಾರರನ್ನು ಏಜೆಂಟರೆಂದು ಕರೆಯುವ ಮೂಲಕ ಕುಟುಂಬದ ಪ್ರಮುಖರಿಗೆ ಅಗೌರವವನ್ನು ತೋರಿದೆಯೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಜಿಲ್ಲಾ ಸರ್ಕಾರಿ ಅಭಿಯೋಜಕರಾದ ಕವೀಂದ್ರ ಮಾತನಾಡಿ, ಈಗಿನ ಸರ್ಕಾರ ಜಮ್ಮಾ ಬಾಣೆ ಸಮಸ್ಯೆ ಬಗೆಹರಿಕೆಗೆ ತಂದಿರುವ ವಿಧೇಯಕದಲ್ಲಿ ತಹಸೀಲ್ದಾರರ ಮೂಲಕ ಅರ್ಜಿಗಳನ್ನು ಸ್ವೀಕರಿಸಿ ಸಮಸ್ಯೆ ಬಗೆಹರಿಸುವ ವಿಚಾರಗಳನ್ನು ತಿಳಿಸಿದೆಯಾದರು, ಇದರಲ್ಲಿ ಸ್ಪಷ್ಟತೆಗಳಿಲ್ಲ. ಪ್ರಮುಖವಾಗಿ ಸಮಸ್ಯೆ ಬಗೆಹರಿಕೆಗೆ ತಹಸೀಲ್ದಾರ್, ಗ್ರಾಮ ಅಭಿವೃದ್ಧಿ ಅಧಿಕಾರಿ , ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಪೂರ್ಣ ಹೊಣೆಗಾರಿಕೆಯನ್ನು ವಹಿಸುವುದು ಅತ್ಯವಶ್ಯ. ಇಲ್ಲವಾದಲ್ಲಿ ಭ್ರಷಾಚಾರ ಹೆಚ್ಚುವ ಸಾಧ್ಯತೆ ಇದೆ ಎಂದು ಹೇಳಿದರು.