ಶಾರದೆಗೆ ನಮಿಸಿದ ಜಮ್ಮು-ಕಾಶ್ಮೀರ ರಾಜ್ಯಪಾಲ

| Published : Jun 21 2025, 12:49 AM IST

ಸಾರಾಂಶ

ಇಲ್ಲಿನ ದಕ್ಷಿಣದ ಶಕ್ತಿ ಕೇಂದ್ರ ಶ್ರೀ ಶಾರದಾ ಪೀಠಕ್ಕೆ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಮನೋಜ್ ಸಿನ್ಹಾ ಭೇಟಿ ನೀಡಿ ಶ್ರೀ ಶಾರದಾಂಬೆಯ ದರ್ಶನ ಪಡೆದು.ಜಗದ್ಗುರುಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಶೃಂಗೇರಿ ಶಾರದಾ ಪೀಠಕ್ಕೆ ಭೇಟಿ ನೀಡಿದ ಮನೋಜ್ ಸಿನ್ಹಾ । ಶಾರದಾ ಮಾತೆ ದರ್ಶನ, ವಿಶೇಷ ಪೂಜೆ

ಕನ್ನಡಪ್ರಭ ವಾರ್ತೆ ಶೃಂಗೇರಿ

ಇಲ್ಲಿನ ದಕ್ಷಿಣದ ಶಕ್ತಿ ಕೇಂದ್ರ ಶ್ರೀ ಶಾರದಾ ಪೀಠಕ್ಕೆ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಮನೋಜ್ ಸಿನ್ಹಾ ಭೇಟಿ ನೀಡಿ ಶ್ರೀ ಶಾರದಾಂಬೆಯ ದರ್ಶನ ಪಡೆದು.ಜಗದ್ಗುರುಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ವಿಮಾನದ ಮೂಲಕ ಕೇರಳಕ್ಕೆ ಆಗಮಿಸಿ ನಂತರ ಕಾರಿನ ಮೂಲಕ ಕಾಸರಗೋಡು, ಮಂಗಳೂರು, ಕಾರ್ಕಳ ಎಸ್‌ಕೆ ಬಾರ್ಡರ್ ಕೆರೆಕಟ್ಟೆ ಮಾರ್ಗವಾಗಿ ಬೆಳಿಗ್ಗೆ ಶೃಂಗೇರಿ ಶ್ರೀ ಮಠಕ್ಕೆ ಆಗಮಿಸಿದರು. ಶೃಂಗೇರಿ ಮಠದ ಸಂಪ್ರದಾಯದಂತೆ ಶ್ರೀ ಮಠದ ಎದುರು ಛತ್ರ ಚಾಮರ, ವಾದ್ಯಗಳೊಂದಿಗೆ ಶ್ರೀ ಮಠದ ಆಡಳಿತಾಧಿಕಾರಿ ಪಿ.ಎ.ಮುರುಳಿ ಸಿನ್ಹಾ ಅವರನ್ನು ಸ್ವಾಗತಿಸಿದರು. ಶ್ರೀ ಮಠದ ಆನೆಗಳಾದ ಲಕ್ಷಮಿ, ಜಯಲಕ್ಷಮಿ ಮನೋಜ್ ಸಿನ್ಹಾ ದಂಪತಿಯನ್ನು ಆಶೀರ್ವದಿಸಿತು.

ನಂತರ ಕುಟುಂಬ ಸಮೇತರಾಗಿ ಶ್ರೀ ಶಾರದಾಂಬಾ ದೇವಾಲಯಕ್ಕೆ ತೆರಳಿ ಶ್ರೀ ಪೀಠದ ಅಧಿದೇವತೆ ಶ್ರೀ ಶಾರದಾಂಬೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ವಿಶೇಷ ಪೂಜೆಯ ನಂತರ ಮಹಾಮಂಗಳಾರತಿ ಸ್ವೀಕರಿಸಿದರು. ನಂತರ ಶ್ರೀ ಮಠದ ಆವರಣದಲ್ಲಿರುವ ಶ್ರೀ ತೋರಣಗಣಪತಿ, ಶ್ರೀ ಶಂಕರಾಚಾರ್ಯ, ಶ್ರೀ ವಿದ್ಯಾಶಂಕರ ದೇವಾಲಯಗಳಿಗೆ ತೆರಳಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ನಂತರ ಶ್ರೀಮಠದ ನರಸಿಂಹವನದಲ್ಲಿರುವ ಶ್ರೀ ಗುರುಭವನಕ್ಕೆ ತೆರಳಿ ಜಗದ್ಗುರು ಶ್ರೀ ಭಾರತೀ ತೀರ್ಥರು ಹಾಗೂ ಶ್ರೀ ವಿಧುಶೇಖರ ಭಾರತೀ ತೀರ್ಥರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ನಂತರ ಶೃಂಗೇರಿ ಕೆರೆಕಟ್ಟೆ ಎಸ್‌ಕೆ ಬಾರ್ಡರ್ ಮಾರ್ಗವಾಗಿ ಮಂಗಳೂರಿನತ್ತ ತೆರಳಿದರು.

ಬಿಗಿ ಬಂದೋಬಸ್ತ್:

ರಾಜ್ಯಪಾಲ ಭೇಟಿ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಗುರುವಾರ ಮಧ್ಯಾಹ್ನದಿಂದಲೇ ಬಿಗಿ ಪೋಲೀಸ್ ಬಂದೋಬಸ್ತ್‌ ಆಯೋಜಿಸಲಾಗಿತ್ತು. ಎಸ್‌ಕೆ ಬಾರ್ಡರ್ ಕೆರೆಕಟ್ಟೆಯಿಂದ ಶೃಂಗೇರಿಯವರೆಗೂ ಅಲ್ಲಲ್ಲಿ ಪೋಲೀಸ್ ಪಡೆಯನ್ನು ನಿಯೋಜಿಸಲಾಗಿತ್ತು. ಮಾರ್ಗದುದ್ದಕ್ಕೂ ತೀವ್ರ ನಿಗಾ ಕಟ್ಟೆಚ್ಚರ ವಹಿಸಿ ಭದ್ರತೆ ಹೆಚ್ಚಿಸಲಾಗಿತ್ತು. ಶುಕ್ರವಾರ ಬೆಳಿಗ್ಗೆಯೂ ಬಿಗಿ ಬಂದೋಬಸ್ತ್ ಆಯೋಜಿಸಲಾಗಿತ್ತು. ಶೃಂಗೇರಿ ಬಸ್ ನಿಲ್ದಾಣದಿಂದ ಶ್ರೀ ಮಠದವರೆಗೂ ಭದ್ರತೆ ಬಿಗಿಗೊಳಿಸಲಾಗಿತ್ತು. ಎಸ್.ಕೆ.ಬಾರ್ಡರ್‌ನಿಂದ ಬೆಳಿಗ್ಗೆ ಪೋಲೀಸ್ ಬೆಂಗಾವಲಿನಲ್ಲಿ ಬಿಗಿ ಭದ್ರತೆಯೊಡನೆ ಶೃಂಗೇರಿಗೆ ಕರೆತರಲಾಯಿತು.

ಭಾರೀ ಮಳೆ:

ಗುರುವಾರ ಸಂಜೆಯಿಂದ ನಗರದಲ್ಲಿ ಭಾರೀ ಮಳೆಯ ಅಬ್ಬರ ಜೋರಾಗಿತ್ತು. ಮಳೆಯ ನಡುವೆಯೂ ಪೋಲೀಸರು ಅಲ್ಲಲ್ಲಿ ಭದ್ರತಾ ನಿಯೋಜನೆಯ ಕಾರ್ಯನಿರ್ವಹಿಸಿದರು.ಶುಕ್ರವಾರವೂ ಭಾರೀ ಮಳೆ ಸುರಿಯಿತು. ಮಳೆಯ ನಡುವೆಯೂ ಶ್ರೀಮಠಕ್ಕೆ ಆಗಮಿಸಿ ಶಾರದಾಂಬೆಯ ದರ್ಶನ ಪಡೆದರು.ಇದೋಂದು ಖಾಸಗಿ ಭೇಟಿ ಎಂದು ತಿಳಿದು ಬಂದಿದೆ.