ಏಪ್ರಿಲ್‌ 22ರಂದು ಕೊಪ್ಪಳಕ್ಕೆ ಜನಾಕ್ರೋಶ ಯಾತ್ರೆ

| Published : Apr 19 2025, 12:32 AM IST

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿ ಕುಂಠಿತವಾಗಿದೆ. ಬೆಲೆ ಏರಿಕೆ ಮೂಲಕ ಜನಸಾಮಾನ್ಯರ ನೆಮ್ಮದಿ ಕಸಿದಿದೆ. ಇದರ ವಿರುದ್ಧ ಜನರ ಧ್ವನಿಯಾಗಿ ಬಿಜೆಪಿ ಜನಾಕ್ರೋಶ ಯಾತ್ರೆ ಆರಂಭಿಸಿದೆ.

ಕೊಪ್ಪಳ:

ರಾಜ್ಯ ಸರ್ಕಾರದ ಬೆಲೆ ಏರಿಕೆ ಹಾಗೂ ಜನ ವಿರೋಧಿ ನೀತಿ ಖಂಡಿಸಿ ಬಿಜೆಪಿ ಆರಂಭಿಸಿರುವ ಜನಾಕ್ರೋಶ ಯಾತ್ರೆ ಏ. 22ರಂದು ಕೊಪ್ಪಳದಲ್ಲಿ ನಡೆಯಲಿದೆ. ಈ ಯಾತ್ರೆಯಲ್ಲಿ 10000ಕ್ಕೂ ಅಧಿಕ ಜನರು ಭಾಗವಹಿಸಲಿದ್ದಾರೆಂದು ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌. ನವೀನ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 4 ಗಂಟೆಗೆ ನಡೆಯುವ ಈ ಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಗೋವಿಂದ ಕಾರಜೋಳ, ಸಿ.ಟಿ. ರವಿ, ಶ್ರೀರಾಮುಲು ಸೇರಿದಂತೆ ಮಾಜಿ ಸಚಿವರು, ಶಾಸಕರು, ಪದಾಧಿಕಾರಿಗಳು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ನಗರದ ಅಶೋಕ ವೃತ್ತದಿಂದ ಆರಂಭವಾಗುವ ಜನಾಕ್ರೋಶ ಯಾತ್ರೆ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಬಸವೇಶ್ವರ ವೃತ್ತದಲ್ಲಿ ಪೂರ್ಣಗೊಳ್ಳಲಿದೆ ಎಂದರು.

ಅಭಿವೃದ್ಧಿ ಕುಂಠಿತ:

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿ ಕುಂಠಿತವಾಗಿದೆ. ಬೆಲೆ ಏರಿಕೆ ಮೂಲಕ ಜನಸಾಮಾನ್ಯರ ನೆಮ್ಮದಿ ಕಸಿದಿದೆ. ಇದರ ವಿರುದ್ಧ ಜನರ ಧ್ವನಿಯಾಗಿ ಬಿಜೆಪಿ ಜನಾಕ್ರೋಶ ಯಾತ್ರೆ ಆರಂಭಿಸಿದೆ ಎಂದ ಅವರು, ಬೆಲೆ ಏರಿಕೆ ಬಿಸಿ ಬಡವರಿಗೆ ತಲುಪಿದ್ದು ಜೀವನ ನಡೆಸುವುದು ಕಷ್ಟವಾಗಿದೆ. ದೇಶದಲ್ಲಿ ಅತ್ಯಧಿಕ ಹಣದುಬ್ಬರ ರಾಜ್ಯದಲ್ಲಿದ್ದು ಕರ್ನಾಟಕ ಅತ್ಯಂತ ದುಬಾರಿ ರಾಜ್ಯವಾಗಿದೆ. ಜನಸಾಮಾನ್ಯರ ನೋವಿಗೆ ಸ್ಪಂದಿಸಬೇಕಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಲೆ ಏರಿಕೆ ಮೂಲಕ ಅವರ ಜೀವನಕ್ಕೆ ಬರೆ ಎಳೆದಿದ್ದಾರೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಕುಸಿದಿದ್ದು ಮಹಿಳೆಯರಿಗೆ ರಕ್ಷಣೆ ಇಲ್ಲದಂತೆ ಆಗಿದೆ ಎಂದು ಆರೋಪಿಸಿದ ಅವರು, ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಅದಕ್ಕೆ ಹಣ ಹೊಂದಿಸಲು ಸರ್ಕಾರ ಪರದಾಡುತ್ತಿದೆ. ಇದೀಗ ಎಸ್ಸಿ-ಎಸ್ಟಿಗೆ ಮೀಸಲಿಟ್ಟ ಹಣವನ್ನು ಬಳಸಿಕೊಂಡಿದೆ. ಈ ಮೂಲಕ ಆ ಸಮುದಾಯದ ಅಭಿವೃದ್ಧಿಗೆ ಪೆಟ್ಟು ನೀಡಿದ್ದಾರೆ ಎಂದ ಅವರು, ಬೆಲೆ ಏರಿಕೆ ಸೇರಿದಂತೆ ವಿವಿಧ ವಿಷಯಗಳನ್ನು ಮರೆಮಾಚಲು ಇದೀಗ ಜಾತಿಗಣತಿಯನ್ನು ಕವಚವಾಗಿಟ್ಟುಕೊಂಡಿದ್ದಾರೆ. ಇದು ಮುಖ್ಯಮಂತ್ರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದರು.

ಬೆಲೆ ಏರಿಕೆಯಿಂದ ತತ್ತರಿಸಿರುವ ಜಸನಾಮಾನ್ಯರ ಸಮಸ್ಯೆ ಕುರಿತು ಅಧಿವೇಶನಲ್ಲಿ ಚರ್ಚಿಸಿಲ್ಲ. ಈ ಕುರಿತು ಅಧಿವೇಶನದ ಅವಧಿ ಹೆಚ್ಚಿಸುವಂತೆ ಮನವಿ ಮಾಡಿದರೂ ಮುಖ್ಯಮಂತ್ರಿ ಸ್ಪಂದಿಸಲಿಲ್ಲ ಎಂದು ಆರೋಪಿಸಿದರು.

ರಾಜ್ಯದಲ್ಲಿಯೇ ಅತ್ಯಂತ ದುಬಾರಿ ಜೀವನ ಬೆಂಗಳೂರಿನ ಜನರಾದ್ದಾಗಿದೆ. ಅಧಿವೇಶನದಲ್ಲಿ ದಾಖಲೆ ಸಮೇತ ನಮ್ಮ ನಾಯಕರು ಮಾತನಾಡಿದ್ದಾರೆ. ಬಜೆಟ್‌ ಮೇಲಿನ ಚರ್ಚೆಗೆ ಮಾತನಾಡಲು ನಮಗೆ ಅವಕಾಶವನ್ನೇ ನೀಡಲಿಲ್ಲ ಎಂದು ದೂರಿದ ಅವರು, ರಾಜ್ಯದ ಸಾಲ ಇದೀಗ 2.5 ಲಕ್ಷ ಕೋಟಿ ಆಗಿದ್ದು ಸರ್ಕಾರವನ್ನು ಬಡಿದೆಬ್ಬಿಸಲು ಬಿಜೆಪಿ ಜನಾಕ್ರೋಶ ಯಾತ್ರೆ ಹಮ್ಮಿಕೊಂಡಿದ್ದು ಇದರಲ್ಲಿ ಸಾರ್ವಜನಿಕರು ಭಾಗವಹಿಸುತ್ತಿದ್ದಾರೆ ಎಂದರು.

ಕೇಂದ್ರ ಸರ್ಕಾರ ಜನರಿಗೆ ಮೂಲಭೂತ ಸೌಲಭ್ಯ ಹೆಚ್ಚಿಸಿದ್ದರಿಂದ ಸಿಲಿಂಡರ್‌ ಬೆಲೆಯಲ್ಲಿ ಅಲ್ಪ ಏರಿಕೆ ಮಾಡಿದೆ. ಅದನ್ನೆ ದೊಡ್ಡದಾಗಿ ಬಿಂಬಿಸುವ ಕಾಂಗ್ರೆಸ್‌ ಸರ್ಕಾರ, ತಮ್ಮ ಅವಧಿಯಲ್ಲಿ ಎಷ್ಟು ಬೆಲೆ ಏರಿಕೆ ಮಾಡಲಾಗಿದೆ ಎಂದು ದಾಖಲೆ ನೀಡಿದರೂ ಒಪ್ಪಿಕೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ವೆಂಕಟೇಶ ಹಾಲವರ್ತಿ, ಡಾ. ಬಸವರಾಜ ಕ್ಯಾವಟರ್, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸುಗೂರು, ಎಂಎಲ್‌ಸಿ ಹೇಮಲತಾ ನಾಯಕ, ಚಂದ್ರಶೇಖರ ಕವಲೂರು, ಮಹಾಂತೇಶ ಪಾಟೀಲ ಇದ್ದರು.