ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಜು.13ರಂದು ನಡೆಯಬೇಕಿದ್ದ 2025-26ನೇ ಸಾಲಿನ ಪಿಎಚ್‌ಡಿ ಪ್ರವೇಶ ಪರೀಕ್ಷೆಯನ್ನು ತಾತ್ಕಾಲಿಕವಾಗಿ ರದ್ದುಪಡಿಸಿ ವಿವಿ ಕುಲಸಚಿವರು ಆದೇಶಿಸಿದ್ದಾರೆ.
ಹಾವೇರಿ: ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಜು.13ರಂದು ನಡೆಯಬೇಕಿದ್ದ 2025-26ನೇ ಸಾಲಿನ ಪಿಎಚ್‌ಡಿ ಪ್ರವೇಶ ಪರೀಕ್ಷೆಯನ್ನು ತಾತ್ಕಾಲಿಕವಾಗಿ ರದ್ದುಪಡಿಸಿ ವಿವಿ ಕುಲಸಚಿವರು ಆದೇಶಿಸಿದ್ದಾರೆ.
ಜಾನಪದ ವಿವಿಯಲ್ಲಿ ಜು.13ರಂದು ಬೆಳಗ್ಗೆ 11.30ರಿಂದ ಪಿಎಚ್‌ಡಿ ಪ್ರವೇಶ ಪರೀಕ್ಷೆ ಆಯೋಜಿಸಲಾಗಿತ್ತು. ಆದರೆ, ಕುಲಪತಿ ಟಿ.ಎಂ. ಭಾಸ್ಕರ್ ಅವರ ಅಧಿಕಾರ ಅವಧಿ ಕೇವಲ 4 ದಿನ ಉಳಿದಿರುವಾಗ ಪ್ರವೇಶ ಪರೀಕ್ಷೆ ನಡೆಸುತ್ತಿರುವುದು ಆಕ್ಷೇಪಕ್ಕೆ ಕಾರಣವಾಗಿತ್ತು. ಅಲ್ಲದೇ ಸರ್ಕಾರ ಅನುಮೋದನೆ ನೀಡಿರುವ ಕೋರ್ಸ್‌ಗಳಿಗೆ ಪಿಎಚ್‌ಡಿ ಪ್ರವೇಶಾತಿ ಕರೆಯಲಾಗಿದೆಯೇ, ಯುಜಿಸಿ ಮಾನದಂಡ ಅನುಸರಿಸಲಾಗಿದೆಯೇ ಹಾಗೂ ರೋಸ್ಟರ್ ಪಾಲನೆ ಮಾಡಲಾಗಿದೆಯೇ ಎಂಬ ಬಗ್ಗೆ ಮಾಹಿತಿ ನೀಡುವಂತೆ ಉನ್ನತ ಶಿಕ್ಷಣ ಇಲಾಖೆ ಕೇಳಿತ್ತು. ಈ ವಿಷಯಗಳಿಗೆ ಸರ್ಕಾರಕ್ಕೆ ಸೂಕ್ತ ವರದಿ ನೀಡಬೇಕಿರುವುದರಿಂದ ಪ್ರವೇಶಾತಿ ಪರೀಕ್ಷೆಯನ್ನು ರದ್ದುಗೊಳಿಸಿ ಪ್ರಭಾರ ಆಡಳಿತ ಕುಲಸಚಿವರು ಆದೇಶಿಸಿದ್ದಾರೆ.ಪಿಎಚ್‌ಡಿ ಪ್ರವೇಶಾತಿ ಕುರಿತಂತೆ ಸರ್ಕಾರ ಕೆಲವು ಸ್ಪಷ್ಪನೆ ಕೇಳಿದೆ. ಕುಲಪತಿಗಳು ಸರ್ಕಾರಕ್ಕೆ ಸ್ಪಷ್ಟನೆ ಸಲ್ಲಿಸಬೇಕಿದೆ. ಅದಕ್ಕಾಗಿ ಜು.13ರಂದು ನಡೆಯಬೇಕಿದ್ದ ಪಿಎಚ್‌ಡಿ ಪ್ರವೇಶಾತಿ ಪರೀಕ್ಷೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ವಿವಿ ಕುಲಸಚಿವ ನವೀನ್ ಎಚ್.ವಿ. ಹೇಳಿದರು.