ಕನ್ನಡಪ್ರಭ ವಾರ್ತೆ ಪಾಂಡವಪುರ

ಜನರೊಂದಿಗೆ ಜನತಾದಳ ಹಾಗೂ ಜೆಡಿಎಸ್ ಪಕ್ಷದ 25ನೇ ವರ್ಷದ ಬೆಳ್ಳಿ ಹಬ್ಬವನ್ನು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಮೇ 7ರಂದು ಪಟ್ಟಣದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮನವಿ ಮಾಡಿದರು.

ಪಟ್ಟಣದ ಟಿಎಪಿಸಿಎಂಎಸ್ ರೈತಸಭಾಂಗಣದಲ್ಲಿ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿ, ಮಂಡ್ಯ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಜನರೊಂದಿಗೆ ಜನತಾದಳ ಕಾರ್ಯಕ್ರಮ ನಡೆಸುವ ಮೂಲಕ ಪಕ್ಷ ಸಂಘಟನೆ ಮಾಡಲಾಗಿದೆ.‌ ನಮ್ಮ ಕ್ಷೇತ್ರದಲ್ಲೂ ಈ ಹಿಂದೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಮಳವಳ್ಳಿಯಲ್ಲಿ ಸುತ್ತೂರು ಕಾರ್ಯಕ್ರಮಕ್ಕೆ ರಾಷ್ಟ್ರಪತಿಗಳು ಹಾಗೂ ಮೇಲುಕೋಟೆಗೆ ಉಪರಾಷ್ಟ್ರಪತಿಗಳು ಆಗಮಿಸಿದ ಹಿನ್ನೆಲೆಯಿಂದಾಗಿ ಕಾರ್ಯಕ್ರಮ ಮಂದೂಡಲಾಗಿತ್ತು. ಮತ್ತೆ ಈಗ ಆಯೋಜಿಸಲಾಗುತ್ತಿದೆ ಎಂದರು.

ಪಟ್ಟಣದ ಪಾಂಡವ ಕ್ರೀಡಾಂಗಣ ಮುಂಭಾಗದ ಆವರಣದಲ್ಲಿ ಬೃಹತ್ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಅಂದು ಮಂಡ್ಯ ಸರ್ಕಲ್‌ನಿಂದ ಬೆಳಗ್ಗೆ 10 ಗಂಟೆಗೆ ತೆರೆದ ವಾಹನದ ಮೂಲಕ ಬೃಹತ್ ಮೆರವಣಿಗೆ ಮೂಲಕ ನಿಖಿಲ್ ಕುಮಾರಸ್ವಾಮಿ ಅವರನ್ನು ವೇದಿಕೆಗೆ ಕರೆತರಲಾಗುವುದು. ವಾಹನಗಳ ಪಾರ್ಕಿಂಗ್‌ ಮಾಡಲು ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಲಾಗುವುದು. ಪ್ರತಿ ಜಿಪಂಗೆ 10 ಮಂದಿ ಮುಖಂಡರನ್ನು ನೇಮಕ ಮಾಡಲಾಗಿದೆ. ಜನರನ್ನು ಕರೆತರುವ ಜವಾಬ್ದಾರಿ ನೀಡಲಾಗಿದೆ ಎಂದರು.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ತಾಯಿ ಹೃದಯಿ, ಬಡವರು, ಮಹಿಳೆಯರು, ರೈತರು ಹಾಗೂ ವಿಕಲಚೇತನರ ಮೇಲೆ ವಿಶೇಷ ಅಭಿಮಾನ ಇಟ್ಟುಕೊಂಡಿದ್ದಾರೆ. ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರು ಸಹೃದಯಿ ವ್ಯಕ್ತಿತ್ವ ರೂಡಿಸಿಕೊಂಡಿದ್ದಾರೆ. ಅಂದಿನ ಕಾರ್ಯಕ್ರಮಕ್ಕೆ ರಾಜ್ಯದ ನಾಯಕರಾದ ಸುರೇಶ್ ಬಾಬು, ಕೃಷ್ಣಾರೆಡ್ಡಿ ಸೇರಿದಂತೆ ಜಿಲ್ಲೆಯ ಎಲ್ಲಾ ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು, ಮುಖಂಡರು ಭಾಗವಹಿಸಲಿದ್ದಾರೆ ಎಂದರು.


ಜಿಪಂ‌ ಮಾಜಿ ಸದಸ್ಯ ಎಚ್.ಮಂಜುನಾಥ್ ಮಾತನಾಡಿ, ಜನರೊಂದಿಗೆ ಜನತಾದಳ ಕಾರ್ಯಕ್ರಮವು ಪಕ್ಷದ ಸಂಘಟನೆಯ ಜತೆಗೆ ವಿರೋಧ ಪಕ್ಷದ ಕಾಂಗ್ರೆಸ್ ಸರ್ಕಾರದ ದುರಾಳಿತದ ಬಗ್ಗೆ ಜನರಿಗೆ ಅರಿವು ಮೂಡಿಸುವುದಾಗಿದೆ. ಈಗಾಗಲೇ ದೇಶದಲ್ಲಿ ಕಾಂಗ್ರೆಸ್ ನಿರ್ಮೂಲನೆ ಹಂಚಿನಲ್ಲಿದೆ‌. ವಿರೋಧ ಪಕ್ಷವಾಗಿಯೂ ಉಳಿಯಲು ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದರು.

ಸಂಸತ್‌ನಲ್ಲಿ‌ ನಡೆದ ಮಹಿಳಾ ಮೀಸಲಾತಿಯ ಪರವಾದ ತಿದ್ದುಪಡಿಸಿಗೆ ವಿರೋಧ ವ್ಯಕ್ತಪಡಿಸುವ‌ ಮೂಲಕ ಮಹಿಳಾ ವಿರೋಧಿ ಎಂಬುದನ್ನು ಸಾಬೀತುಪಡಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ದೇಶದ ಮಹಿಳೆಯರು ತಕ್ಕಪಾಠಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೇಲುಕೋಟೆ ಕ್ಷೇತ್ರದಲ್ಲಿ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಪಕ್ಷವನ್ನು ಸಂಘಟಿಸಿದ್ದಾರೆ. ಕ್ಷೇತ್ರದಲ್ಲಿ ನಡೆದ ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುವ ಮೂಲಕ ಪಕ್ಷವನ್ನು ಬಲಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ನಡೆಯುವ ಚುನಾವಣೆಗಳಲ್ಲಿ ಈ ಫಲಿತಾಂಶವೇ ದಿಕ್ಸೂಚಿಯಾಗಲಿದೆ ಎಂದರು.

ಸಭೆಯಲ್ಲಿ ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್, ಜಿಪಂ‌ ಮಾಜಿ ಸದಸ್ಯ ಸಿ.ಅಶೋಕ್, ಟಿಎಪಿಸಿಎಂಎಸ್ ಅಧ್ಯಕ್ಷ ಗಿರೀಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಪುಟ್ಟಸ್ವಾಮೀಗೌಡ, ಯೋಗೇಶ್, ನಂಜೇಗೌಡ, ದ್ಯಾವಪ್ಪ, ಎಸ್.ಆನಂದ್, ಸಿ.ಎಸ್.ಗೋಪಾಲಗೌಡ, ಆರ್.ಸೋಮಶೇಖರ್, ಗಿರೀಶ್ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.