ಸಾರಾಂಶ
ಮುಳಗುಂದ: ಜನತಾ ದರ್ಶನ ಕಾರ್ಯಕ್ರಮ ಇದೊಂದು ರೀತಿಯಲ್ಲಿ ಬಹಿರಂಗ ಸಂಸತ್ ಅಧಿವೇಶನವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.ಪಟ್ಟಣದ ಎಸ್.ಜೆ.ಜೆ.ಎಂ ಸಂಯುಕ್ತ ಪಪೂ ಮಹಾವಿದ್ಯಾಲಯದ ಆವರಣದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರದ ಸೌಲಭ್ಯಗಳು ನೇರವಾಗಿ ಅರ್ಹ ಫಲಾನುಭವಿಗಳಿಗೆ ಲಭ್ಯವಾಗಬೇಕು, ದಲ್ಲಾಳಿಗಳ ಮಧ್ಯಪ್ರವೇಶ ಇಲ್ಲದ ನೈಜ ಜನಪರ ಆಡಳಿತವೇ ಸರ್ಕಾರದ ಗುರಿ ಎಂದರು.
ಅಧಿಕಾರಿಗಳು ಮತ್ತು ಜನತೆಯ ನಡುವೆ ನಡೆಯುವಂತಹ ಪರೀಕ್ಷೆಯಂತೆ. ಅಧಿಕಾರಿಗಳು ಜನತೆಯ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತಾ ಇದ್ದಾರೆ. ಜನಸಾಮಾನ್ಯರು ತಮ್ಮ ಅಹವಾಲುಗಳನ್ನು ನೇರವಾಗಿ ಮಂಡಿಸಬಹುದಾದ ವೇದಿಕೆಯಾಗಿ ಜನತಾ ದರ್ಶನ ರೂಪುಗೊಂಡಿದ್ದು, ಮುಳಗುಂದದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಸಾರ್ವಜನಿಕರಿಂದ ಸ್ವೀಕರಿಸಿದ ಹಲವಾರು ಅರ್ಜಿಗಳಿಗೆ ಸ್ಥಳದಲ್ಲೇ ಸ್ಪಂದನೆ ಸಿಗಲಿದೆ ಎಂದರು.ಹಿಂದಿನ ಜನತಾ ದರ್ಶನಗಳಲ್ಲಿ 951 ಅರ್ಜಿಗಳು ಪ್ರಥಮ ಹಂತದಲ್ಲಿ, 352 ಅರ್ಜಿಗಳು ದ್ವಿತೀಯ ಹಂತದಲ್ಲಿ ಮತ್ತು 855 ಅರ್ಜಿಗಳು ತೃತೀಯ ಹಂತದಲ್ಲಿ ಸ್ವೀಕೃತವಾಗಿವೆ. ಎಲ್ಲಾ ಅಹವಾಲುಗಳು ತಾರ್ಕಿಕವಾಗಿ ಅಂತ್ಯಗೊಳಿಸಲ್ಪಟ್ಟಿವೆ ಎಂದರು.
ಗದಗ ಜಿಲ್ಲೆ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಶೇ.98ರಷ್ಟು ಸಾಧನೆ ಮಾಡಿದ್ದು, ಇದು ರಾಜ್ಯ ಮಟ್ಟದಲ್ಲಿ ಮಾದರಿಯಾಗಿದೆ. ಪ್ರತಿ ಕುಟುಂಬಕ್ಕೆ ತಿಂಗಳಿಗೆ ರು.5.000 ತಲುಪುತ್ತಿದೆ. ಇದು ದೇಶದ ಮಟ್ಟದಲ್ಲಿ ಕ್ರಾಂತಿಕಾರಿಯಾದ ಹೆಜ್ಜೆಯಾಗಿದೆ. ರಾಜ್ಯದಲ್ಲಿ ಇದುವರೆಗೆ 54 ಸಾವಿರ ಕೋಟಿ ರು. ಖರ್ಚುಮಾಡಿ ಭ್ರಷ್ಟಾಚಾರ ರಹಿತವಾಗಿ ಈ ಯೋಜನೆ ಅನುಷ್ಠಾನಗೊಳ್ಳುತ್ತಿದೆ ಎಂದರು.ಅಧಿಕಾರಿಗಳಲ್ಲಿ ಸೇವಾಮನೋಭಾವನೆ ಬೆಳೆಯಬೇಕು. ಪ್ರಜೆಗಳೇ ಪ್ರಭುಗಳು. ಸಂವಿಧಾನ ನಮಗೆ ಅಧಿಕಾರ ನೀಡಿದ್ದು ಸೇವೆಗಾಗಿ, ದರ್ಪ ತೋರಿಸಲು ಅಲ್ಲ. ಸೌಜನ್ಯ ಹಾಗೂ ಸಹಾನುಭೂತಿಯೊಂದಿಗೆ ಆಡಳಿತ ನಡೆಯಬೇಕು ಎಂಬ ಆಶಯ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಥರ್ಡ್ ಐ ತಂತ್ರಜ್ಞಾನದ ಮೂಲಕ ಸಂಚಾರಿ ನಿಯಮಗಳ ಪಾಲನೆ, ಪೊಲೀಸ್ ಮತ್ತು ನಾಗರಿಕರ ನಡುವೆ ಸದ್ಭಾವನೆಯ ಆಧಾರಿತ ಸಂಬಂಧ, ಅಪರಾಧ ನಿಯಂತ್ರಣದತ್ತ ಗದಗ ಜಿಲ್ಲೆಯ ಪೊಲೀಸ್ ಇಲಾಖೆಯ ಸಾಧನೆ ಹಿಗ್ಗಿ ಹೇಳುವಂತಿದೆ. ಈ ಹಿನ್ನೆಲೆಯಲ್ಲಿ ಗೃಹ ಸಚಿವರು 4–5 ಬಾರಿ ಗದಗ ಪೊಲೀಸರನ್ನು ಪ್ರಶಂಸಿಸಿದ್ದಾರೆ ಎಂದು ತಿಳಿಸಿದರು.ಪ್ರತಿ ಗ್ರಾಮಕ್ಕೂ ಸ್ಮಶಾನಗಳು:ಕಳೆದ 75 ವರ್ಷಗಳಲ್ಲಿ ಅಸಾಧ್ಯವಾಗಿದ್ದ ಎಲ್ಲಾ ಗ್ರಾಮಗಳಿಗೆ ಸ್ಮಶಾನ ನಿರ್ಮಾಣದ ಗುರಿ ಇಂದು ಸಾಕಾರವಾಗುತ್ತಿದೆ. ಗದಗ ವಿಧಾನಸಭಾ ಕ್ಷೇತ್ರದ ಎಲ್ಲ ಗ್ರಾಮಗಳಿಗೆ ಸ್ಮಶಾನಗಳನ್ನು ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ಮುಂದಿನ ಹಂತದಲ್ಲಿ ಎಲ್ಲ ಗ್ರಾಮಗಳಿಗೂ ಸ್ಮಶಾನ ಒದಗಿಸುವ ಗುರಿ ಹೊಂದಲಾಗಿದೆ. ಈ ದಿಸೆಯಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ ಎಂದರು.
ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಮಾತನಾಡಿ, ಜನರಿಗಾಗಿ ಜನರಿಗೊಸ್ಕರ ಸರ್ಕಾರ ಎಂಬುದನ್ನು ಜನತಾ ದರ್ಶನ ಮೂಲಕ ಸಾಕಾರಗೊಳಿಸಲಾಗುತ್ತಿದೆ. ಜನರ ಅಹವಾಲುಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸುವ ಹೆಮ್ಮೆಯ ಕಾರ್ಯಕ್ರಮ ಇಂದು ಮುಳಗುಂದದಲ್ಲಿ ನಡೆಯುತ್ತಿದೆ ಎಂದರು.ಈ ವೇಳೆ ವೃದ್ಧಾಪ್ಯ ವೇತನ, ಆಶ್ರಯ ಯೋಜನೆ, ಹಕ್ಕುಪತ್ರ ವಿತರಣೆ, ಗ್ರಾಮೀಣ ಭಾಗಗಳಲ್ಲಿ ರಸ್ತೆ ಅಭಿವೃದ್ಧಿ, ಸ್ಮಶಾನ, ನಾಡಕಚೇರಿ, ರೈತ ಸಂಪರ್ಕ ಕೇಂದ್ರ, ಎಸ್.ಬಿ.ಐ. ಶಾಖೆ ತೆರೆಯುವುದು ಸೇರಿದಂತೆ ವಿವಿಧ ಸಮಸ್ಯೆಗಳ ಅಹವಾಲುಗಳು ಸಾರ್ವಜನಿಕರಿಂದ ಸಲ್ಲಿಕೆಯಾದವು. ಪಪಂ ಅಧ್ಯಕ್ಷೆ ಯಲ್ಲವ್ವ ಕವಲೂರ, ಸದಸ್ಯ ಷಣ್ಮುಖಪ್ಪ ಬಡ್ನಿ, ಮುಳಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಸುಂಕಾಪುರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಜಿ, ಜಿಪಂ ಸಿಇಒ ಭರತ್.ಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಎಸಿ ಗಂಗಪ್ಪ, ಡಿಸಿಎಫ್ ಸಂತೋಷಕುಮಾರ್ ಹಾಗೂ ಇತರ ಅಧಿಕಾರಿಗಳು ಇದ್ದರು.