ಸಾರಾಂಶ
ಧಾರವಾಡ: ಸಾಮಾನ್ಯವಾಗಿ ಜನತಾ ದರ್ಶನಗಳ ಸಂಖ್ಯೆ ಹೆಚ್ಚಿದಷ್ಟು ಸಮಸ್ಯೆಗಳ ಸಂಖ್ಯೆ ಕಡಿಮೆಯಾಗಬೇಕು. ಆದರೆ, ಇಲ್ಲಿಯ ವರೆಗೆ ಜಿಲ್ಲೆಯಲ್ಲಿ ಒಟ್ಟು 17 ಜನತಾ ದರ್ಶನಗಳು ಮುಗಿದು ಕಲಘಟಗಿಯಲ್ಲಿ ಮಂಗಳವಾರ 18ನೇ ಜನತಾ ದರ್ಶನ ನಡೆದರೂ ಜನರ ಸಮಸ್ಯೆಗಳಿಗೇನು ಕೊರತೆ ಇರಲಿಲ್ಲ..!
ಕಲಘಟಗಿಯ ಬಮ್ಮಿಗಟ್ಟಿ ಕ್ರಾಸ್ ಹತ್ತಿರದ ಪಟ್ಟಣ ಪಂಚಾಯಿತಿಯ ಸಾಂಸ್ಕೃತಿಕ ಭವನದಲ್ಲಿ ಕೈಯಲ್ಲಿ ತಮ್ಮ ತೊಂದರೆ, ಸಮಸ್ಯೆಗಳ ಬಗ್ಗೆ ಮಾಹಿತಿಯೊಂದಿಗಿನ ಮನವಿ ಪತ್ರ ಹಿಡಿದು ಪಾಳಿ ಹಚ್ಚಿ ಅಂತೂ ಇಂತೂ ಸಚಿವ ಸಂತೋಷ ಲಾಡ್ ಅವರನ್ನು ಭೇಟಿಯಾಗಿ ತಮ್ಮ ತೊಂದರೆಗಳನ್ನು ಹೇಳಿಕೊಂಡು ಪರಿಹಾರದ ಭರವಸೆ ಪಡೆದುಕೊಂಡವರು ಬಹಳಷ್ಟು ಜನರು!ಏನೇನು ಸಮಸ್ಯೆಗಳು?
ಕಿಮ್ಸ್‌ನಲ್ಲಿ ಹೊರ ಗುತ್ತಿಗೆದಾರ ನೌಕರ ಪರಶುರಾಮ್ ಪಾಟೀಲ ನಾಲ್ಕು ತಿಂಗಳಿಂದ ಸಂಬಳ ವಿಳಂಬವಾಗಿದೆ ಎಂದು ಸಚಿವ ಸಂತೋಷ ಲಾಡ್ ಬಳಿ ಅಳಿಲು ತೋಡಿಕೊಂಡರು. ತಕ್ಷಣ ಸಮಸ್ಯೆ ಪರಿಹರಿಸುವಂತೆ ಸಂಸ್ಥೆಯ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಮಾವಿನಕೊಪ್ಪದ ರೆಹಮಾನ ಖಾದರಸಾಬ್ ನದಾಫ್ ಅರಣ್ಯ ಇಲಾಖೆಯಿಂದ ಕೃಷಿ ಭೂಮಿ ಅತಿಕ್ರಮಣ ಎಂದು ಗೋಳು ತೊಡಿಕೊಂಡರು. ಮಿಶ್ರಿಕೋಟಿಯ ಬಸವರಾಜ ಬೆಲ್ಲದ, ಅಪಾರ ಪ್ರಮಾಣದ ಮಳೆಯಿಂದ ಬೆಳೆ ಹಾನಿ ಆಗಿದ್ದು, ಬೆಳೆ ವಿಮೆ ವಿಳಂಬವಾಗಿದೆ ಎಂದರು. ಶಂಕರ ರಾಮು ಲಮಾಣಿ ತಮ್ಮ ಆಸ್ತಿ ಇ ಸ್ವತ್ತು ಮಾಡಿಕೊಳ್ಳಲು ಒಂದು ವರ್ಷದಿಂದ ಅಲೆದಾಟ ಮಾಡುತ್ತಿದ್ದೇನೆ ಎಂದು ಸಚಿವರಲ್ಲಿ ಮನವಿ ಮಾಡಿದರು.ರೇಣುಕಾ ಲಮಾಣಿ, ಹೈನುಗಾರಿಕೆ ಯೋಜನೆಗೆ ಅರ್ಜಿ ಹಾಕಲಾಗಿದ್ದು, ವರ್ಷವಾದರೂ ಯೋಜನೆಗೆ ಆಯ್ಕೆ ಮಾಡಿಲ್ಲ ಎಂದರು. ಜಿನ್ನೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಒಂದು ವರ್ಷದಿಂದ ಕುಡಿಯುವ ನೀರು , ವಿದ್ಯುತ್ ಹಾಗೂ ಯಾವುದೇ ಕನಿಷ್ಠ ಸೌಲಭ್ಯಗಳು ಇಲ್ಲ. ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಸಚಿವರಲ್ಲಿ ಗ್ರಾಮಸ್ಥರು ಮನವಿ ಸಲ್ಲಿಸಿದರು. ಹೀಗೆ ಹತ್ತಾರು ಸಮಸ್ಯೆಗಳನ್ನು ಆಲಿಸಿದ ಸಚಿವ ಸಂತೋಷ ಲಾಡ್ ಸಂಬಂಧಿಸಿದ ಅಧಿಕಾರಿಗಳಿಗೆ ಈ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸೂಚನೆ ನೀಡಿದರು.
ಜನತಾ ದರ್ಶನದಲ್ಲಿ ಪರಿಹಾರಇಲ್ಲಿಯ ವರೆಗಿನ 17 ಜನತಾ ದರ್ಶನಗಳಲ್ಲಿ ಬಂದ ಮೂರು ಸಾವಿರಕ್ಕೂ ಅಧಿಕ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಕೆಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಿದರೆ, ಇತರ ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆಗಳು ಕಡಿಮೆ ಸಮಯದಲ್ಲೇ ಬಗೆಹರಿಸಿವೆ. ವಿಧವಾ ವೇತನ, ವೃದ್ಧಾಪ್ಯ ವೇತನ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಭೂಮಿ ಒತ್ತುವರಿ, ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಸಂಪರ್ಕ, ಸಾರಿಗೆ ವ್ಯವಸ್ಥೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಬಗೆಹರಿಸಲು ಜನತಾ ದರ್ಶನ ಸಹಾಯಕವಾಗಿದೆ ಎಂದು ಸಚಿವ ಲಾಡ್ ಹೇಳಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಅಧ್ಯಕ್ಷ ಎಸ್.ಆರ್. ಪಾಟೀಲ, ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಪಂ ಸಿಇಒ ಭುವನೇಶ ಪಾಟೀಲ, ಎಸ್ಪಿ ಗುಂಜನ್ ಆರ್ಯ, ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗ್, ಹೆಸ್ಕಾಂ ನಿರ್ದೇಶಕರಾದ ವೈಷ್ಣವಿ, ಹುಡಾ ನಿರ್ದೇಶಕ ಸಂತೋಷ ಬಿರಾದಾರ ಮತ್ತಿತರರು ಇದ್ದರು.378 ಅರ್ಜಿಗಳ ಸ್ವೀಕಾರ
ಕಲಘಟಗಿಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಜನತಾ ದರ್ಶನದಲ್ಲಿ ಸಾರ್ವಜನಿಕರಿಂದ 378 ಅರ್ಜಿಗಳು ಸ್ವೀಕಾರಗೊಂಡಿವೆ. ಕೃಷಿ ಇಲಾಖೆ ಒಂದು, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಆರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೂರು, ಶಿಕ್ಷಣ ಇಲಾಖೆ 24, ಸಮಾಜ ಕಲ್ಯಾಣ ಇಲಾಖೆ ಒಂಭತ್ತು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಐದು, ಇಂಧನ ಇಲಾಖೆ ಐದು, ಹಣಕಾಸು ಇಲಾಖೆ ಒಂದು, ಅರಣ್ಯ, ಪರಿಸರ ವಿಜ್ಞಾನ ಮತ್ತು ಪರಿಸರ ಇಲಾಖೆ ಒಂದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 14, ಉನ್ನತ ಶಿಕ್ಷಣ ಇಲಾಖೆ ಒಂದು, ಗೃಹ ಇಲಾಖೆ ಒಂದು, ವಸತಿ ಇಲಾಖೆ 60, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆರು, ಕಾರ್ಮಿಕ ಇಲಾಖೆ ಆರು, ಸಣ್ಣ ನೀರಾವರಿ ಇಲಾಖೆ ಏಳು, ಲೋಕೋಪಯೋಗಿ ಇಲಾಖೆ ನಾಲ್ಕು, ಕಂದಾಯ ಇಲಾಖೆ 121, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 68, ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಎರಡು, ಸಾರಿಗೆ ಇಲಾಖೆ ಏಳು ಹಾಗೂ ನಗರಾಭಿವೃದ್ಧಿ ಇಲಾಖೆ 26 ಅರ್ಜಿಗಳು ಸೇರಿದಂತೆ ಒಟ್ಟಾರೆಯಾಗಿ 378 ಅರ್ಜಿಗಳು ಸ್ವೀಕಾರವಾಗಿವೆ.;Resize=(128,128))
;Resize=(128,128))
;Resize=(128,128))