ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿಯಲ್ಲಿ ಕೈಗಾರಿಕೆಗಾಗಿ ಕೆಐಎಡಿಬಿಯು 2,332 ಎಕರೆ ಭೂಸ್ವಾಧೀನಕ್ಕೆ ಹೊರಡಿಸಿರುವ ಅಂತಿಮ ಅಧಿಸೂಚನೆ ಅಧಿಸೂಚನೆ ವಾಪಸ್ ಪಡೆಯಬೇಕು. ಯಾವ ಕಾರಣಕ್ಕೂ ರೈತರ ಭೂಮಿ ಸ್ವಾಧೀನಪಡಿಸಿಕೊಳ್ಳಬಾರದು.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿಯಲ್ಲಿ ಕೈಗಾರಿಕೆಗಾಗಿ ಕೆಐಎಡಿಬಿಯು 2,332 ಎಕರೆ ಭೂಸ್ವಾಧೀನಕ್ಕೆ ಹೊರಡಿಸಿರುವ ಅಂತಿಮ ಅಧಿಸೂಚನೆ ಅಧಿಸೂಚನೆ ವಾಪಸ್ ಪಡೆಯಬೇಕು. ಯಾವ ಕಾರಣಕ್ಕೂ ರೈತರ ಭೂಮಿ ಸ್ವಾಧೀನಪಡಿಸಿಕೊಳ್ಳಬಾರದು ಎಂದು ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ರೈತ ಸಂಘ ಸೇರಿ ವಿವಿಧ ಸಂಘಟನೆಗಳು ಧರಣಿ ಪ್ರಾರಂಭಿಸಿ ಸೋಮವಾರವಾದ ಇಂದು ಎಂಟನೇ ದಿನಕ್ಕೆ ಕಾಲಿಟ್ಟಿದೆ.ಧರಣಿಯಲ್ಲಿ ರೈತ ಸಂಘಕ್ಕೆ ಬೆಂಬಲ ಸೂಚಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜಿಲ್ಲಾಧ್ಯಕ್ಷ ಯಲುವಹಳ್ಳಿ ಎನ್.ರಮೇಶ್, ದಲಿತ ಸಂಘರ್ಷ ಸಮಿತಿ, ಕನ್ನಡಪರ ಸಂಘಟನೆಗಳು, ಮಾನವ ಹಕ್ಕುಗಳ ಸಂಘಟನೆಗಳು ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳು ಪಾಲ್ಗೊಂಡು ಬೆಂಬಲ ಸೂಚಿಸಿದರು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಮಾತನಾಡಿ, ಸರ್ಕಾರವು ಕೈಗಾರಿಕೆ ಪ್ರಾರಂಭಿಸುವ ನೆಪದಲ್ಲಿ ಫಲವತ್ತಾದ ಕೃಷಿ ಭೂಮಿ ವಶಪಡಿಸಿಕೊಳ್ಳಲು ಮುಂದಾಗಿದೆ. ಈಗಾಗಲೇ ಜಿಲ್ಲೆಯ ಚಿಂತಾಮಣಿ, ಗೌರಿಬಿದನೂರು, ಬಾಗೇಪಲ್ಲಿ, ಕೋಲಾರ ಜಿಲ್ಲೆಯ ವೇಮಗಲ್-ನರಸಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕೈಗಾರಿಕೆಗಾಗಿ ವಶಪಡಿಸಿಕೊಂಡಿರುವ ಸಾವಿರಾರು ಏಕರೆಯಲ್ಲಿ ಸಾಕಷ್ಟು ಕೈಗಾರಿಕೆಗಳನ್ನು ಸ್ತಾಪಿಸದೇ ಜಮೀನುಗಳು ಖಾಲಿಯಾಗಿವೆ. ಅಲ್ಲಿಯ ಖಾಲಿ ಜಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲಿ. ಇಲ್ಲಿಯೂ ಫಲವತ್ತಾದ ಜಮೀನುಗಳಲ್ಲಿ ಕೈಗಾರಿಕೆ ಸ್ತಾಪಿಸುವ ಬದಲು ಬರಡು ಬೂಮಿಯಲ್ಲಿ ಕೈಗಾರಿಕೆ ಸ್ಥಾಪಿಸಲಿ. ಇನ್ನೂ ಶಿಡ್ಲಘಟ್ಟದಲ್ಲಿ ಬೃಹತ್ ರೇಷ್ಮೇ ಮಾರುಕಟ್ಟೆ ನಿರ್ಮಿಸುತ್ತಿದೆ.ಆದರೆ ರೇಷ್ಮೇ ಬೆಳೆಯುವ ಫಲವತ್ತಾದ ಬೂಮಿಯನ್ನು ಕೈಗಾರಿಕೆಗಳಿಗೆ ವಶಪಡಿಸಿಕೊಂಡರೆ ಬೃಹತ್ ರೇಷ್ಮೇ ಮಾರುಕಟ್ಟೆ ನಿರ್ಮಿಸಿ ಪ್ರಯೋಜನವೇನು? ಭೂಮಿಗಾಗಿ ನಾವು ರಕ್ತ ಕೊಟ್ಟೇವು ನಮ್ಮ ಕೃಷಿ ಭೂಮಿ ಕೊಡುವುದಿಲ್ಲ, ಕೃಷಿ ಭೂಮಿ ನಮ್ಮ ಹಕ್ಕು ಎಂದು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಬಲವಂತದ ಭೂಮಿ ವಶಕ್ಕೆ ಮುಂದಾದರೆ ಪರಿಸ್ಥಿತಿ ಬೇರೆ ಆಗಲಿದೆ ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.
ಗ್ಯಾರಂಟಿ ಯೋಜೆನೆಗಳ ಅನುಷ್ಟಾನದ ಜಿಲ್ಲಾಧ್ಯಕ್ಷ ಯಲುವಹಳ್ಳಿ ಎನ್.ರಮೇಶ್ ಮಾತನಾಡಿ, ನಾನು ರೈತರ ಪರ ಇದ್ದೇನೆ. ಈಕುರಿತು ಸರ್ಕಾರದೊಂದಿಗೆ ಮಾತನಾಡಿ ಜಂಗಮಕೋಟೆ ಹೋಬಳಿಯಲ್ಲಿ ಕೆಐಡಿಬಿಗೆ ನೀಡಿರುವ ಜಮೀನು ರೈತರಿಗೆ ವಾಪಸ್ಸು ಕೊಡಿಸುತ್ತೇನೆ ಎಂದರು.ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ''''''''ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ಒಟ್ಟು 2,332 ಎಕರೆ ಭೂ ಸ್ವಾಧೀನಕ್ಕೆ ಸರ್ಕಾರ ಮುಂದಾಗಿದೆ. ನಾವು ಜಮೀನು ನೀಡುವುದಿಲ್ಲ ಎಂದು ಸಾಗುವಳಿ ನಾಡುವ ರೈತರು ಹೇಳಿದರೂ ಬಲವಂತದಿಂದ ಜಮೀನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಯಾವುದೇ ಕಾರಣಕ್ಕೂ ಜಮೀನು ನೀಡುವುದಿಲ್ಲ ಎಂದು ಹೇಳಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಎಚ್.ಪಿ. ರಾಮನಾಥರೆಡ್ಡಿ, ಮಾನವ ಹಕ್ಕುಗಳ ಸಮಿತಿ ಅಧ್ಯಕ್ಷ ಸಿ.ಎಂ. ಬೈರೇಗೌಡ, ಬಿಜೆಪಿ ತಾಲೂಕು ಮೋರ್ಚಾ ಅಧ್ಯಕ್ಷ ಸಿಕಲ್ ಆನಂದ ಗೌಡ, ಡಿಎಸ್ಎಸ್ ಜಿಲ್ಲಾ ಸಂಚಾಲಕ ವೆಂಕಟೇಶ್, ಜಿಲ್ಲಾ ಕಾರ್ಯದರ್ಶಿ ನೆಲಮಾಕಲಹಳ್ಳಿ ಗೋಪಾಲ್, ಜಿಲ್ಲಾ ಉಪಾಧ್ಯಕ್ಷ ಮುನಿನಂಜಪ್ಪ, ತಾದೂರು ಮಂಜುನಾಥ್, ಹೀರೆ ಬಲ್ಲ ಕೃಷ್ಣಪ್ಪ, ಬೊಂಬೆ ಗೌಡ್ರು ಆಂಜನಪ್ಪ, ನಂಜುಂಡಪ್ಪ, ದೇವರಾಜು, ಭರತ್, ನಾರಾಯಣಸ್ವಾಮಿ, ಶಾಂತಕುಮಾರ್, ಅಂಬಿಕಾ, ಲಕ್ಷ್ಮೀದೇವಮ್ಮ, ಭಾಗ್ಯಮ್ಮ, ಮೋಹನ್, ಮಂಜುನಾಥ್, ಹೆಣ್ಣಂಗೂರು ಮೂರ್ತಿ,ರಾಘವೇಂದ್ರ, ರಾಜಣ್ಣ, ಸೇರಿದಂತೆ ನೂರಾರು ರೈತರು ಇದ್ದರು. ಸಿಕೆಬಿ-2 ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಸೀಕಲ್ ರಾಮಚಂದ್ರಗೌಡ ಮಾತನಾಡಿದರು.