ಸಾಹಿತ್ಯ ಲೋಕ ಶ್ರೀಮಂತಗೊಳಿಸಿದ ಸಾಹಿತಿ ಜನವಾಡಕರ್: ಸಿದ್ರಾಮ ಸಿಂಧೆ

| Published : Sep 15 2025, 01:00 AM IST

ಸಾರಾಂಶ

ಸಾಹಿತ್ಯದ ವಿಭಿನ್ನ ಪ್ರಕಾರಗಳಲ್ಲಿ ಕೃತಿಗಳನ್ನು ಪ್ರಕಟಿಸಿ ಕನ್ನಡ ಸಾಹಿತ್ಯ ಲೋಕವನ್ನು ಹಿರಿಯ ಸಾಹಿತಿ ಎಸ್. ಎಂ. ಜನವಾಡಕರ್ ಅವರು ಶ್ರೀಮಂತಗೊಳಿಸಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಸಿಂಧೆ ಹೇಳಿದರು.

ಕನ್ನಡಪ್ರಭ ವಾರ್ತೆ ಬೀದರ್

ಸಾಹಿತ್ಯದ ವಿಭಿನ್ನ ಪ್ರಕಾರಗಳಲ್ಲಿ ಕೃತಿಗಳನ್ನು ಪ್ರಕಟಿಸಿ ಕನ್ನಡ ಸಾಹಿತ್ಯ ಲೋಕವನ್ನು ಹಿರಿಯ ಸಾಹಿತಿ ಎಸ್. ಎಂ. ಜನವಾಡಕರ್ ಅವರು ಶ್ರೀಮಂತಗೊಳಿಸಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಸಿಂಧೆ ಹೇಳಿದರು.

ಅವರು ನಗರದ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಲ್ಲಿರುವ ಮಹಾಲಕ್ಷ್ಮಿ ಸಭಾಂಗಣದಲ್ಲಿ ಭಾನುವಾರ ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನ ಬೀದರ್ ಅವರ ಆಶ್ರಯದಲ್ಲಿ ಹಿರಿಯ ಸಾಹಿತಿ ಎಸ್. ಎಂ. ಜನವಾಡಕರ್ ಅವರ ಸಮಗ್ರ ಸಾಹಿತ್ಯ ಕುರಿತಂತೆ ಒಂದು ದಿನದ ವಿಚಾರ ಸಂಕೀರಣ ಉದ್ಘಾಟಿಸಿ ಮಾತನಾಡಿ, ಸರಳತೆ ಮತ್ತು ವ್ಯಕ್ತಿತ್ವ ಮೈಗೂಡಿಸಿಕೊಂಡಿರುವ ಎಸ್. ಎಂ. ಜನವಾಡಕರ್ ಅವರು ಬೀದರ್ ಜಿಲ್ಲೆಯ ಹಿರಿಯ ಸಾಹಿತಿಗಳಲ್ಲಿ ಪ್ರಮುಖರಾಗಿದ್ದಾರೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಸುರೇಶ್ ಚನ್ನಶೆಟ್ಟಿ ಮಾತನಾಡಿ, ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನವು ಕನ್ನಡದ ಅನೇಕ ಜಾಗೃತಿ ವಿಚಾರಗಳನ್ನು ಬೆಳಗಿಸುತ್ತಾ, ಕನ್ನಡದ ಮನಸ್ಸುಗಳನ್ನು ಕಟ್ಟುವ ಮಹತ್ತರ ಕೆಲಸ ಮಾಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ ಅತಿವಾಳೆ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವೆಲ್ಲರೂ ಕನ್ನಡದ ಉಳಿವಿಗಾಗಿ ಶ್ರಮಿಸಬೇಕಾಗಿದೆ. ನಮ್ಮ ಜಿಲ್ಲೆಯು ಸಾಹಿತಿಕವಾಗಿ ಸಾಕಷ್ಟು ಬದಲಾವಣೆ ಕಂಡಿದೆ ಎಂದರು.

ಹಿರಿಯ ಸಾಹಿತಿಗಳಾದ ಎಂ.ಎಸ್. ಜನವಾಡಕರ್ ಮಾತನಾಡಿ, ಇಂದು ನಾನು ಬರೆದಿರುವ ಕೃತಿಗಳ ಕುರಿತು ಒಂದು ದಿನದ ಸಮಗ್ರ ಸಾಹಿತ್ಯ ವಿಚಾರ ಸಂಕೀರ್ಣ ಹಮ್ಮಿಕೊಂಡಿರುವುದು ನನಗೆ ಖುಷಿ ತಂದಿದ್ದು, ನನ್ನ ಬರಹವನ್ನು ಇಷ್ಟು ಜನರು ಚರ್ಚೆಗೆ ತೆಗೆದುಕೊಂಡಿರುವುದು ನನಗೆ ದೊಡ್ಡ ಗೌರವ ಎಂದು ಭಾವೋದ್ಗಾರ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಾಹಿತಿಗಳಾದ ಸುನಿತಾ ಕೂಡ್ಲಿಕರ್, ಡಾ. ರಾಮಚಂದ್ರ ಗಣಾಪುರ್, ಡಾ. ಶ್ರೇಯಾ ಮಹಿಂದ್ರಕರ್ ಹಾಗೂ ಡಾ. ಮುಕ್ತುಂಬಿ ಅವರು ವಿವಿಧ ವಿಷಯಗಳ ಮೇಲೆ ತಮ್ಮ ಉಪನ್ಯಾಸ ನೀಡಿದರು.

ಇತ್ತೀಚೆಗೆ ಜಿಲ್ಲಾ ಕನ್ನಡ ಜಾಗೃತಿ ಸಮಿತಿಗೆ ನಾಮನಿರ್ದೇಶನಗೊಂಡ ಟಿ.ಎಮ್. ಮಚ್ಚೆ, ಸುನೀಲ ಭಾವಿಕಟ್ಟಿ ಹಾಗೂ ಇತರರಿಗೆ ಗೌರವಿಸಲಾಯಿತು.

ಸುನಿಲ್ ಗಾಯಕವಾಡ ಸ್ವಾಗತಿಸಿದರು. ಲಕ್ಷ್ಮಣ ಮೇತ್ರೆ ನಿರೂಪಿಸಿದರು. ನಾಗೇಶ್ ಜಾನಕನೂರ್ ವಂದಿಸಿದರು. ವಕೀಲ ಪಟೇಲ್ ತತ್ವಪದ ಹಾಡಿದರು. ಹಿರಿಯ ಸಾಹಿತಿಗಳು, ಸಾಹಿತ್ಯಾಭಿಮಾನಿಗಳು, ಮಹಿಳೆಯರು, ಮಕ್ಕಳು, ಉಪಸ್ಥಿತರಿದ್ದರು.