ರೈತರ ಜಮೀನಿಗೆ ಜಪಾನ್ ಉದ್ಯಮಿ ಭೇಟಿ

| Published : Oct 21 2023, 12:30 AM IST

ಸಾರಾಂಶ

ರೈತರ ಜಮೀನಿಗೆ ಜಪಾನ್ ಉದ್ಯಮಿ ಭೇಟಿ
ಕನ್ನಡಪ್ರಭ ವಾರ್ತೆ ಬೈಲಹೊಂಗಲ ಈ ಭಾಗದ ಹತ್ತಿ ಉತ್ತಮ ಫಲವತ್ತತೆ ಹಾಗೂ ಗುಣಮಟ್ಟ ಹೊಂದಿದೆ. ಆದರೆ, ಸರಿಯಾದ ಹಾಗೂ ಸುರಕ್ಷಿತವಾಗಿ ಬಿಡಿಸುವ ಮತ್ತು ಶೇಖರಿಸುವ ವಿಧಾನ ಇರದಿದ್ದರಿಂದ ಒಳ್ಳೆಯ ಬೆಲೆ ಸಿಗುತ್ತಿಲ್ಲ ಎಂದು ಉದ್ಯಮಿ ಓಸಿಮಾ ಹೇಳಿದರು. ಉದ್ಯಮಿ ವಿಜಯ ಮೆಟಗುಡ್ಡ ಹಾಗೂ ಜಯರಾಜ ಮೆಟಗುಡ್ಡರ ಬಸವ ಟೆಕ್ಸಟೈಲ್ಸ್ ಹಾಗೂ ಲೂದಿಯಾನಾದ ವರ್ಧಮಾನ ಟೆಕ್ಸಟೈಲ್ಸ್ ಸಹಯೋಗದಲ್ಲಿ ಜಪಾನ್ ದೇಶದ ಖ್ಯಾತ ಹತ್ತಿ ಉದ್ಯಮಿ ಓಸಿಮಾ ಹಾಗೂ ಅವರ ತಂಡವನ್ನು ಆಹ್ವಾನಿಸಲಾಯಿತು. ಕುಂಠಿತವಾಗುತ್ತಿರುವ ಡಿಸಿಎಚ್ (DCH)ಹತ್ತಿ ಉದ್ಯಮ ನ್ನು ಪುನಶ್ಚೇತನ ಮಾಡಿ ಅಧಿಕ ಇಳುವರಿ ಪಡೆಯಲು ಸಹಕಾರಿಯಾಗಿಸುವ ನಿಟ್ಟಿನಲ್ಲಿ ರೈತರ ಜಮೀನು ಹಾಗೂ ಅವರ ಮನೆಗಳಿಗೆ ಭೇಟಿ ನೀಡಿ ಅವಶ್ಯಕ ಮಾಹಿತಿ ತಿಳಿಸಿದರು. ಈ ವೇಳೆ ಮಾತನಾಡಿ ಓಸಿಮಾ, ಒಳ್ಳೆಯ ಬೆಲೆ ಸಿಗಬೇಕಾದರೆ ಹತ್ತಿ ಬಿಡಿಸುವಾಗ ಮೃದುವಾಗಿ ತಲೆಗೆ ಕಾಟನ್ ಬಟ್ಟೆ ಧರಿಸಿ, ಕಾಟನ್ ಚೀಲಗಳನ್ನು ಬಳಸಿ ಹತ್ತಿ ಬಿಡಿಸಬೇಕು. ನಂತರ ಅದನ್ನು ಕಾಟನ್ ಬಟ್ಟೆಗಳ ಚೀಲದಲ್ಲಿ ಶೇಖರಿಸಿದರೆ ಉತ್ತಮ ಬೆಲೆ ಸಿಗುತ್ತದೆ ಎಂದರು. ಉದ್ಯಮಿ ವಿಜಯ ಮೆಟಗುಡ್ಡ ಮಾತನಾಡಿ, ನಮ್ಮ ರೈತರ ಹತ್ತಿ ಉತ್ತಮವಾಗಿದ್ದರೂ, ಅದನ್ನು ಬಿಡಿಸುವ ವೇಳೆ ಮಹಿಳೆಯರ ತಲೆಗೂದಲು, ಬಿಸಾಡಿದ ಪ್ಲಾಸ್ಟಿಕ್, ನೈಲಾನ್ ವಸ್ತುಗಳ ತುಂಡು, ಗುಟಕಾ ಚೀಟ, ಪ್ಲಾಸ್ಟಿಕ್ ಕಾಗದದ ಚೂರುಗಳು ಸೇರಿ ಗುಣಮಟ್ಟ ಹಾಳು ಮಾಡುತ್ತಿವೆ. ಇವುಗಳಿಂದ ರೈತರು ಜಾಗರೂಕತೆ ವಹಿಸಬೇಕು. ಇದರಿಂದ ಉತ್ತಮ ಬೆಲೆ ದೊರೆಯುವುದು ಸಂದೇಹವಿಲ್ಲ. ಹಾನಿಕಾರಕ ಪ್ಲಾಸ್ಟಿಕ್ ನಮ್ಮ ಬೆಳೆಗಳಿಗೂ ಮಾರಕ. ಹಾಗಾಗಿ ಪ್ಲಾಸ್ಟಿಕ್‌ನಿಂದ ಜಾಗೃತಿ ವಹಿಸಿ ಬೆಳೆ ರಕ್ಷಣೆಗೆ ಕೈಜೋಡಿಸಿ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಪಾನ್ ಉದ್ಯಮಿ ನೈಕೋ ಹಿಗಾಶಿ, ಕಜುಹಿರೊ ನೊಗುಚಿ, ವರ್ಧಮಾನ ಟೆಕ್ಸಟೈಲ್ಸ್ ನ ಸುಭಾಶಿಸ್ ಭಟ್ಟಾಚಾರಜಿ, ರಾಜನ್ ಜಿಂದಾಲ, ಪಂಕಜ ಸೆಕ್ಷೆನಾ, ರಜತ್ ಪ್ರಸಾರ್, ಹಾಗೂ ಬಸವ ಟೆಕ್ಸಟೈಲ್ಸ್ ನ ಸಿಬ್ಬಂದಿ, ವಿವಿಧ ಗ್ರಾಮಗಳ ರೈತರು ಉಪಸ್ಥಿತರಿದ್ದರು.