ಬಡವರ ಶ್ರೇಯೋಭಿವೃದ್ಧಿಗೆ ಜಾರಕಿಹೊಳಿ ಫೌಂಡೇಶನ್‌ ನಿರಂತರ ಶ್ರಮ: ಮಲ್ಲೇಶ್‌

| Published : Oct 02 2024, 01:05 AM IST

ಬಡವರ ಶ್ರೇಯೋಭಿವೃದ್ಧಿಗೆ ಜಾರಕಿಹೊಳಿ ಫೌಂಡೇಶನ್‌ ನಿರಂತರ ಶ್ರಮ: ಮಲ್ಲೇಶ್‌
Share this Article
  • FB
  • TW
  • Linkdin
  • Email

ಸಾರಾಂಶ

ಸಚಿವ ಸತೀಶ್ ಜಾರಕಿಹೊಳಿ ಅವರು ಮಾನವ ಬಂಧುತ್ವ ವೇದಿಕೆಯ ಚಟುವಟಿಕೆಗಳ ಮೂಲಕ ನಾಡಿನಲ್ಲಿ ಸಾಮಾಜಿಕ ಬದಲಾವಣೆ ಮಾಡುತ್ತಿದ್ದಾರೆ ಎಂದು ಪತ್ರಕರ್ತ ಬಿ.ಎನ್. ಮಲ್ಲೇಶ್ ಹರಿಹರದಲ್ಲಿ ಹೇಳಿದ್ದಾರೆ.

- ಹರಿಹರದಲ್ಲಿ 15 ದಿನಗಳ ತರಬೇತಿ ಶಿಬಿರ ಉದ್ಘಾಟನೆ - - - ಕನ್ನಡಪ್ರಭ ವಾರ್ತೆ ಹರಿಹರ

ಸಚಿವ ಸತೀಶ್ ಜಾರಕಿಹೊಳಿ ಅವರು ಮಾನವ ಬಂಧುತ್ವ ವೇದಿಕೆಯ ಚಟುವಟಿಕೆಗಳ ಮೂಲಕ ನಾಡಿನಲ್ಲಿ ಸಾಮಾಜಿಕ ಬದಲಾವಣೆ ಮಾಡುತ್ತಿದ್ದಾರೆ ಎಂದು ಪತ್ರಕರ್ತ ಬಿ.ಎನ್. ಮಲ್ಲೇಶ್ ಹೇಳಿದರು.

ಹರಿಹರದ ಮೈತ್ರಿ ವನದಲ್ಲಿ ಶನಿವಾರ ಮಾನವ ಬಂಧುತ್ವ ವೇದಿಕೆಯಿಂದ ಆಯೋಜಿಸಿದ್ದ ಗ್ರಾಮಾಡಳಿತ ಅಧಿಕಾರಿಗಳ ಸ್ಪರ್ಧಾತ್ಮಕ ಮಹಿಳಾ ಪರೀಕ್ಷಾರ್ಥಿಗಳಿಗೆ ಆಯೋಜಿಸಿದ್ದ 15 ದಿನಗಳ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಬಡವರು, ಶೋಷಿತರು ಹಾಗೂ ಜಾತಿ ಕಾರಣಕ್ಕಾಗಿ ತುಳಿತಕ್ಕೊಳಗಾದವರ ಏಳಿಗೆಗೆ ಜಾರಕಿಹೊಳಿ ಫೌಂಡೇಶನ್ ನಿರಂತರ ಶ್ರಮಿಸುತ್ತಿದೆ. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತವಾಗಿ ವಸತಿ, ಆಹಾರ ನೀಡಿ ತರಬೇತಿ ನೀಡುತ್ತಿರುವುದು ಸಾಮಾಜಿಕ ಕಳಕಳಿಯ ಪ್ರತೀಕ ಎಂದರು.

ಶಿಬಿರಾರ್ಥಿಗಳು ಸಣ್ಣ ಗುರಿ ಬದಲಿಗೆ ದೊಡ್ಡ ಸಾಧನೆ ಮಾಡಲು ಪೂರಕ ಶ್ರಮ ಹಾಕಲು ಮುಂದಾದರೆ ಯಶಸ್ಸು ಸಾಧ್ಯ. ಗ್ರಾಮಾಡಳಿತ ಅಧಿಕಾರಿಯಾಗಿ ಆಯ್ಕೆಯಾದರೆ ರೈತರ ಕೆಲಸಗಳಿಗೆ ಮೊದಲ ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು.

ಮುಖ್ಯ ಅತಿಥಿ ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ವಾತಾವರಣದಲ್ಲಿ ಸರ್ಕಾರಿ ಅಥವಾ ಖಾಸಗಿ ಕ್ಷೇತ್ರದ ದಿಗ್ಗಜ ಕಂಪನಿಗಳಲ್ಲಿ ಉದ್ಯೋಗ ಪಡೆಯಲು ಪಠ್ಯವನ್ನು ಓದಿ, ಹೆಚ್ಚಿನ ಅಂಕ ಪಡೆದರೆ ಸಾಲದು. ನಾಡು, ದೇಶ, ಜಾಗತಿಕ ವಿಷಯಗಳತ್ತಲೂ ಗಮನ ಹರಿಸಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ. ಎ.ಬಿ. ರಾಮಚಂದ್ರಪ್ಪ ಮತನಾಡಿ, ಸರ್ಕಾರಿ ಉದ್ಯೋಗ ಪಡೆಯಬೇಕೆಂದರೆ ತೀವ್ರ ಸ್ಪರ್ಧೆ ಇದೆ. ಪೋಷಕರು ಹಾಗೂ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಶಾಲಾ, ಕಾಲೇಜು ಹಂತದಲ್ಲೇ ಸ್ಪರ್ಧೆಗಳಿಗೆ ಸಜ್ಜುಗೊಳಿಸಬೇಕು. ದಿನಪತ್ರಿಕೆ, ವಾರ, ಮಾಸ ಪತ್ರಿಕೆಗಳನ್ನು ನಿಯಮಿತವಾಗಿ ಓದಬೇಕೆಂದರು.

ಕಾರ್ಯಕ್ರಮದಲ್ಲಿ ಸ್ವಾಗತ ಹಾಗೂ ನಿರೂಪಣೆಯನ್ನು ಮಂಜುನಾಥ್ ಉಕ್ಕಡಗಾತ್ರಿ ನೆರವೇರಿಸಿದರು. ಶಿಬಿರದ ಉಸ್ತುವಾರಿ ಶಿಲ್ಪಾ ಉಪಸ್ಥಿತರಿದ್ದರು.

- - - -29ಎಚ್‍ಆರ್‍ಆರ್3:

ತರಬೇತಿ ಶಿಬಿರವನ್ನು ಪತ್ರಕರ್ತ ಬಿ.ಎನ್.ಮಲ್ಲೇಶ್ ಉದ್ಘಾಟಿಸಿದರು.