ನಾಳೆ ಚನ್ನಗಿರಿ ಕೆರೆಗಳ ತುಂಬಿಸಲು ಆಗ್ರಹಿಸಿ ಜಾಥಾ

| Published : Aug 29 2024, 12:53 AM IST

ಸಾರಾಂಶ

ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆಯಿಂದ ಚನ್ನಗಿರಿ ತಾಲೂಕಿನ ನಿಗದಿತ ಕೆರೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಆ.30ರಂದು ಚನ್ನಗಿರಿ ಪಟ್ಟಣದಲ್ಲಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಖಡ್ಗ ಸ್ವಯಂ ಸೇವಕರ ಸಂಘದ ಮುಖಂಡ ರಘು ಹೇಳಿದರು.

ಕನ್ನಡಪ್ರಭ ವಾರ್ತೆ, ದಾವಣಗೆರೆ ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆಯಿಂದ ಚನ್ನಗಿರಿ ತಾಲೂಕಿನ ನಿಗದಿತ ಕೆರೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಆ.30ರಂದು ಚನ್ನಗಿರಿ ಪಟ್ಟಣದಲ್ಲಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಖಡ್ಗ ಸ್ವಯಂ ಸೇವಕರ ಸಂಘದ ಮುಖಂಡ ರಘು ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 10.30ಕ್ಕೆ ಚನ್ನಗಿರಿ ಎಪಿಎಂಸಿ ಮಾರುಕಟ್ಟೆ ಆವರಣದಿಂದ ತಾಲೂಕು ದಂಡಾಧಿಕಾರಿ ಕಚೇರಿವರೆಗೆ ವಿವಿಧ ಮಠಾಧೀಶರು, ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಮಹಿಳಾ ಸಂಘಟನೆಗಳು, ರೈತರು, ವಿದ್ಯಾರ್ಥಿಗಳ ನೇತೃತ್ವದಲ್ಲಿ ಜಾಗೃತಿ ಜಾಥಾ ನಡೆಯಲಿದೆ ಎಂದರು.

ಚನ್ನಗಿರಿ ತಾಲೂಕಿನ ನಿಗದಿತ ಕೆರೆಗಳಿಗೆ ನೀರು ಹರಿಸುವ ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆಯು 2016ರಲ್ಲಿ ಆರಂಭವಾಗಿದೆ. ಕಳೆದ ಒಂದೂವರೆ ತಿಂಗಳ ಹಿಂದೆಯೇ ಮುಕ್ತಾಯವಾಗಿದೆ. ಆದರೂ, ಚನ್ನಗಿರಿ ಕೆರೆಗಳಿಗೆ ನೀರು ಹರಿಸುವಲ್ಲಿ ವಿಳಂಬವಾಗಿದೆ. ತಕ್ಷಣ‍ವೇ ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಜಾಥಾ ವೇಳೆ ಒಂದು ವಾರದ ಕಾಲ ಗಡುವು ನೀಡಲಾಗುವುದು. ಒಂದೊಮ್ಮೆ ಚನ್ನಗಿರಿ ತಾಲೂಕಿನ ನಿಗದಿತ ಕೆರೆಗಳಿಗೆ ನೀರು ಹರಿಸದಿದ್ದರೆ ಚನ್ನಗಿರಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ, ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.

ಸಂಘದ ಸದಸ್ಯ ಬಿ.ಚಂದ್ರಹಾಸ ಮಾತನಾಡಿ, ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ಮೊದಲ ಹಂತದ ಪ್ರಕಾರ ಚನ್ನಗಿರಿ ಕಸಬಾ ಹೋಬಳಿಯ 76 ಕೆರೆಗಳು, ಸಂತೇಬೆನ್ನೂರು ಹೋಬಳಿಯ 26 ಕೆರೆಗಳು, ಹೊಳಲ್ಕೆರೆ ತಾಲೂಕಿನ 26 ಕೆರೆಗಳಿಗೆ ನೀರು ಹರಿಸಬೇಕು. ಈಗ ಕಸಬಾ ಹೋಬಳಿಯಲ್ಲಿ 120 ಕೆರೆಗಳು, ಸಂತೇಬೆನ್ನೂರಿನ 60, ಹೊಳಲ್ಕೆರೆ ತಾಲೂಕಿನ 100, ಭದ್ರಾವತಿ, ಶಿವಮೊಗ್ಗ ತಾಲೂಕುಗಳ ತಲಾ 5, ಹೊನ್ನಾಳಿ ತಾಲೂಕಿನ 6 ಕೆರೆಗಳಿಗೆ ನೀರು ಹರಿಸಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಶ್ರೀ ಕೇದಾರಲಿಂಗ ಶಿವಾಚಾರ್ಯ ಸ್ವಾಮೀಜಿ, ಸೈಯದ್ ನಯಾಜ್‌, ಜಿ.ಎಸ್.ನಾಗೇಂದ್ರಪ್ಪ ಇತರರು ಇದ್ದರು.