ಸಾರಾಂಶ
ಜಯಸುವರ್ಣಪುರದಲ್ಲಿ ಏರ್ಪಡಿಸಿದ್ದ ಶಿವಾನಭವ ಗೋಷ್ಠಿಯಲ್ಲಿ ಡಾ.ಬಸವಕುಮಾರ ಸ್ವಾಮೀಜಿ ಹೇಳಿಕೆಕನ್ನಡಪ್ರಭ ವಾರ್ತೆ ಹೊಸದುರ್ಗ
ನಾಡನ್ನು ಸುತ್ತಿ- ಮಠ ಮತ್ತು ಭಕ್ತರ ಮನಸ್ಸುಗಳನ್ನು ಕಟ್ಟುತ್ತಾ ಸಾಗಿದ ಜಯದೇವ ಜಗದ್ಗುರುಗಳು ಭಕ್ತ ಪ್ರೇಮಿಗಳು ಎಂದು ಚಿತ್ರದುರ್ಗ ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು.ತಾಲೂಕಿನ ಜಯಸುವರ್ಣಪುರ ಗ್ರಾಮದಲ್ಲಿ ಏರ್ಪಡಿಸಿದ್ದ ಶಿವಾನಭವ ಗೋಷ್ಠಿಯ ಸಾನ್ನಿದ್ಯ ವಹಿಸಿ ಮಾತನಾಡಿ, ಜಯದೇವ ಜಗದ್ಗುರುಗಳು ಸದಾ ಸಮಾಜಮುಖಿ ಕಾರ್ಯಗಳನ್ನೇ ಮಾಡುತ್ತಾ ಸಾಗಿದ್ದಾರೆ. ಭಕ್ತರಿಂದ ಪಡೆದದ್ದನ್ನು ಭಕ್ತರಿಗಾಗಿಯೇ ಮೀಸಲಿಟ್ಟಿದ್ದರು. ಸಮಾಜದ ನೂರಾರು ಯೋಜನೆಗಳಿಗೆ ದೇಣಿಗೆ ನೀಡಿದ್ದಾರೆ. ಬಡ ಮಕ್ಕಳ ವಿದ್ಯಾರ್ಜನೇಗಾಗಿ ಉಚಿತ ಜಯದೇವ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿದ್ದು ಅಮೋಘ ಕಾರ್ಯ ಎಂದು ಹೇಳಿದರು.ಈ ಹಿಂದೆ ತಿರುನಾಳ್ ಪಾಳ್ಯವಾಗಿದ್ದ ಈ ಜಯಸುವರ್ಣಪುರವೂ ಜಯದೇವ ಗುರುಗಳ ಪಾದಸ್ಪರ್ಶದಿಂದ ಭಕ್ತರ ಅನೇಕ ಸಂಕಷ್ಟಗಳು ದೂರವಾದವು ಎಂಬ ನಂಬಿಕೆಯ ಫಲವಾಗಿ ಜಯ ಸುವರ್ಣಪುರವೆಂದು ಹೊಸ ನಾಮಂಕಿತ ಪಡೆದದ್ದು, ನೀವು ಜಯದೇವ ಜಗದ್ಗುರುಗಳ ಮೇಲಿನ ಭಕ್ತಿಯ ದ್ಯೋತಕ ಅದು ಸ್ತುತ್ಯಾರ್ಹ ಕಾರ್ಯ ಎಂದರು.
ಜಯದೇವ ಗುರುಗಳ ನಂತರ ಜಯವಿಭವ ಮುರುಘರಾಜೇಂದ್ರ ಸ್ವಾಮಿಗಳು ಈ ಗ್ರಾಮಕ್ಕೆ ಆಗಮಿಸಿ ಭಕ್ತರ ಅಪೇಕ್ಷೆಯಂತೆ ಕಾಶಿಯಿಂದ ಒಂದು ಲಿಂಗವನ್ನು ತರಿಸಿ, ಪ್ರತಿಷ್ಠಾಪಿಸಿ, ಅಲ್ಲಿ ಧರ್ಮಕಾರ್ಯಗಳು ನಡೆಯುವಂತೆ ಮಾಡಿದ್ದು ಈ ಗ್ರಾಮದಲ್ಲಿ ಧರ್ಮ ಕಾರ್ಯಕ್ಕೆ ಅನುವಾಯಿತು. ಅಂದಿನ ದೇವಾಲಯವು ಶಿಥಿಲಾವಸ್ಥೆಯಲ್ಲಿ ರುವುದನ್ನು ಕಂಡ ನೀವುಗಳು ಮುಂದಿನ ಪೀಳಿಗೆ ಧರ್ಮ ಚಟುವಟಿಕೆಗಳು ನಡೆಯುವಂತಾಗಲಿ ಎನ್ನುವ ಆಲೋಚನೆಯ ಹಿನ್ನೆಲೆಯಿಂದ ನೀವುಗಳು ಭಕ್ತರಿಂದ ವಂತಿಕೆಯನ್ನು ಪಡೆದು ನೂತನ ದೇವಾಲಯವನ್ನು ಕಟ್ಟಿಸುತ್ತಿರುವುದು, ಆ ಮೂಲಕ ಮೂರು ದಿನಗಳ ದಾಸೋಹ, ಕಾಯಕ, ಶರಣ ಸಂಸ್ಕೃತಿ ,ಮುರುಘಾ ಪರಂಪರೆಯ ಚರಿತ್ರೆಯನ್ನು ಮೆಲುಕು ಹಾಕಲು ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಮಾದರಿ ನಡೆಯಾಗಿದೆ. ಈ ನಿಮ್ಮ ಎಲ್ಲ ಕಾರ್ಯಕ್ಕೆ ಶ್ರೀಮಠ ಬೆಂಬಲವಾಗಿ ನಿಲ್ಲುತ್ತದೆ ಎಂದು ನುಡಿದರು.ಈ ವೇಳೆ ಜಯಲಿಂಗೇಶ್ವರ ದೇವಸ್ಥಾನ ಸೇವಾ ಸಮಿತಿಯ ಗೌರವಾಧ್ಯಕ್ಷ ಜೆ.ಆರ್.ಶಿವಲಿಂಗರಾಜಪ್ಪ, ಅಧ್ಯಕ್ಷ ಅಶೋಕ್. ಜೆ.ಎಚ್.ಉಪಾಧ್ಯಕ್ಷ ಶ್ರೀನಿವಾಸ್ ಜೆ.ಬಿ, ಖಜಾಂಚಿ ಪರಮೇಶ್ವರಪ್ಪ ಜೆ.ಎಸ್.ಜೆ. ಆರ್ ಸದಾಶಿವಪ್ಪ, ಮಾತಾಡಿದರು.
ಸೇವಾ ಸಮಿತಿಯ ಕಾರ್ಯದರ್ಶಿ, ಜೆ.ಯು.ಸುಹಾಸ್ ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನು ಹಾಡಿದರು. ಸಮಾರಂಭಕ್ಕೂ ಮುನ್ನ ಗ್ರಾಮದವರು ಪಾದಯಾತ್ರೆಯ ಮೂಲಕ ದೇವಾಲಯದ ಆವರಣಕ್ಕೆ ಶ್ರೀಗಳವರನ್ನ ಬರಮಾಡಿಕೊಂಡರು.