ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
9ನೇ ಶತಮಾನದಲ್ಲಿ ಕರ್ನಾಟಕ, ಕನ್ನಡ ಮತ್ತು ಕನ್ನಡ ಜನರಿಗೋಸ್ಕರ ದೂರದ ಗಡಿ ಸೊಲ್ಲಾಪುರದಲ್ಲಿ ನಿಂತು ಕನ್ನಡಿಗರ ಕೋಟೆ ಕಟ್ಟಿ ಅದನ್ನು ರಕ್ಷಣೆ ಮಾಡಿದ ಅಪ್ರತಿಮ ಹೋರಾಟಗಾರ್ತಿ, ಗಡಿನಾಡ ಸಿಂಹಿಣಿ ಜಯದೇವಿತಾಯಿ ಲಿಗಾಡೆ ಎಂದು ಸೋಲಾಪುರದ ಖ್ಯಾತ ವೈದ್ಯ, ಸಾಹಿತಿ ಡಾ.ಮಧುಬಾಲ ಲಿಗಾಡೆ ಹೇಳಿದರು.ಇಂಡಿಯ ಭೀಮಾಂತರಂಗ ಜಗಲಿ, ಆನ್ ಲೈನ್ ಸಾಹಿತ್ಯಿಕ, ಸಾಂಸ್ಕೃತಿಕ ಸಂಸ್ಥೆಯಿಂದ ಹಮ್ಮಿಕೊಂಡ ಉಪನ್ಯಾಸ ಮಾಲಿಕೆ-2 ರಲ್ಲಿ ಜಯದೇವಿತಾಯಿ ಲಿಗಾಡೆ ಬದುಕು ಬರಹ ಕುರಿತು ಉಪನ್ಯಾಸ ನೀಡಿ ಮಾತನಾಡಿದರು. ಸಿದ್ದರಾಮೇಶ್ವರ ಪುರಾಣ ಮಹಾಕಾವ್ಯ ಕರ್ತೃವಾಗಿ, ಕನ್ನಡ ಕಾವಲುಗಾರ್ತಿಯಾಗಿ, ಸಾಹಿತ್ಯ ಸಾಧಕಿಯಾಗಿ, ಆಧ್ಯಾತ್ಮ ಚಿಂತನಕಾರರಾಗಿ, ಕುಟುಂಬ ವತ್ಸಲೆಯಾಗಿ ಈ ಜಂಗಮತಾಯಿ ತಾಯ್ನಾಡಿನ ಸೇವೆಗಾಗಿ ತಮ್ಮ ಜೀವನ ಸವೆಸಿದರು. ಕನ್ನಡ ನಾಡು-ನುಡಿ ಬೆಳೆಸುವಲ್ಲಿ ಅವರ ಅಗಾಧ ಪರಿಶ್ರಮ, ಅದ್ಭುತ ಕಾರ್ಯ, ಅಪಾರ ಸಾಧನೆ ಇಂದಿಗೂ ಚಿರಸ್ಥಾಯಿಯಾಗಿದ್ದು, ಕನ್ನಡಿಗರ ಅಭಿಮಾನದ ಮಹಾತಾಯಿಯೇ ಆಗಿದ್ದಾರೆ ಎಂದು ಹೇಳಿದರು.
ಹುಟ್ಟಿನಿಂದ ಹೋರಾಟ ಮನೋಭಾವ ಮೈಗೂಡಿಸಿಕೊಂಡು ಕನ್ನಡ ಚಳವಳಿ, ಸ್ವಾತಂತ್ರ ಏಕೀಕರಣ, ದಲಿತ ವಿಮೋಚನೆ, ಮಹಿಳಾಪರ ಕಾಳಜಿ, ಕಾರ್ಮಿಕ ಕಲ್ಯಾಣ, ಮಾನವಹಕ್ಕು, ಮೂಢನಂಬಿಕೆ, ಕಂಧಾಚಾರ, ಮನುಷ್ಯತ್ವದ ಅರಿವು, ಶಿಕ್ಷಣ ಜಾಗೃತಿ, ಕಲೆ, ಸಾಹಿತ್ಯ, ಸಂಸ್ಕೃತಿ, ನಾಡಸಂರಕ್ಷಣೆಯಂತಹ ಹೋರಾಟದ ಜೊತೆಯಲ್ಲೇ ಅಷ್ಟೇ ಗಂಭೀರವಾಗಿ ಸಾಹಿತ್ಯ ಕೃಷಿಯನ್ನೂ ಮಾಡಿ ಸಾಹಿತ್ಯ ನಕ್ಷತ್ರವಾಗಿ ಕಲ್ಯಾಣದಲ್ಲಿ ಬಾಳ್ವೆ ಕಳೆದವರು ಎಂದು ಹೇಳಿದರು.ಸಿಂದಗಿಯ ಜಾನಪದ ವಿದ್ವಾಂಸ ಡಾ.ಎಂ.ಎಂ. ಪಡಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾನಪದದ ಸೊಗಡಿನಿಂದ ಕೂಡಿದ ಕವಿತೆ-ಕಾವ್ಯ ರಚಿಸಿರುವ ಜಯದೇವಿತಾಯಿ ಲಿಗಾಡೆ ಅವರ ಬರವಣಿಗೆಯಲ್ಲಿ ಸ್ತ್ರೀ ಹೃದಯದ ರಸಾನುಭವದ ಸಂಪತ್ತಿನ ಅಭಿವ್ಯಕ್ತಿ ಕಾಣಬಹುದು. ಅವರು ಆಗರ್ಭ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ್ದರೂ ವೈಭವದ ಜೀವನ ತ್ಯಜಿಸಿ, ಗಾಂಧೀಜಿಯವರಿಂದ ಪ್ರಭಾವಿತರಾಗಿ ಜೀವನದ ಕೊನೆಯವರೆಗೂ ನಿರಾಡಂಬರ ಜೀವನ ಸಾಗಿಸಿದ್ದರು ಎಂದು ಹೇಳಿದರು.
ಡಾ.ಡಿ ಎನ್ ಅಕ್ಕಿ, ಡಾ.ಚನ್ನಪ್ಪ ಕಟ್ಟಿ, ರಾಘವೇಂದ್ರ ಕುಲಕರ್ಣಿ, ಸಂತೋಷ ಬಂಡೆ, ಗೀತಯೋಗಿ, ಬಸವರಾಜ ಕಿರಣಗಿ, ಶ್ರೀಧರ ಹಿಪ್ಪರಗಿ,ಸುಜಾತಾ ಬೀಳಗಿ,ಪ್ರಶಾಂತ ಕುಲಕರ್ಣಿ,ಬಿ.ಸಿ. ಭಗವಂತಗೌಡರ, ಸಂಜಯ ಬುಲಬುಲೆ, ರಾಜಶೇಖರ ಮಾರನೂರ, ಸಿದ್ರಾಮಪ್ಪ ಮಾರನೂರ ಬಿ.ಎನ್. ಹಿರೇಮಠ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಭಾಗವಹಿಸಿದ್ದರು.
ನಾದ ಕೆಡಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಿ.ಎಂ. ಬಂಡಗರ ಸ್ವಾಗತಿಸಿ, ಪರಿಚಯಿಸಿದರು. ಶಿಕ್ಷಕಿ ಸರೋಜಿನಿ ಮಾವಿನಮರ ನಿರೂಪಿಸಿದರು. ಶಿಕ್ಷಕ ವೈ.ಜಿ. ಬಿರಾದಾರ ವಂದಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))