ಕನ್ನಡಪ್ರಭ ವಾರ್ತೆ ಕುಶಾಲನಗರ ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳೊಂದಿಗೆ ಸಹಕಾರಿಗಳು ಕ್ಷೇತ್ರವನ್ನು‌ ಮತ್ತಷ್ಟು ಅಭಿವೃದ್ದಿಪಡಿಸುವತ್ತ ಚಿಂತನೆ ಹರಿಸಬೇಕು ಎಂದು ಸಹಕಾರಿ ಪ್ರತಿನಿಧಿಗಳಿಗೆ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಜಯಕರ ಶೆಟ್ಟಿ ಬಿ. ಇಂದ್ರಾಳಿ ಕರೆ ನೀಡಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ಮತ್ತು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನ ಸಂಯುಕ್ತ ಆಶ್ರಯದಲ್ಲಿ ಮೈಸೂರು ವಿಭಾಗದ ನೌಕರರ ಪತ್ತಿನ ಸಹಕಾರ ಸಂಘಗಳ ಪದಾಧಿಕಾರಿಗಳು ಮತ್ತು ಅಧಿಕಾರಿಗಳಿಗೆ ಕುಶಾಲನಗರದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ತರಬೇತಿ ಕಾರ್‍ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಹಕಾರ ಕ್ಷೇತ್ರಕ್ಕೆ ಪೂರಕವಾದ ಯೋಜನೆಗಳನ್ನು ಸರಕಾರಗಳು ಅನುಷ್ಠಾನಗೊಳಿಸುತ್ತಿರುವುದು, ಅನೇಕ ಪೂರಕವಾದ ಕಾಯ್ದೆಗಳ ತಿದ್ದುಪಡಿಗೊಳಿಸುತ್ತಿರುವುದು ಸ್ವಾಗತಾರ್ಹ ವಿಚಾರ. ಸಹಕಾರಿ ಕ್ಷೇತ್ರವನ್ನು ಆರ್ಥಿಕ ವ್ಯವಸ್ಥೆಗೆ ಮಾತ್ರ ಸೀಮಿತಗೊಳಿಸದೆ ಇರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಕಾರಣೀಭೂತರಾಗಬೇಕು ಎಂದರು.

ವಿಶೇಷ ಆಹ್ವಾನಿತರಾದ ರಾಜ್ಯ ಸಹಕಾರ ಮಹಾ ಮಂಡಳದ ನಿರ್ದೇಶಕ ಬಿ.ಸಿ. ಲೋಕಪ್ಪಗೌಡ ಮಾತನಾಡಿ,

ಪ್ರಸಕ್ತ ದಿನಗಳಲ್ಲಿ ಎಲ್ಲ ವಿಚಾರಗಳ ಬಗ್ಗೆ ಅರಿವು, ತಿಳಿವಳಿಕೆ ಅತ್ಯವಶ್ಯಕ. ಅದರಲ್ಲೂ ಸಹಕಾರಿಗಳಿಗೆ ಸಹಕಾರ ಕ್ಷೇತ್ರವನ್ನು ಮುನ್ನಡೆಸಲು ಕಾಯ್ದೆ, ಕಾನೂನು, ತಿದ್ದುಪಡಿಗಳ ಬಗ್ಗೆ ಅಪಾರ ಅರಿವು ಅಗತ್ಯವಿದೆ ಎಂದರು. ಈ‌ ನಿಟ್ಟಿನಲ್ಲಿ ಕೈಗೊಂಡಿರುವ ತರಬೇತಿ ಕಾರ್‍ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದರು.ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಿ.ಯು. ರಾಬಿನ್ ದೇವಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿರಿಯ ಸಹಕಾರಿಗಳ‌ ನಿಸ್ವಾರ್ಥ ಸೇವೆ, ಮಾರ್ಗದರ್ಶನ, ಹಾಕಿಕೊಟ್ಟ ಭದ್ರ ಬುನಾದಿ‌, ಶ್ರಮದಿಂದ ಇಂದು‌ ಸಹಕಾರ ಕ್ಷೇತ್ರ ಹೆಚ್ಚು ಮುಂದುವರೆದಿದೆ.‌ ನಾವು ಕೂಡ‌ ಮುಂದಿನ ಪೀಳಿಗೆಗೆ ಕೊಡುಗೆ ನೀಡಬೇಕಿದೆ.‌ ಈ ನಿಟ್ಟಿನಲ್ಲಿ ಬದ್ದತೆ, ಪ್ರಾಮಾಣಿಕ ಸೇವೆಗೆ ಪಣತೊಡಬೇಕಿದೆ ಎಂದರು.


ಸಹಕಾರ ಸಂಘಗಳ ಕಾಯ್ದೆ-ಇತ್ತೀಚಿನ ತಿದ್ದುಪಡಿ, ಪದಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಾಹಕರ ಜವಾಬ್ದಾರಿ-ಕರ್ತವ್ಯಗಳು, ಆದಾಯ ತೆರಿಗೆ ಹಾಗೂ ಜಿಎಸ್ಟಿ ಕುರಿತು, ಮಹಾಮಂಡಳದ ಕಾರ್ಯಚಟುವಟಿಕೆ ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಡಾ. ಗುರುಸ್ವಾಮಿ, ಸಿ.ಎ. ರುದ್ರೇಶ್ ಪಟೇಲ್, ಎಂ.ಎಂ. ಶ್ಯಾಮಲ ಅವರು ಉಪನ್ಯಾಸ ನೀಡಿದರು.

ಚಿಕ್ಕಮಗಳೂರು ಸಹಕಾರ ಯೂನಿಯನ್ ಅಧ್ಯಕ್ಷ ಜಿ.ಕೆ. ದಿವಾಕರ್, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಎಚ್.ಕೆ. ಮಾದಪ್ಪ, ನಿರ್ದೇಶಕ ಕೆ.ಟಿ. ಪರಮೇಶ್, ಬಲ್ಲಾರಂಡ ಮಣಿ ಉತ್ತಪ್ಪ, ಎಂ.ಎಂ. ಶ್ಯಾಮಲಾ, ಎಸ್.ಆರ್. ಸುನಿಲ್ ರಾವ್, ಸಹಕಾರ ಸಂಘಗಳ ಉಪನಿಬಂಧಕ ಎಚ್.ಡಿ. ರವಿ ಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್, ಸಮನ್ವಯಾಧಿಕಾರಿ ಪುಟ್ಟಸ್ವಾಮಿ ಇದ್ದರು.