ಮಹಿಳೆಯರ ಕುತ್ತಿಗೆಯಿಂದ ಸರ ಎಗರಿಸುತ್ತಿದ್ದವನ ಸೆರೆ

| Published : Aug 24 2024, 01:28 AM IST

ಸಾರಾಂಶ

ರಸ್ತೆಯಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳವು ಮಾಡುತ್ತಿದ್ದ ಆರೋಪಿಯನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ಧರ್ಮೇಂದ್ರಕುಮಾರ್‌ ಸೋನಿ(30)ಬಂಧಿತ. ಆರೋಪಿಯಿಂದ 6.70 ಲಕ್ಷ ರು. ಮೌಲ್ಯದ 100 ಗ್ರಾಂ ಚಿನ್ನಾಭರಣ ಹಾಗೂ ಬೈಕ್‌ಅನ್ನು ಜಪ್ತಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಸ್ತೆಯಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳವು ಮಾಡುತ್ತಿದ್ದ ಆರೋಪಿಯನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ಧರ್ಮೇಂದ್ರಕುಮಾರ್‌ ಸೋನಿ(30)ಬಂಧಿತ. ಆರೋಪಿಯಿಂದ 6.70 ಲಕ್ಷ ರು. ಮೌಲ್ಯದ 100 ಗ್ರಾಂ ಚಿನ್ನಾಭರಣ ಹಾಗೂ ಬೈಕ್‌ಅನ್ನು ಜಪ್ತಿ ಮಾಡಿದ್ದಾರೆ.

ಇತ್ತೀಚೆಗೆ ಜಯನಗರ 8ನೇ ಬ್ಲಾಕ್‌ನ 42ನೇ ಕ್ರಾಸ್‌ನಲ್ಲಿ ಮುಂಜಾನೆ ಸುಮಾರು 6 ಗಂಟೆಗೆ ಮಹಿಳೆಯೊಬ್ಬರು ವಾಕಿಂಗ್‌ ಮಾಡುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಅಪರಿಚಿತ ಏಕಾಏಕಿ ಮಹಿಳೆಯ ಕುತ್ತಿಗೆಗೆ ಕೈ ಹಾಕಿ 40 ಗ್ರಾಂ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

ಸಿಸಿಟಿವಿ ನೀಡಿದ ಸುಳಿವು:

ದೂರು ದಾಖಲಾದ ಬೆನ್ನಲ್ಲೇ ವಿವಿಧ ಆಯಾಮಗಳಲ್ಲಿ ತನಿಖೆಗೆ ಇಳಿದ ಪೊಲೀಸರು, ಘಟನಾ ಸ್ಥಳದ ಸುತ್ತಮುತ್ತಲ ಕಟ್ಟಡಗಳ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲನೆ ಮಾಡಿದಾಗ ಆರೋಪಿಯ ಸುಳಿವು ಸಿಕ್ಕಿದೆ. ಈತನ ಜಾಡು ಹಿಡಿದು ರಾಜಸ್ಥಾನಕ್ಕೆತೆರಳಿದ್ದ ಪೊಲೀಸರ ತಂಡ, ರಾಜಸ್ಥಾನದ ಗೋಕುಲ್‌ಪುರ ಕಲ್ವಾರ ರಸ್ತೆಯಲ್ಲಿ ಆರೋಪಿ ಧರ್ಮೆಂದ್ರಕುಮಾರ್‌ ಸೋನಿಯನ್ನು ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ.

ಒಂದೇ ದಿನ ಎರಡು ಕಡೆ ಸರಗಳವು:

ಬಳಿಕ ವಿಚಾರಣೆ ವೇಳೆ ಆರೋಪಿಯು ನೀಡಿದ ಮಾಹಿತಿ ಮೇರೆಗೆ ಕೃತ್ಯಕ್ಕೆ ಬಳಸಿದ್ದ ಬೈಕ್‌, ಜಯನಗರ 5ನೇ ಮುಖ್ಯರಸ್ತೆಯ ಪಾರ್ಕ್‌ ಬಳಿ ಜಪ್ತಿ ಮಾಡಿ, ಅದರ ಡಿಕ್ಕಿಯಲ್ಲಿ ಬಚ್ಚಿಟ್ಟಿದ್ದ 40ಗ್ರಾಂ ಮತ್ತು 60ಗ್ರಾಂ ತೂಕದ 2 ಮಾಂಗಲ್ಯ ಸರಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿಯು ವೃತ್ತಿಪರ ಕಳ್ಳನಾಗಿದ್ದು, ಈ ಹಿಂದೆ ತಿಲಕನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಸರಗಳವು ಮಾಡಿ ಜೈಲು ಸೇರಿದ್ದ. ಜಾಮೀನು ಪಡೆದು ಹೊರಗೆ ಬಂದ ಬಳಿಕವೂ ತನ್ನ ಸರಗಳವು ಚಾಳಿ ಮುಂದುವರೆಸಿದ್ದ. ಆರೋಪಿಯು ಕದ್ದ ಬೈಕ್‌ ಬಳಸಿ ಜಯನಗರ ಠಾಣಾ ವ್ಯಾಪ್ತಿಯಲ್ಲಿ ಒಂದೇ ದಿನ ಇಬ್ಬರು ಮಹಿಳೆ ಸರಗಳವು ಮಾಡಿದ್ದ ವಿಚಾರ ವಿಚಾರಣೆಯಿಂದ ಬೆಳಕಿಗೆ ಬಂದಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.