ಇಂಡಿ ತಾಲೂಕು ಲಿಂಬೆ ನಾಡು ಸಾಹಿತಿಗಳ ಬೀಡು

| Published : Aug 24 2024, 01:28 AM IST

ಸಾರಾಂಶ

ಈ ಹಿಂದೆ ಇಂಡಿ ತಾಲೂಕು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಿದ್ದರು. ಇಂದು ಲಿಂಬೆ ನಾಡು ಸಾಹಿತಿಗಳ ಬೀಡು ಎನ್ನುವಂತಾಗಿದೆ. ಇಂತಹ ಒಳ್ಳೆಯ ಬೆಳವಣಿಗೆಗೆ ಸದಾ ನನ್ನ ಸಹಕಾವಿದೆ ಎಂದು ಶಾಸಕ ಹಾಗೂ ಅಂದಾಜು ಸಮಿತಿ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ಈ ಹಿಂದೆ ಇಂಡಿ ತಾಲೂಕು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಿದ್ದರು. ಇಂದು ಲಿಂಬೆ ನಾಡು ಸಾಹಿತಿಗಳ ಬೀಡು ಎನ್ನುವಂತಾಗಿದೆ. ಇಂತಹ ಒಳ್ಳೆಯ ಬೆಳವಣಿಗೆಗೆ ಸದಾ ನನ್ನ ಸಹಕಾವಿದೆ ಎಂದು ಶಾಸಕ ಹಾಗೂ ಅಂದಾಜು ಸಮಿತಿ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಇಂಡಿ ತಾಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರಿ ಪತ್ತಿನ ಸಂಘ ನಿ.ಇಂಡಿ ಸಂಯುಕ್ತಾಶ್ರಯದಲ್ಲಿ ನಿವೃತ್ತ ಶಿಕ್ಷಕರಿಗೆ ಸನ್ಮಾನ ಹಾಗೂ ಮಹಿಳಾ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ನೂತನ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು, ಮಹಾರಾಷ್ಟ್ರ ಗಡಿಭಾಗದಲ್ಲಿ ಇದ್ದರೂ ಸಹಿತ ಈ ಗಂಡುಮೆಟ್ಟಿದ ನೆಲದಲ್ಲಿ ಕನ್ನಡದ ಕಿಚ್ಚು ಕನ್ನಡ ಸಾಹಿತ್ಯದ ಒಲವು ದಿನೇ ದಿನೇ ಹೆಚ್ಚುತ್ತಿದೆ. ಇದಕ್ಕೆ ಸ್ಫೂರ್ತಿ ನಮ್ಮ ಪೂರ್ವಜರು ಸಾಹಿತ್ಯವನ್ನು ಕೃಷಿ ಮಾಡಿದ್ದರ ಪ್ರಯುಕ್ತ ಮತ್ತು ಇಂದಿನ ಯುವಸಾಹಿತಿಗಳ ಸಾಮಾಜಿಕ ಕಳಕಳಿಯಿಂದ ಇಂಡಿ ತಾಲೂಕಿನಲ್ಲಿ ಸಾಹಿತ್ಯ ಕ್ಷೇತ್ರ ಬೆಳವಣಿಗೆಯಾಗುತ್ತಿದೆ ಎಂದರು.

ಇಂಡಿ ತಾಲೂಕು ಪುಣ್ಯ ನೆಲ. ಇಲ್ಲಿ ಅನೇಕ ಸಾಹಿತಿಗಳು ಜನ್ಮ ತಾಳಿದ್ದಾರೆ. ಹಲಸಂಗಿ ಗೆಳೆಯರಾದ ಮಧುರಚೆನ್ನ ಸಿಂಪಿಲಿಂಗಣ್ಣ ಧೂಲಾಸಾಹೇಬ, ಶ್ರೀರಂಗರು ಕನ್ನಡ ಜಾನಪದ ಸಾರಸತ್ವಲೋಕಕ್ಕೆ ತನ್ನದೇಯಾದ ಕೊಡುಗೆ ನೀಡಿದ್ದಾರೆ. ಸ್ಥಳೀಯ ಇಂಡಿ ಪಟ್ಟಣದಲ್ಲಿ ಕೂಡಾ ಅನೇಕ ಹಿರಿಯ ಸಾಹಿತಿಗಳಿದ್ದಾರೆ. ಅವರಲ್ಲಿ ದಿ.ದಾನಪ್ಪ ಬಗಲಿ ರಾಷ್ಟ್ರಕವಿ ಕುವೆಂಪುರವರ ಚೀತಾಭಸ್ಮ ತಮ್ಮ ಮನೆಯಲ್ಲಿ ಇರಿಸಿ ಸದಾ ಪೂಜಿಸುತ್ತಿದ್ದರು. ಇವರು ಕೂಡಾ ಸಾಕಷ್ಟು ಕೃತಿಗಳನ್ನು ಬರೆದಿದ್ದಾರೆ ಎಂದು ತಿಳಿಸಿದರು.ಸಮಾಜದಲ್ಲಿ ಶಿಕ್ಷಕರಿಗೆ ಇರುವಷ್ಟು ಗೌರವ ಮತ್ಯಾರಿಗೂ ಇಲ್ಲ. ಪ್ರಾಚೀನ ಕಾಲದಿಂದಲೂ ಇಂದಿಗೂ ದೇವರ ಸ್ಥಾನ ಇದೆ. ಇಂತಹ ಗೌರವಕ್ಕೆ ನೀವು ಚ್ಯುತಿ ಬರದಂತೆ ಇರಬೇಕು. ಬೇರೆ ಬೇರೆ ಸಾರ್ವಜನಿಕ ವಲಯಗಳಲ್ಲಿ ತಪ್ಪು ಮಾಡಿದರೇ ಕ್ಷಮೆ ಇದೆ. ನಿಮ್ಮಿಂದ ಪ್ರಮಾದ ಆಗಬಾರದು. ಮಕ್ಕಳು ಶಿಕ್ಷಕರಿಂದ ಅನೇಕ ಕಲಿಕೆಗಳು ಕಲಿಯುತ್ತಾರೆ. ಮಕ್ಕಳ ಸ್ವಭಾವ ಅನುಕರಣಿಯ. ಶಿಕ್ಷಕರು ಸಮಾಜದ ಒಳಗೆ, ಹೊರಗೆ ಆದರ್ಶಗುಣಗಳನ್ನು ಬೆಳೆಸಿಕೊಳ್ಳಬೇಕು. ಅಥರ್ಗಾ ರೇವಣಸಿದ್ದಪ್ಪ ಮಾಸ್ತರ ಅವರನ್ನು ಗ್ರಾಮಸ್ಥರು ದೇವರೆಂದು ಪ್ರತಿ ದಿನ ಪೂಜಿಸುತ್ತಾರೆ. ಇಂತಹ ಪವಿತ್ರ ಹುದ್ದೆ ನಿಮ್ಮದಾಗಿದೆ ಎಂದರು.

ತಡವಲಗಾ ಶ್ರೀಮಠದ ಅಭಿನವ ರಾಚೋಟೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿ ಆರ್ಶೀವಚನ ನೀಡಿದರು. ಡಾ.ಕಾಂತು ಇಂಡಿ ಪ್ರಾಸ್ತಾವಿಕ ಮಾತನಾಡಿದರು. ಅಲ್ಲಾಭಕ್ಷ ವಾಲೀಕಾರ, ಅರ್ಜುನ ಲಮಾಣಿ, ಡಾ.ಕಾಂತು ಇಂಡಿ, ಗಂಗಾ ಗಲಗಲಿ, ಮಲ್ಲಿಕಾರ್ಜುನ ಯರಗುದ್ರಿ, ಕ್ಷೇತ್ರಸಮನ್ವಯಾಧಿಕಾರಿ ಎಸ್.ಆರ್.ನಡಗಡ್ಡಿ, ಎಸ್.ವಿ.ಹರಳಯ್ಯ, ಸುಜಾತಾ ಪೂಜಾರಿ, ಪಿ.ಎಸ್.ಚಾಂದಕವಟೆ, ವೈ.ಬಿ.ಪಾಟೀಲ, ಜಿ.ಎಸ್.ಬೇವನೂರ, ಎಂ.ಎಂ.ವಾಲೀಕಾರ, ನಿಜಣ್ಣಾ ಕಾಳೆ, ಪಿ.ಎ.ಎಲೇಗಾರ, ಅಲ್ತಾಫ್‌ ಬೋರಾಮಣಿ, ಬಿ.ಎಂ.ವಠಾರ, ವಿ.ಪಿ.ಅರವತ್ತು, ಸಂಜೀವ ಬೋರಗಿ, ಜಯರಾಮ ಚವ್ಹಾಣ, ಆನಂದ ಕೆಂಬಾಗಿ, ಮಲ್ಲಿಕಾರ್ಜುನ ನೇದಲಗಿ ಉಪಸ್ಥಿತರಿದ್ದರು.

ಹಿರಿಯ ಲೇಖಕ ಡಿ.ಎನ್.ಅಕ್ಕಿ, ಡಾ.ಎಸ್.ಕೆ.ಕೊಪ್ಪಾ, ಡಾ.ಪೋತೆ ಹಾಗೂ ಯುವ ಸಾಹಿತಿಗಳಾದ ರಾಘವೇಂದ್ರ ಕುಲಕರ್ಣಿ, ಡಾ.ಕಾಂತು ಇಂಡಿ, ಸಿ.ಎಂ.ಬಂಡಗಾರ, ಸಾಲೋಟಗಿಯ ನಾಗಣಿ ಸೇರಿದಂತೆ ಅನೇಕ ಸಾಹಿತಿಗಳು ಇಂದು ಕೃತಿಗಳ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುತ್ತಿದ್ದಾರೆ.

-ಯಶವಂತರಾಯಗೌಡ ಪಾಟೀಲ, ಶಾಸಕರು.