ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಪೂಜೆ, ಪ್ರಾರ್ಥನೆಗಳು ಮನಸ್ಸನ್ನು ಶುದ್ಧೀಕರಣಗೊಳಿಸಲಿದ್ದು, ನಿತ್ಯ ದೇವರ ಧ್ಯಾನದೊಂದಿಗೆ ಬದುಕು ನಡೆಸಿ ಜೀವನ ಸಾರ್ಥಕಪಡಿಸಿಕೊಳ್ಳಬೇಕು. ಸಾಧನೆಗೆ ದೇವರ ಪ್ರೇರಣೆ ಅತ್ಯವಶ್ಯವಾಗಿದ್ದು, ಅಧ್ಯಾತ್ಮ ನಮ್ಮೆಲ್ಲರ ಅವಿಭಾಜ್ಯ ಅಂಗವಾಗಬೇಕೆಂದು ಜಿಪಂ ಮಾಜಿ ಸದಸ್ಯೆ ರೋಹಿಣಿ ಪಾಟೀಲ ಹೇಳಿದರು.ತಾಲೂಕಿನ ಭಾಂವಿಹಾಳ ಗ್ರಾಮದ ಚೆನ್ನವೃಷಭೇಂದ್ರ ದೇವರಕೊಂಡ ಲೀಲಾಮಠದಲ್ಲಿ ಹಿರೇಬಾಗೇವಾಡಿಯ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್ ಹಾಗೂ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜಾ ಸಮಿತಿ ಆಶ್ರಯದಲ್ಲಿ ಗುರುವಾರ ನಡೆದ ಸಾಮೂಹಿಕ ಶ್ರೀಸತ್ಯ ನಾರಾಯಣ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಜನರ ನೆಮ್ಮದಿಗಾಗಿ ಧಾರ್ಮಿಕ ಕಾರ್ಯ ನೆರವೇರಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಭಾಂವಿಹಾಳದ ಶ್ರೀ ಸದ್ಗುರು ಚನ್ನವೃಷಭೇಂದ್ರ ಮಠದ ಮಾಣಿಕ್ಯ ವೃಷಭೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ಅವರು ಸಮಾಜದ ಅಭಿವೃದ್ದಿಗಾಗಿ ಶ್ರಮಿಸುತ್ತಿರುವುದು ಪ್ರತಿಯೊಂದು ಕಾರ್ಯಗಳಿಗೆ ಸಹಕಾರ ಅತ್ಯವಶ್ಯವೆಂದರು.ಪೂಜಾ ವ್ಯವಸ್ಥಾಪನೆ ಸಮಿತಿಯ ಅಧ್ಯಕ್ಷ ಕಂಠೆಪ್ಪ ಇಂಚಲ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಜಿಲ್ಲಾ ನಿರ್ದೇಶಕ ಸತೀಶ ನಾಯ್ಕ, ಗ್ರಾಪಂ ಸದಸ್ಯರಾದ ಈರಯ್ಯ ಉದೇಶಿಮಠ, ಕಸ್ತೂರಿ ಗುರುಪುತ್ರನವರ, ಬಿಬಿಜಾನ್ ಕರ್ನಾಚಿ, ಅನಸೂಯಾ ತಳವಾರ, ತಾಲೂಕು ಕಜಾಪ ವಕ್ತಾರ ಮಹಾಂತೇಶ ರಾಜಗೋಳಿ, ಕೃಷಿ ಮೇಲ್ವಚಾರಕ ರಿಯಾಜ್ ದರಗಾದ, ಕೆ.ಕೆ. ಹಾರುಗೊಪ್ಪ, ಒಕ್ಕೂಟದ ಅಧ್ಯಕ್ಷ್ಯೆ ಕಲಾವತಿ ಗೌಡರ ವೇದಿಕೆ ಮೇಲ್ಲಿದ್ದರು. ಸಾಮೂಹಿಕ ಶ್ರೀಸತ್ಯ ನಾರಾಯಣ ಪೂಜೆ ಸಮಿತಿಯ ಪದಾಧಿಕಾರಿಗಳು, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಸದಸ್ಯರು, ಸೇವಾ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಹಿರೇಬಾಗೇವಾಡಿ ಶಾಖೆಯ ಯೋಜನಾಧಿಕಾರಿ ಪಿ.ಯೋಗೀಶ ಸ್ವಾಗತಿಸಿದರು. ಮೇಲ್ವಿಚಾರಕ ಪ್ರಶಾಂತ ಎನ್. ನಿರೂಪಿಸಿದರು. ಸುನೀಲ ಮೊಖಾಶಿ ವಂದಿಸಿದರು. ಇದಕ್ಕೂ ಮುಂಚೆ ಸಾಮೂಹಿಕ ಶ್ರೀಸತ್ಯ ನಾರಾಯಣ ಪೂಜೆಯನ್ನು ಗ್ರಾಮಸ್ಥರು ನೆರವೇರಿಸಿದರು. ನಿರ್ಗತಿಕರಿಗೆ ಮಾಸಾಶನ, ವಿದ್ಯಾರ್ಥಿ ವೇತನ, ವಿಮಾ ಯೋಜನೆಯ ಪ್ರಮಾಣ ಪ್ರತಗಳನ್ನು ವಿತರಿಸಲಾಯಿತು. ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಜರುಗಿದವು.