ವಾಹನ ಚಾಲಕರ ಆಪದ್ಭಾಂಧವ ನೆಕ್ಕಿಲಾಡಿ ಜಯರಾಮಣ್ಣ

| Published : Mar 14 2024, 02:03 AM IST

ಸಾರಾಂಶ

ಮುಂಜಾನೆ ೮ ಗಂಟೆಗೆ ಅಂಗಡಿ ತೆರೆಯುವ ನಾನು, ರಾತ್ರಿ ೧೨.೩೦ ರ ವರೆಗೂ ಸೇವೆ ನೀಡುತ್ತೇನೆ. ಅತಂತ್ರರಾಗಿ ಬರುವ ಮಂದಿ, ತೃಪ್ತಿಯಿಂದ ಹೋಗುವ ದೃಶ್ಯಗಳೇ ನನಗೆ ಆತ್ಮ ಸಂತೋಷವನ್ನು ನೀಡುತ್ತಿದೆ. ಪ್ರಸಕ್ತ ನನಗೆ ೬೦ ವರ್ಷವಾಗಿದೆ. ಇನ್ನೂ ೨೦ ವರ್ಷ ಈ ಸೇವೆಯನ್ನು ಮಾಡಲು ದೇವರು ಅವಕಾಶ ಕೊಟ್ಟಾನು ಎಂಬ ನಂಬಿಕೆ ನನಗಿದೆ ಎನ್ನುತ್ತಾ ತನ್ನ ಕಾರ್ಯದಲ್ಲಿ ತೊಡಗುತ್ತಾರೆ ಜಯರಾಮಣ್ಣ.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಗಾಳಿ ತುಂಬಿದ ಚಕ್ರದಿಂದ ಸಂಚರಿಸುವ ವಾಹನದ ಚಕ್ರಗಳು ಯಾವ ಸಮಯಕ್ಕೆ ಯಾವ ಕಾರಣಕ್ಕೆ ಪಂಕ್ಚರ್‌ ಆಗುತ್ತವೆ ಎಂದು ಯಾರಿಗೂ ತಿಳಿಯೋದಿಲ್ಲ. ಪಂಕ್ಚರ್‌ ಆಯತೆದಂದರೆ ಸವಾರರು ಪಡುವ ಪಾಡು ಯಾರಿಗೂ ಬೇಡ. ಅದರಲ್ಲೂ ರಾತ್ರಿ ವೇಳೆ ವಾಹನಗಳು ಪಂಕ್ಚರ್‌ ಆದರೆ ಆ ವಾಹನಗಳ ಚಾಲಕರ ಗತಿ ಅಧೋಗತಿ. ಇಂತಹ ವಾಹನ ಚಾಲಕರ ಪಾಲಿಗೆ ಆಪದ್ಭಾಂಧವನಾಗಿ ಮಧ್ಯರಾತ್ರಿ ವರೆಗೂ ಸೇವೆ ಸಲ್ಲಿಸುತ್ತಿರುವ ದ.ಕ ಜಿಲ್ಲೆ ಪುತ್ತೂರು ತಾಲೂಕಿನ ೩೪ ನೇ ನೆಕ್ಕಿಲಾಡಿ ಗ್ರಾಮದ ಬೊಳ್ಳಾರ್ ಎಂಬಲ್ಲಿನ ಜಯರಾಮ.

ನಾನೂ ಈ ಮೊದಲು ಚಾಲಕನಾಗಿಯೇ ದುಡಿಯುತ್ತಿದೆ. ಟಯರ್ ಪಂಕ್ಚರ್‌ ಆದರೆ ಚಾಲಕನ ಸಂಕಷ್ಟ ಏನೆಂದು ನನಗೆ ಚೆನ್ನಾಗಿಯೇ ಅರಿವಿದೆ. ರಾತ್ರಿ ವೇಳೆಯಲ್ಲಿಯಂತೂ ಚಾಲಕ ಪಡುವ ಪಾಡು ವರ್ಣಿಸುವುದಕ್ಕೆ ಸಾಧ್ಯವಿಲ್ಲ. ತಿಳಿಯದ ಊರು, ಪರಿಚಯದವರು ಯಾರೂ ಇಲ್ಲ ಇದರಿಂದಾಗಿ ನಿಗದಿತ ಅವಧಿಯೊಳಗೆ ತಲುಪಬೇಕಾದಲ್ಲಿಗೆ ತಲುಪಲು ಸಾಧ್ಯವಾಗುವುದಿಲ್ಲ. ಇಂತಹ ಸಮಯದಲ್ಲಿ ತಡ ರಾತ್ರಿಯೂ ಪಂಕ್ಟರ್ ಹಾಕುವ ಸೇವೆ ಲಭಿಸಿದರೆ ಚಾಲಕನಿಗೆ ಆಗುವ ಸಂತಸಕ್ಕೆ ಪಾರವೇ ಇಲ್ಲ. ಈ ಸಂಕಷ್ಟ ಮನಗಂಡ ನಾನು ಚಾಲಕ ವೃತ್ತಿಯನ್ನು ಬಿಟ್ಟ ಬಳಿಕ ಪಂಕ್ಚರ್ ಹಾಕೂ ಟಯರ್ ವರ್ಕ್ಸ್‌ ಶಾಪ್‌ ತೆರೆದೆ ಎನ್ನುತ್ತಾರೆ ಅವರು.

ಮುಂಜಾನೆ ೮ ಗಂಟೆಗೆ ಅಂಗಡಿ ತೆರೆಯುವ ನಾನು, ರಾತ್ರಿ ೧೨.೩೦ ರ ವರೆಗೂ ಸೇವೆ ನೀಡುತ್ತೇನೆ. ಅತಂತ್ರರಾಗಿ ಬರುವ ಮಂದಿ, ತೃಪ್ತಿಯಿಂದ ಹೋಗುವ ದೃಶ್ಯಗಳೇ ನನಗೆ ಆತ್ಮ ಸಂತೋಷವನ್ನು ನೀಡುತ್ತಿದೆ. ಪ್ರಸಕ್ತ ನನಗೆ ೬೦ ವರ್ಷವಾಗಿದೆ. ಇನ್ನೂ ೨೦ ವರ್ಷ ಈ ಸೇವೆಯನ್ನು ಮಾಡಲು ದೇವರು ಅವಕಾಶ ಕೊಟ್ಟಾನು ಎಂಬ ನಂಬಿಕೆ ನನಗಿದೆ ಎನ್ನುತ್ತಾ ತನ್ನ ಕಾರ್ಯದಲ್ಲಿ ತೊಡಗುತ್ತಾರೆ ಜಯರಾಮಣ್ಣ.

ವರ್ಕ್ಸ್ ಶಾಪ್‌ನಲ್ಲೇ ಒಂದು ಗ್ಯಾಸ್ ಸ್ಟವ್ ಇಟ್ಟುಕೊಂಡಿದ್ದೇನೆ. ಯಾಕೆಂದರೆ ನನಗೆ ಪದೇ ಪದೇ ಚಹಾ ಕುಡಿಯುವ ಅಭ್ಯಾಸ. ಅದಕ್ಕಾಗಿ ನಾನೇ ಇಲ್ಲಿ ಚಾಹ ತಯಾರಿಸುತ್ತೇನೆ. ಈ ವೇಳೆ ಪರ ಊರಿನಿಂದ ಬಂದ ಚಾಲಕರಿಗೂ ಚಹಾ ಬೇಕಾಗುತ್ತದೆ. ಅವರಿಗೂ ಕೊಡುತ್ತೇನೆ ಎನ್ನುತ್ತಾರೆ.

ಪ್ರಸಕ್ತ ತನ್ನಲ್ಲಿಗೆ ಬರುವ ಗ್ರಾಹಕರ ಸಂಖ್ಯೆ ದೊಡ್ಡದಿರುವ ಕಾರಣಕ್ಕೆ ಬೆಂಗಳೂರಿನ ಪ್ರಖ್ಯಾತ ಕಂಪನಿಯಲ್ಲಿ ದುಡಿಯುತ್ತಿದ್ದ ಮಗ ಜಯದೀಪ್‌ನನ್ನೂ ಕರೆಸಿಕೊಂಡಿದ್ದಾರೆ. ಮಾಸಿಕ ಸಂಬಳ ಪಡೆಯುವ ಕಾಯಕಕ್ಕಿಂತ ತಾನೇ ದುಡಿದು ತಾನೇ ಸಂಪಾದಿಸುವ ಸ್ವಾವಲಂಬಿ ಬದುಕಿನ ಸವಿಯನ್ನು ಉಣಿಸಿ ತನ್ನ ಕಾಯಕವನ್ನು ಮಗನಿಂದ ಮುಂದುವರಿಸುವ ಯತ್ನದಲ್ಲಿದ್ದಾರೆ.

ತಡ ರಾತ್ರಿವರೆಗೂ ಸೇವೆ ನೀಡುತ್ತಾ ಚಾಲಕರ ಪಾಲಿಗೆ ಆಪದ್ಭಾಂದವರಂತೆ ತನ್ನ ಕಾಯಕವನ್ನು ಮಾಡುತ್ತಿರುವ ಜಯರಾಮ ಅವರ ಕಾರ್ಯಚಟುವಟಿಕೆ ನಾಗರಿಕ ಸಮಾಜಕ್ಕೆ ಮೇಲ್ಪಂಕ್ತಿಯಾಗಿದೆ

.