ಹಿಂದಿನ ಉಪಾಧ್ಯಕ್ಷ ಡಿ.ಕೆ.ಕುಮಾರ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ಜಯರಾಮೇಗೌಡ ಹೊರತು ಪಡಿಸಿ ಉಳಿದ ಸದಸ್ಯರು ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಯಾದ ಸಹಾಯಕ ನಿರ್ದೇಶಕ ರಮೇಶ್ ಘೋಷಿಸಿದರು.

ಪಾಂಡವಪುರ:

ತಾಲೂಕಿನ ಮೇಲುಕೋಟೆ ಗ್ರಾಪಂ ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಸದಸ್ಯ ಜಯರಾಮೇಗೌಡ ಅವಿರೋಧವಾಗಿ ಆಯ್ಕೆಯಾದರು.

ಹಿಂದಿನ ಉಪಾಧ್ಯಕ್ಷ ಡಿ.ಕೆ.ಕುಮಾರ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ಜಯರಾಮೇಗೌಡ ಹೊರತು ಪಡಿಸಿ ಉಳಿದ ಸದಸ್ಯರು ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಯಾದ ಸಹಾಯಕ ನಿರ್ದೇಶಕ ರಮೇಶ್ ಘೋಷಿಸಿದರು.

ಜಿಪಂ ಮಾಜಿ ಸದಸ್ಯ ಎಚ್.ಮಂಜುನಾಥ್ ಮಾತನಾಡಿ, ಮೇಲುಕೋಟೆ ಗ್ರಾಪಂ ಜೆಡಿಎಸ್ ತೆಕ್ಕೆಯಲ್ಲಿದ್ದು, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಮಾರ್ಗದರ್ಶನದೊಂದಿಗೆ ನೂತನ ಉಪಾಧ್ಯಕ್ಷರಾಗಿ ಜಯರಾಮೇಗೌಡರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದರು.

ಕ್ಷೇತ್ರದ ಶಾಸಕ ದರ್ಶನ್‌ಪುಟ್ಟಣ್ಣಯ್ಯ ತಾಲೂಕಿನ ಅಭಿವೃದ್ಧಿ ಪಡಿಸಲು ವಿಫಲರಾಗಿದ್ದಾರೆ. ರಸ್ತೆಗಳ ಅಭಿವೃದ್ಧಿ ಕುಂಠಿತಗೊಂಡಿದೆ, ಶಾಸಕರು ಜವಾಬ್ದಾರಿ ಹೊತ್ತು ಕೆಲಸ ಮಾಡಬೇಕು ಎಂದರು.

ಈ ವೇಳೆ ಗ್ರಾಪಂ ಅಧ್ಯಕ್ಷೆ ಭವಾನಿಹರಿಧರ್, ಸದಸ್ಯರಾದ ತಿರುಮಲೈ, ಮಣಿಮುರುಗನ್, ಲಕ್ಷ್ಮಮ್ಮ, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ಎ.ಮಲ್ಲೇಶ್, ಮುಖಂಡರಾದ ಅಶ್ವಥ್‌ಕುಮಾರೇಗೌಡ, ಶಂಭೂನಹಳ್ಳಿ ಆನಂದ್, ಜಯಲಕ್ಷ್ಮಿಪುಟ್ಟರಾಜು, ನಿಂಗೇಗೌಡ, ಪುಳಿಯೊಗರೆ ರವಿ, ಈಶಮುರುಳಿ, ಯೋಗನರಸಿಂಹ, ಅಮಾಸೆಸಿದ್ದೇಗೌಡ, ಆನಂದ್ ಆಳ್ವ, ಪಿಡಿಓ ರಾಜೇಶ್ ಸೇರಿದಂತೆ ಹಲವರು ಇದ್ದರು.

ವಿದ್ಯಾರ್ಥಿ ದಿಸೆಯಲ್ಲಿ ಒಮ್ಮೆಯಾದರೂ ಕವಿಶೈಲ ವೀಕ್ಷಿಸಿ: ಎಸ್.ಎನ್.ಜಯರಾಂ

ಕಿಕ್ಕೇರಿ:

ಕುವೆಂಪು ಎಂದರೆ ಒಂದು ಕನ್ನಡ ಸಾರಸ್ವತ ಲೋಕದ ಶಕ್ತಿ. ವಿದ್ಯಾರ್ಥಿ ಜೀವನದಲ್ಲಿ ಒಮ್ಮೆಯಾದರೂ ಕವಿಶೈಲ್ ವೀಕ್ಷಿಸಬೇಕು ಎಂದು ಕಿಕ್ಕೇರಿ ಇನ್ಸ್ ಪೆಕ್ಟರ್ ಎಸ್.ಎನ್. ಜಯರಾಂ ಹೇಳಿದರು.

ಪಟ್ಟಣದ ಕೆಪಿಎಸ್ ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ಎನ್‌ಎಸ್‌ಎಸ್ ಘಟಕ ಹಮ್ಮಿಕೊಂಡಿದ್ದ ಕುವೆಂಪು ಜಯಂತಿಯಲ್ಲಿ ಮಾತನಾಡಿ, ಕುವೆಂಪು ಸಾಹಿತ್ಯವೇ ಒಂದು ಚೇತನ. ಜಾತಿ, ವರ್ಗವನ್ನು ವಿರೋಧಿಸಿ ವಿಶ್ವಮತ ಇರುವುದು ಒಂದೇ. ಅದು ಮನುಜಮತ ಎಂದು ತೋರಿಸಿಕೊಟ್ಟು ವಿಶ್ವಮಾನವರಾದರು ಎಂದರು.

ಪ್ರಕೃತಿಯೊಂದಿಗೆ ಬದುಕಿ ತಮ್ಮ ಪ್ರತಿ ಕಾವ್ಯ, ಸಾಹಿತ್ಯದಲ್ಲಿ ಪ್ರಕೃತಿಯ ಚಿತ್ರಣವನ್ನು ತಿಳಿಸುತ್ತ ಸಮಾಜದ ಅಂಕುಡೊಂಕುಗಳನ್ನು ನೇರವಾಗಿ ತಿಳಿಸಿಕೊಟ್ಟ ರಸಋಷಿ ಕುವೆಂಪು. ಮಾತೃಭಾಷೆ ಸರ್ವಶ್ರೇಷ್ಠವಾಗಿದ್ದು, ಜ್ಞಾನಾರ್ಜನೆಗೆ ಬೇಕಿರುವುದು ಪರಭಾಷೆಯಲ್ಲ ಮಾತೃಭಾಷೆ ಎಂಬುದನ್ನು ತಮ್ಮ ಆರಂಭಿಕ ಕಾವ್ಯ ಲೋಕದ ಪಯಣದಲ್ಲಿ ಸಾಬೀತುಪಡಿಸಿದರು ಎಂದರು.

ಸುಂದರ ಕನ್ನಡ ಭಾಷೆಯಲ್ಲಿ ಎಲ್ಲ ಸೊಗಡಿದೆ. ಇದನ್ನರಿತು ಮೊದಲು ಕನ್ನಡ ಭಾಷೆ ಪ್ರೀತಿಸಿ ಅನ್ಯಭಾಷೆಗಳನ್ನು ಜ್ಞಾನಾರ್ಜನೆಗೆ ಕಲಿಯಿರಿ ಎಂದರು.

ಪ್ರಾಂಶುಪಾಲ ಎಂ.ಆರ್.ಸಹದೇವ್ ಮಾತನಾಡಿ, ಕುವೆಂಪು ಕನ್ನಡ ಸಾರಸ್ವತ ಲೋಕ ಗಟ್ಟಿಗೊಳಿಸಿದ್ದಾರೆ. ಇವರ ಮಂತ್ರಮಾಂಗಲ್ಯ ಸರಳ ವಿವಾಹದಿಂದ ಶ್ರೀಸಾಮಾನ್ಯರನ್ನು ಸಾಲ ಶೂಲೆಯಿಂದ ದೂರಮಾಡಲಿದೆ ಎಂದರು.

ಕುವೆಂಪು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕುವೆಂಪು ಸ್ಮರಣೆ ಮಾಡಲಾಯಿತು. ಎಎಸ್‌ಐ ರಮೇಶ್, ಎನ್‌ಎಸ್‌ಎಸ್ ಘಟಕಾಧಿಕಾರಿ ಜಿ.ಎಸ್. ಕುಮಾರಸ್ವಾಮಿ, ಎನ್. ರವೀಂದ್ರ, ಎ.ಎಂ.ಮಂಜುನಾಥ್, ಎಸ್.ಡಿ. ಹರೀಶ್, ಎನ್.ಎ. ನಾಗೇಶ್, ಅರ್ಪಿತ ಇದ್ದರು.