ಅರಣ್ಯ ಇಲಾಖೆ ಕಾಡಿನ ಬೆಳವಣಿಗೆಗೆ ಪೂರಕ ಕ್ರಮ ಕೈಗೊಳ್ಳಲು ವನ್ಯಜೀವಿ ಸಂರಕ್ಷಣಾಕ್ರಿಯಾ ತಂಡ ಒತ್ತಾಯ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಭದ್ರಾ ಅಭಯಾರಣ್ಯ ಹುಲಿ ಮೀಸಲು ಪ್ರದೇಶದಲ್ಲಿ ಹುಲಿ ಘರ್ಜನೆಗಿಂತ ಜೆಸಿಬಿ ಯಂತ್ರಗಳ ಸದ್ದು ಜೋರಾಗಿ ಪ್ರಾಣಿ ಪಕ್ಷಿಗಳ ಸ್ವಚ್ಛಂದತೆಗೆ ಮಾರಾಕವಾಗುತ್ತಿದೆ ಎಂದು ವನ್ಯಜೀವ ಸಂರಕ್ಷಕರು ಆತಂಕ ವ್ಯಕ್ತಪಡಿಸಿದ್ದಾರೆ.

ಭದ್ರಾ ಅಭಯಾರಣ್ಯದ ಮುತ್ತೋಡಿ ಮತ್ತು ಲಕ್ಕವಳ್ಳಿ ವಲಯಗಳಲ್ಲಿ ಕಾರ್ಮಿಕರಿಂದ ಮಾಡಿಸಬೇಕಾದ ಕೆಲಸಗಳನ್ನು ಜೆಸಿಬಿ ಯಂತ್ರ ಬಳಸಿ ಮಾಡಲಾಗುತ್ತಿದೆ. ಇದು ಮೀಸಲು ಮತ್ತು ಅಭಯಾರಣ್ಯದ ಕಾನೂನಿಗೆ ವಿರೋಧ ಮತ್ತು ನೇರ ಉಲ್ಲಂಘನೆ. ಈ ಎರಡೂ ವಲಯಗಳಲ್ಲಿ ಈಗಾಗಲೇ ಜೆಸಿಬಿ ಬಳಸಿ ಹುಲ್ಲುಗಾವಲನ್ನು ಪುನರ್ ಸ್ಥಿತಿಗೆ ತಂದು ಸಸ್ಯಾಹಾರಿ ಪ್ರಾಣಿಗಳಿಗೆ ಹುಲ್ಲು ಹಾಗೂ ಅವು ತಿನ್ನುವ ಹಸಿರು ಗಿಡಗಳನ್ನು ಸಮೃದ್ಧವಾಗಿ ದೊರಕಿಸುವ ಉದ್ದೇಶ ಹೊಂದಿದ್ದರೂ ಯಂತ್ರ ಬಳಕೆ ಕಾನೂನಿಗೆ ವಿರೋಧ.ವಾಗಿದೆ. ಈ ಹಿಂದೆ ಸಹ ಅಭಯಾರಣ್ಯದಲ್ಲಿ ಸಸ್ಯಾಹಾರಿ ಪ್ರಾಣಿಗಳು ಮೇಯದ ಪಾರ್ಥೇನಿಯಂ, ಯುಪಟೇರಿಯಂ ಮತ್ತು ಮೈಕೇನಿಯ ರಾಕ್ಷಸ ಕಳೆಗಳ ನಾಶ ಪಡಿಸಲು ಯಂತ್ರ ಬಳಸಿದಾಗ ಪರಿಸರಾಸಕ್ತರು ವಿರೋಧಿಸಿದಾಗ ಅರಣ್ಯಇಲಾಖೆ ಅಧಿಕಾರಿಗಳು ಈ ತಪ್ಪು ಪುನರಾವರ್ತನೆಯಾಗದು ಎಂದು ಭರವಸೆ ನೀಡಿದ್ದರು. ರಾಕ್ಷಸ ಕಳೆಗಳನ್ನು ಜೆಸಿಬಿ ಬಳಸಿ ನಿರ್ಮೂಲನ ಮಾಡುವಾಗ ಅಭಯಾರಣ್ಯದಲ್ಲಿ ಸಹಜವಾಗಿ ಬೆಳೆಯುವ ಮತ್ತು ಕಾಡು ಪ್ರಾಣಿಗಳು ತಿನ್ನುವ ಕಾಡುಗಿಡ ಮತ್ತು ಬಿದಿರು ಬೊಂಬಿನ ಸಸಿಗಳು ನಾಶವಾಗುವುದಲ್ಲದೆ, ನೆಲ ಹಾಗೂ ಕುರುಚಲು ಗಿಡ ಗಳಲ್ಲಿ ಗೂಡುಕಟ್ಟಿ ಮೊಟ್ಟೆಇಟ್ಟು ಪಕ್ಷಿಗಳು ಸಂತತಿ ಬೆಳೆಸುವುದಕ್ಕೂ ಇದು ಮಾರಕವಾಗುತ್ತದೆ.

ಭೂಮಿಯಲ್ಲೇ ಸಂಚರಿಸುವ ಹಾವು ಸೇರಿದಂತೆ ಸರೀ ಸೃಪಗಳು, ಹುತ್ತಗಳು ನಾಶವಾಗುತ್ತವೆ. ಅರಣ್ಯ ಇಲಾಖೆ ಈ ಸೂಕ್ಷ್ಮ ಸಂಗತಿಗಳನ್ನು ಆಲೋಚಿಸದೆ ಜೆಸಿಬಿಗಳನ್ನು ಅವ್ಯಾಹತವಾಗಿ ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.


ಈ ಹಿನ್ನೆಲೆಯಲ್ಲಿ ಬೇಡದ ರಾಕ್ಷಸ ಕಳೆಗಳನ್ನು ಮನುಷ್ಯ ಶಕ್ತಿ ಹಾಗೂ ಶ್ರಮ ಬಳಸಿ ಕೈನಿಂದ ಕಿತ್ತು ಹಾಕುವುದಕ್ಕೆಅರಣ್ಯ ಇಲಾಖೆ ಒತ್ತು ನೀಡಬೇಕು. ಅಭಯಾರಣ್ಯಗಳಲ್ಲಿ ಮತ್ತು ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಸಿರು ಸಮೃದ್ಧಿಯಾಗಿರಬೇಕು. ಆ ಹಿನ್ನೆಲೆಯಲ್ಲಿ ಉಪಯುಕ್ತ ಗಿಡಗಳ ಬೆಳವಣಿಗೆಗೆ ಹಾಗೂ ಹುಲ್ಲು ಹುಲುಸಾಗಿ ಬೆಳೆಯಲು ಮಾರಕವಾಗುವ ರಾಕ್ಷಸ ಕಳೆಗಳನ್ನು ಕಿತ್ತೆಸೆಯಬೇಕು. ಇದಕ್ಕೆಕಾರ್ಮಿಕರ ಬಳಕೆಯೇ ಸೂಕ್ತ. ಇದು ಕಾಡಿನ ಬೆಳವಣಿಗೆಗೂ ಪೂರಕ ಮತ್ತು ಸಸ್ಯಾಹಾರಿ ಪ್ರಾಣಿಗಳು ತಿನ್ನುವ ಹುಲ್ಲು ಮತ್ತು ಇತರ ಸಸ್ಯಗಳ ಬೆಳವಣಿಗೆಗೂ ಸಹಾಯಕವಾಗಲಿದೆ. ಜೆಸಿಬಿ ಬಳಕೆ ಕೇವಲ ತಾತ್ಕಾಲಿಕ ಕಳೆ ನಿವಾರಣೆಯ ಕ್ರಮವೇ ಹೊರತು, ಕಾಡಿನ ಬೆಳವಣಿಗೆಗೆ ಪೂರಕವಲ್ಲ. ಅರಣ್ಯ ಇಲಾಖೆ ಈ ಬಗ್ಗೆ ಯೋಚಿಸಬೇಕೆಂದು ವನ್ಯಜೀವಿ ಸಂರಕ್ಷಣಾಕ್ರಿಯಾ ತಂಡದ ಡಿ.ವಿ.ಗಿರೀಶ್‌ ಹಾಗೂ ಸ.ಗಿರಿಜಾಶಂಕರ್‌ ಒತ್ತಾಯಿಸಿದ್ದಾರೆ,

--ಫೋಟೋ

ಅಭಯಾರಣ್ಯದಲ್ಲಿ ಜೆಸಿಬಿ ಬಳಕೆ ಮಾಡಿ ಕಳೆ ಕಿತ್ತು ಹಾಕುತ್ತಿರುವುದು.