ಪುಟ್ಟರಾಜರ ಭವನ ನಿರ್ಮಾಣಕ್ಕಾಗಿ ಜೆಡಿಎಸ್ ಭಿಕ್ಷಾಟನೆ

| Published : Jan 11 2025, 12:46 AM IST

ಪುಟ್ಟರಾಜರ ಭವನ ನಿರ್ಮಾಣಕ್ಕಾಗಿ ಜೆಡಿಎಸ್ ಭಿಕ್ಷಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಹೃದಯ ಭಾಗದಲ್ಲಿರುವ ಪುಟ್ಟರಾಜ ಸ್ಮಾರಕ ಭವನ ಕಾಮಗಾರಿ ಹಲವಾರು ವರ್ಷಗಳಿಂದ ಅರ್ಧಕ್ಕೆ ನಿಂತಿದೆ. ಯಡಿಯೂರಪ್ಪ ಸರ್ಕಾರ ಅಧಿಕಾರದಲ್ಲಿದ್ದಾಗ ₹5 ಕೋಟಿ ಬಿಡುಗಡೆಯಾಗಿತ್ತು

ಗದಗ: ನಗರದ ವೀರೇಶ್ವರ ಪುಣ್ಯಾಶ್ರಮದ ಸಮೀಪದಲ್ಲಿ ಪಂ. ಪುಟ್ಟರಾಜ ಗವಾಯಿಗಳ ಸ್ಮಾರಕ ಭವನ ನಿರ್ಮಾಣ ಕಾಮಗಾರಿ ವಿಳಂಬಕ್ಕೆ ಕಾರಣವಾದ ಸರ್ಕಾರದ ನಡೆ ಖಂಡಿಸಿ ಜೆಡಿಎಸ್ ಕಾರ್ಯಕರ್ತರು ಶುಕ್ರವಾರ ಭಿಕ್ಷಾಟನೆ ನಡೆಸಿ ಜನರಿಂದ ಬಂದ ಹಣವನ್ನು ಸರ್ಕಾರಕ್ಕೆ ರವಾನಿಸಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ವೀರೇಶ್ವರ ಪುಣ್ಯಾಶ್ರಮದಿಂದ ಎಪಿಎಂಸಿ ಹಾಗೂ ಮುಖ್ಯ ರಸ್ತೆಯಲ್ಲಿ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಿಂದ ಭಿಕ್ಷೆ ಸ್ವೀಕರಿಸಿದರು.

ಈ ವೇಳೆ ಮಾತನಾಡಿದ ಗೋವಿಂದಗೌಡ್ರ, ನಗರದ ಹೃದಯ ಭಾಗದಲ್ಲಿರುವ ಪುಟ್ಟರಾಜ ಸ್ಮಾರಕ ಭವನ ಕಾಮಗಾರಿ ಹಲವಾರು ವರ್ಷಗಳಿಂದ ಅರ್ಧಕ್ಕೆ ನಿಂತಿದೆ. ಯಡಿಯೂರಪ್ಪ ಸರ್ಕಾರ ಅಧಿಕಾರದಲ್ಲಿದ್ದಾಗ ₹5 ಕೋಟಿ ಬಿಡುಗಡೆಯಾಗಿತ್ತು.ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ ಭವನ ನಿರ್ಮಾಣದ ಬಾಕಿ ಕಾಮಗಾರಿಗೆ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಎಚ್.ಕೆ. ಪಾಟೀಲರು ಸ್ಮಾರಕ ಭವನ ನಿರ್ಮಾಣಕ್ಕೆ ಅನುದಾನ ನೀಡುವ ಭರವಸೆ ನೀಡಿದ್ದರು. ಅವರ ಭರವಸೆ ಈವರೆಗೂ ಈಡೇರಿಲ್ಲ. ಮುಂಬರುವ ಬಜೆಟ್ ನಲ್ಲಿ ರಾಜ್ಯ ಸರ್ಕಾರ ಸ್ಮಾರಕ ಭವನ ನಿರ್ಮಾಣಕ್ಕೆಅನುದಾನ ಬಿಡುಗಡೆ ಮಾಡದಿದ್ದರೆ, ಅವಳಿ ನಗರದ ಮನೆ ಮನೆಗೆ ಹೋಗಿ ಭಿಕ್ಷಾಟನೆ ಮಾಡಿ ಸರ್ಕಾರದ ಮಾನ ಹರಾಜು ಹಾಕುವ ಜತೆಗೆ ಭವನ ಪೂರ್ಣಗೊಳಿಸಲು ಬೇಕಾದ ಹಣ ಭಿಕ್ಷಾಟನೆ ಮೂಲಕ ಸಂಗ್ರಹಿಸಿ ಸರ್ಕಾರಕ್ಕೆ ಕೊಟ್ಟು ಕಾಮಗಾರಿ ಪೂರ್ಣಗೊಳಿಸಲು ಒತ್ತಾಯಿಸಲಾಗುವುದು ಎಂದರು.

ಸಾಂಕೇತಿಕವಾಗಿ ನಡೆದ ಭಿಕ್ಷಾಟನೆಯಲ್ಲಿ ಸ್ವೀಕರಿಸಿದ ₹2350ನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ತಲುಪಿಸಲಾಗುವುದು ಎಂದರು.

ಈ ವೇಳೆ ಜೆಡಿಎಸ್ ಮುಖಂಡರಾದ ಜೋಸೆಫ್ ಉದೋಜಿ, ಗಿರೀಶ ಸಂಶಿ, ಎಂ.ಎಸ್. ಪರ್ತವಗೌಡ್ರ, ಪ್ರಜ್ವಲ್ ಪುಣೇಕರ, ಸಂತೋಷ ಪಾಟೀಲ, ರಮೇಶ ಹುಣಸಿಮರದ, ಕುಮಾರ ಜಿಗಳೂರ, ಮುತ್ತು ದರೋಜಿ, ಮೌಲಾಸಾಬ್‌, ಮಂಜುನಾಥ ಹುಲ್ಲೂರ, ಬೀರಪ್ಪ ಪುರದ, ನಿಂಗಪ್ಪ ಸೋಮನಕಟ್ಟಿ, ಸೈಯದ ಹಳ್ಳಿಕೇರಿ, ಖಾಜಾಸಾಬ್‌ ಕಿತ್ತೂರ ಇತರರು ಇದ್ದರು.