ಜೆಡಿಎಸ್-ಬಿಜೆಪಿ ಮೈತ್ರಿ ಸಂಬಂಧ ಹಾಲು - ಜೇನಿನಂತೆ: ಎಚ್‌ಡಿಕೆ

| Published : Mar 29 2024, 12:46 AM IST / Updated: Mar 29 2024, 03:53 PM IST

ಜೆಡಿಎಸ್-ಬಿಜೆಪಿ ಮೈತ್ರಿ ಸಂಬಂಧ ಹಾಲು - ಜೇನಿನಂತೆ: ಎಚ್‌ಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯಕ್ಕೆ ಸುಭದ್ರ ಸರ್ಕಾರದ ಅವಶ್ಯಕತೆ ಇದೆ. ಈ ಚುನಾವಣೆ ನಂತರ ಮುಂದಿನ ಡಿಸೆಂಬರ್ ತಿಂಗಳೊಳಗೆ ಸರ್ಕಾರ ಪತನವಾಗಲಿದೆ. ಸರ್ಕಾರ ಬೀಳಿಸುವುದಕ್ಕೆ ನಾವು, ವಿಜಯೇಂದ್ರ ಕಷ್ಟಪಡಬೇಕಿಲ್ಲ. ಅವರೇ ಅವರ ಸರ್ಕಾರವನ್ನು ಬೀಳಿಸಿಕೊಳ್ಳುತ್ತಾರೆ ಎಂದು ಕುಮಾರಸ್ವಾಮಿ ಭವಿಷ್ಯ ನುಡಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಕಾಂಗ್ರೆಸ್ ನವರು ಮೈತ್ರಿ ಹೆಸರಿನಲ್ಲಿ ನಮ್ಮ ಬೆನ್ನಿಗೆ ಚೂರಿ ಹಾಕಿದರು. ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಸಹಜವಾದ ಮೈತ್ರಿ. ರಾಜ್ಯದ ಅಭಿವೃದ್ಧಿಗಾಗಿ ಮೈತ್ರಿ ನಿರ್ಧಾರ ಮಾಡಲಾಗಿದೆ. ಎರಡೂ ಪಕ್ಷಗಳ ನಡುವಿನ ಹೊಂದಾಣಿಕೆ ಹಾಲು-ಜೇನಿನಂತೆ ಮಧುರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ಗುರುವಾರ ನಡೆದ ಜೆಡಿಎಸ್-ಬಿಜೆಪಿ ಸಮನ್ವಯ ಸಮಿತಿ ಸಭೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಹಿಂದೆ ಬಿಜೆಪಿ ಜೊತೆ ಸರ್ಕಾರ ಮಾಡಿದ ದಿನದಿಂದ ಜೆಡಿಎಸ್ ಪಕ್ಷವನ್ನು ಮುಗಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. 

ನಾನು ಕೊಟ್ಟ ೨೦ ತಿಂಗಳ ಆಡಳಿತವನ್ನು ಜನರು ಇಂದಿಗೂ ನೆನೆಯುತ್ತಿದ್ದಾರೆ. ಹಾಗಾಗಿ ಕಾಂಗ್ರೆಸ್ ಏನೇ ಕುತಂತ್ರ ಮಾಡಿದರೂ ಜೆಡಿಎಸ್ ಪಕ್ಷವನ್ನು ಮುಗಿಸಲು ಆಗಲ್ಲ ಎಂದು ತಿಳಿಸಿದರು.

ಅಧಿಕಾರ ಹಸ್ತಾಂತರಿಸಲಿಲ್ಲವೆಂಬ ಆರೋಪ: ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರವಿದ್ದಾಗ ಅಧಿಕಾರ ಹಸ್ತಾಂತರ ಮಾಡಲಿಲ್ಲ ಎಂಬ ಆರೋಪವನ್ನು ನನ್ನ ಮೇಲೆ ಮಾಡುತ್ತಾರೆ. ನಾನು ಮಾಡದಿರುವ ತಪ್ಪನ್ನು ನನ್ನ ತಲೆ ಮೇಲೆ ಹೊತ್ತಿದ್ದೇನೆ. 

ಅದರಿಂದ ೧೭ ವರ್ಷ ವನವಾಸ ಅನುಭವಿಸಿದ್ದೇನೆ ಎಂದ ಕುಮಾರಸ್ವಾಮಿ, ಕಾಂಗ್ರೆಸ್ ಅಧಿಕಾರಕ್ಕೆ ಬರಲಿಕ್ಕೆ ಕಾರಣ ಅವರ ಶಕ್ತಿ ಅಲ್ಲ. ಜೆಡಿಎಸ್-ಬಿಜೆಪಿ ಹೊಂದಾಣಿಕೆಯಾಗದೆ ನಮ್ಮ ನಡುವೆಯೇ ಉಂಟಾದ ಪೈಪೋಟಿ ಅವರಿಗೆ ಲಾಭವಾಗಿದೆ. ಕಾಂಗ್ರೆಸ್ ಸರ್ಕಾರ ಆಕಸ್ಮಿಕವಾಗಿ ಅಸ್ತಿತ್ವಕ್ಕೆ ಬಂದಿರುವ ಸರ್ಕಾರ ಎಂದು ವ್ಯಂಗ್ಯವಾಡಿದರು.

ನರೇಂದ್ರ ಮೋದಿ ಪ್ರಧಾನಿಯಾದರೆ ದೇಶ ಬಿಡುತ್ತೇನೆ ಎಂದು ದೇವೇಗೌಡರು ಹೇಳಿರಲಿಲ್ಲ. ರಾಜ್ಯಸಭೆ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದಿದ್ದರು. ಚುನಾವಣೆ ಸಮಯದಲ್ಲಿ ಹೇಳಿಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ ಎಂದರಲ್ಲದೆ, ಮೋದಿ ಅವರು ದೇವೇಗೌಡರನ್ನು ತಂದೆ ಸಮನಾಗಿ ನಡೆಸಿಕೊಂಡು ಗೌರವ ಕೊಡುತ್ತಾರೆ. 

ಆದರೆ ಸಿದ್ದರಾಮಯ್ಯ ಹಿರಿತನವನ್ನು ಮರೆತು ದೇವೇಗೌಡರನ್ನು ಹೀಯಾಳಿಸುತ್ತಾರೆ. ಇದೇ ಸಿದ್ದರಾಮಯ್ಯಗೂ ಮೋದಿಗೂ ಇರುವ ವ್ಯತ್ಯಾಸ ಎಂದು ತಿವಿದರು.

ಡಿಸೆಂಬರ್‌ಗೆ ಸರ್ಕಾರ ಪತನ: ರಾಜ್ಯಕ್ಕೆ ಸುಭದ್ರ ಸರ್ಕಾರದ ಅವಶ್ಯಕತೆ ಇದೆ. ಈ ಚುನಾವಣೆ ನಂತರ ಮುಂದಿನ ಡಿಸೆಂಬರ್ ತಿಂಗಳೊಳಗೆ ಸರ್ಕಾರ ಪತನವಾಗಲಿದೆ. ಸರ್ಕಾರ ಬೀಳಿಸುವುದಕ್ಕೆ ನಾವು, ವಿಜಯೇಂದ್ರ ಕಷ್ಟಪಡಬೇಕಿಲ್ಲ. ಅವರೇ ಅವರ ಸರ್ಕಾರವನ್ನು ಬೀಳಿಸಿಕೊಳ್ಳುತ್ತಾರೆ ಎಂದು ಭವಿಷ್ಯ ನುಡಿದರು.

ಕಾಂಗ್ರೆಸ್ ನವರು ಮೇಕೆದಾಟು ಅಣೆಕಟ್ಟೆಗಾಗಿ ಪಾದಯಾತ್ರೆ ಮಾಡಿದರು.ಇವತ್ತು ಏನಾಗಿದೆ. ಮೇಕೆದಾಟು ಕಟ್ಟಲು ಅನುಮತಿ ಕೇಳುತ್ತಿದ್ದಾರೆ. ಹಾಗಾದರೆ ಪಾದಯಾತ್ರೆ ಯಾಕೆ ಮಾಡಿದಿರಿ?. 

ನಿಮ್ಮ ಅಂಗ ಪಕ್ಷ ಡಿಎಂಕೆ ಪ್ರಣಾಳಿಕೆಯಲ್ಲಿ ಮೇಕೆದಾಟು ಕಟ್ಟಲು ಅವಕಾಶ ನೀಡುವುದಿಲ್ಲ ಎಂದಿದ್ದಾರೆ. ಪೇಪರ್- ಪೆನ್ನು ಕೊಟ್ಟರೆ ನಾಳೆ ಬೆಳಗ್ಗೆಯೇ ಮೇಕೆದಾಟು ಅಣೆಕಟ್ಟು ನಿರ್ಮಿಸುವುದಾಗಿ ಹೇಳಿದರಲ್ಲ ಈಗ ಏನಾಗಿದೆ?, ಸವಾಲಾಗಿ ಸ್ವೀಕರಿಸಿ ಮೇಕೆದಾಟು ಯೋಜನೆ ಜಾರಿಗೊಳಿಸಿ. ಮೇಕೆದಾಟು ಹೆಸರೇಳಿಕೊಂಡು ರಾಜಕಾರಣ ಮಾಡುವ ದರಿದ್ರ ದೇವೇಗೌಡರಿಗೆ ಬಂದಿಲ್ಲ ಎಂದು ಚುಚ್ಚಿ ನುಡಿದರು.

ಪಾದಯಾತ್ರೆಯಿಂದ ಅಣೆಕಟ್ಟು ಕಟ್ಟಲಾಗದು: ಪಾದಯಾತ್ರೆಯಿಂದ ಅಣೆಕಟ್ಟು ನಿರ್ಮಾಣ ಮಾಡಲಾಗದು. ಪ್ರಾಧಿಕಾರದಲ್ಲಿ ಸರಿಯಾದ ವಾದ ಮಂಡನೆ ಆಗಬೇಕು. ಬಿರಿಯಾನಿ ತಿಂದು ಪಾದಯಾತ್ರೆ ಮಾಡಿದರೆ ಅಣೆಕಟ್ಟು ಕಟ್ಟಲಾಗುವುದಿಲ್ಲ ಎಂದ ಕುಮಾರಸ್ವಾಮಿ, ಹೆಚ್ಚಿನ ಸೀಟು ಪಡೆಯುವ ಉದ್ದೇಶದಿಂದ ಅಮಿತ್ ಶಾ ಅವರನ್ನು ಭೇಟಿ ಮಾಡಲಿಲ್ಲ.ಮೇಕೆದಾಟು ವಿಚಾರದಲ್ಲಿ ಯಾವ ರೀತಿ ಮುಂದುವರಿಯಬೇಕು ಎಂದು ಚರ್ಚೆ ಮಾಡಲು ಹೋಗಿದ್ದೆವು ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಸಾ.ರಾ.ಮಹೇಶ್, ಡಾ.ಸಿ.ಎನ್.ಅಶ್ವತ್ಥ ನಾರಾಯಣಗೌಡ, ಕೆ.ರಾಮದಾಸ್, ಕೆ.ಸಿ.ನಾರಾಯಣಗೌಡ, ಶಾಸಕ ಎಚ್.ಟಿ.ಮಂಜು, ಮಾಜಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಕೆ.ಸುರೇಶ್‌ಗೌಡ, ಡಾ.ಕೆ.ಅನ್ನದಾನಿ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಜೆಡಿಎಸ್ ಮುಖಂಡ ಬಿ.ಆರ್.ರಾಮಚಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಪಿಇಟಿ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿಪಿ ಉಮೇಶ್ ಇತರರಿದ್ದರು.