ಸಾಮಾನ್ಯ ಸಭೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಜಟಾಪಟಿ

| Published : May 22 2025, 12:55 AM IST

ಸಾರಾಂಶ

ನೀರಿನ ತೆರಿಗೆ ಕಟ್ಟಿಲ್ಲ ಎಂದು ನಗರಸಭೆಯ ಅಧಿಕಾರಿಗಳು ಆರೋಪ ಮಾಡುತ್ತಾರೆ. ಇದುವರೆಗೂ ನೀರಿನ ತೆರಿಗೆ ಕಟ್ಟುವಂತೆ ಯಾವ ಅಧಿಕಾರಿಗಳೂ ಬಂದಿಲ್ಲ ಎಂದು ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಕನಕಪುರ

ನಗರಸಭೆ ಸಾಮಾನ್ಯ ಸಭೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರು, ಪರಸ್ಪರ ಆರೋಪ ಪ್ರತ್ಯಾರೋಪದ ಮೂಲಕ ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದ ಘಟನೆ ಜರುಗಿತು.

ನಗರಸಭೆ ಸಭಾಂಗಣದಲ್ಲಿ ನಗರಸಭಾ ಅಧ್ಯಕ್ಷೆ ಹೆಮರಾಜು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಗರದ ಕುರುಪೇಟೆ ಐದನೇ ವಾರ್ಡಿನ ಜೆಡಿಎಸ್ ಸದಸ್ಯ ಲೋಕೇಶ್ ಮಾತನಾಡಿ, ಪಟ್ಟಣದ ಅಭಿವದ್ಧಿಗೆ ಸಂಬಂಧಿಸಿದಂತೆ ಐದನೇ ವಾರ್ಡಿನಲ್ಲಿ ರಸ್ತೆ, ಮೋರಿಗಳ ದುರಸ್ತಿಯಾಗಿಲ್ಲ. ಹಿಂದಿನ ಸದಸ್ಯರ ಕಾಲದಿಂದಲೂ ಜನರು ನೀರಿನ ತೆರಿಗೆ ಹಣವನ್ನು ಕಟ್ಟದೆ ಬಾಕಿ ಉಳಿಸಿಕೊಂಡಿದ್ದು ಪಾರದರ್ಶಕವಾಗಿ ಅಭಿವೃದ್ಧಿಯ ಬಗ್ಗೆ ಕೇಳಿದರೆ ನೀರಿನ ತೆರಿಗೆ ಕಟ್ಟಿಲ್ಲ ಎಂದು ನಗರಸಭೆಯ ಅಧಿಕಾರಿಗಳು ಆರೋಪ ಮಾಡುತ್ತಾರೆ. ಇದುವರೆಗೂ ನೀರಿನ ತೆರಿಗೆ ಕಟ್ಟುವಂತೆ ಯಾವ ಅಧಿಕಾರಿಗಳೂ ಬಂದಿಲ್ಲ ಎಂದು ಆರೋಪಿಸಿದರು.

ಆಶ್ರಯ ಯೋಜನೆಯಡಿಯಲ್ಲಿ ಸ್ಲಂ ಬೋರ್ಡಿನಿಂದ ಮನೆಗಳನ್ನು ಮಂಜೂರು ಮಾಡಲಾಗಿದೆ, ಮನೆಗಳು ಅರ್ಧಕ್ಕೆ ನಿಂತು ಹೋಗಿದ್ದು ಮನೆಗಳು ನಿಜವಾದ ಬಡವರಿಗೆ ನೀಡಿಲ್ಲ. ಉಳ್ಳವರ ಪಾಲಾಗಿವೆ ಹಾಗೂ ಹಲವು ನಗರಸಭಾ ಸದಸ್ಯರು ಹತ್ತಕ್ಕೂ ಹೆಚ್ಚು ನಿವೇಶನಗಳನ್ನು ಹೊಂದಿದ್ದಾರೆ, ಕೂಡಲೇ ಅಂತವರನ್ನು ಗುರುತಿಸಿ ನಿಜವಾದ ಫಲಾನುಭವಿಗಳಿಗೆ ಹಂಚಿಕೆ ಮಾಡುವಂತೆ ಆಗ್ರಹಿಸಿದರು.

ಇದರಿಂದ ಬೇಸರಗೊಂಡ ಕೆಲವು ಕಾಂಗ್ರೆಸ್ ಸದಸ್ಯರು ಮಾತನಾಡಿ, ಯಾವ ಸದಸ್ಯರು ಹತ್ತು ನಿವೇಶನಗಳನ್ನು ಇಟ್ಟುಕೊಂಡಿದ್ದಾರೆ ಎಂಬುಂದು ತಿಳಿಯಬೇಕು, ಒಂದು ವೇಳೆ ಇದು ನಿಜವಾದರೆ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು, ಇದು ಸದಸ್ಯ ಲೋಕೇಶ್ ಅವರ ಸಮ್ಮುಖದಲ್ಲೇ ನಡೆಯಲಿ ಸಭೆಯ ನಂತರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸೋಣ ಎಂದು ಹೇಳಿದಾಗ ಮಾತಿನ ಗದ್ದಲಕ್ಕೆ ಕಾರಣವಾಯಿತು.

ಹಿಂದಿನ ಸಭೆಯಲ್ಲಿ ಕನಕಪುರದಿಂದ ಬೆಂಗಳೂರಿಗೆ ಹೋಗುವ ಅಶ್ವಮೇಧ ಬಸ್ಸುಗಳನ್ನು ಸಿಲ್ಕ್ ಫಾರಂ ಮೆಟ್ರೋ ರೈಲು ನಿಲ್ದಾಣದಲ್ಲಿ ನಿಲ್ಲಿಸುವಂತೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ವಾಹನ ನಿಲುಗಡೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು.ನೋಂದಣಿ ಪಾತ್ರಗಳನ್ನು ನೋಂದಾಯಿಸಿದಾಗ ಜೆ ಸ್ಲಿಪ್ ಪುಷ್ ಆಗುವುದಿಲ್ಲ. ಖಾತೆ ಮಾಡಲು ವಿಳಂಬವಾಗುತ್ತಿದೆ. ಅದನ್ನು ಕೂಡಲೇ ಸರಿಪಡಿಸಬೇಕು, ವಾರ್ಡ್ ವಿಂಗಡಣೆ ಬಗ್ಗೆ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಮಾಹಿತಿಯನ್ನು ನೀಡುವಂತೆ ಕೇಳಿದಾಗ ಇದಕ್ಕೆ ಸಂಬಂಧಿಸಿದಂತೆ ಡಿಆರ್ ಕಚೇರಿಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು ಆದಷ್ಟು ಬೇಗನೆ ಸರಿಪಡಿಸುವು ದಾಗಿ ಅಧಿಕಾರಿ ರಾಜೇಶ್ವರಿ ತಿಳಿಸಿದರು.

ಆಹಾರ ಇಲಾಖೆಯಲ್ಲಿ ಬಯೋಮೆಟ್ರಿಕ್ ಸಮಸ್ಯೆ ಇದ್ದು ನಗರದಲ್ಲಿ ನಾಲ್ಕು ಗ್ರಾಮೀಣ ಪ್ರದೇಶದಲ್ಲಿ ಹದಿನೇಳು ರೇಷನ್ ಕಾರ್ಡ್ ಗಳ ಸಮಸ್ಯೆ ನಮ್ಮ ಗಮನಕ್ಕೆ ಬಂದಿದ್ದು ಈಗಾಗಲೇ ಅವುಗಳನ್ನು ಸರಿಪಡಿಸುವುದಾಗಿ ಶಿರಸ್ತೇದಾರ್ ಗಣೇಶ್ ತಿಳಿಸಿದರು.

ನಗರಸಭೆಯಲ್ಲಿ ಕೋರ್ಟ್ ಆದೇಶ ನೀಡಿದರೂ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ನೀಡಲು ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿದರು,ಕೆಲವು ಭಾರಿ ತಾಂತ್ರಿಕ ದೋಷಗಳಿಂದ ವಿಳಂಬವಾಗಿದೆ ಮುಂದೆ ತೊಂದರೆ ಆಗದಂತೆ ಗಮನಹರಿಸುವುದಾಗಿ ಅಧಿಕಾರಿ ವೆಂಕಟೇಶ್ ತಿಳಿಸಿದರು.

ಯುಜಿಡಿ ನೀರನ್ನು ಅರ್ಕಾವತಿ ನದಿಗೆ ಬಿಡದಂತೆ ಅಧಿಕಾರಿಗಳು ತಿಳಿಸಿದ್ದಾರೆ,ಬೆಂಗಳೂರಿನಿಂದ ಬರುವ ಕೊಳಚೆ ನೀರನ್ನು ಶುದ್ಧೀಕರಿಸಿ ನೀಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಎಂ ಕಾಂತರಾಜ್ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು,ನಗರದ ಕೆಲವು ಕಡೆ ಸ್ಥಳಾವಕಾಶದ ಕೊರತೆಯಿಂದ ಅಂಗನವಾಡಿ ಕಟ್ಟಡ ಗಳನ್ನು ನಿರ್ಮಿಸಲಾಗದೆ,ಕೆಲವು ಕಡೆ ಬಾಡಿಗೆ ಮನೆಯಲ್ಲಿ ಶಾಲೆಯನ್ನು ನಡೆಸಲಾಗುತ್ತಿತ್ತು, ಕೋಟೆ, ಕುರುಪೇಟೆ, ಹೌಸಿಂಗ್ ಬೋರ್ಡ್, ಐಪಿಪಿ ಆಸ್ಪತ್ರೆಯ ನೀಲಕಂಠೇಶ್ವರ ಬಡಾವಣೆ, ಬಿಜಿಎಸ್ ಬಡಾವಣೆ,ಲಕ್ಷ್ಮಣ ಲೇಔಟ್, ಡೋಂಗಾಣಿ ದೊಡ್ಡಿ,ಅಜೀಜ್ ನಗರ ಸೇರಿದಂತೆ ಹಲವು ಕಡೆ ಸ್ಥಳಗಳನ್ನು ಗುರುತಿಸಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭ ಮಾಡುವುದಾಗಿ ಆಯುಕ್ತ ಎಂ ಎಸ್ ಮಹದೇವ ತಿಳಿಸಿದರು.

ವೃತ್ತಿನಿರತ ಪತ್ರಕರ್ತರಿಗೆ ನಗರಸಭಾ ನಿಧಿಯಿಂದ ಲ್ಯಾಪ್ ಟಾಪ್ ನೀಡುವಂತೆ ಮನವಿ ಮಾಡಲಾಗಿತ್ತು. ಅದಕ್ಕೆ ಸರ್ವ ಸದಸ್ಯರ ಒಪ್ಪಿಗೆ ಪಡೆದು, ನೈಜ ಪತ್ರಕರ್ತರಿಗೆ ಸಹಕರಿಸುವುದಾಗಿ ನೀಡುವುದಾಗಿ ಭರವಸೆ ನೀಡಿದರು.

ನಗರಸಭಾ ಉಪಾಧ್ಯಕ್ಷ ಸೈಯ್ಯದ್ ಸಾಧಿಕ್,ಮಾಜಿ ಅಧ್ಯಕ್ಷರಾದ ಮೀಸೆ ವೆಂಕಟೇಶ್, ಲಕ್ಷ್ಮೀದೇವಿ,ಮಾಜಿ ಉಪಾಧ್ಯಕ್ಷ ಗುಂಡಣ್ಣ, ಸದಸ್ಯರಾದ ಕಾಂತರಾಜು,ಪಿ ವಿಜಯಕುಮಾರ್, ರಾಮದಾಸ, ನಿಷ್ಕಲ ಮಲ್ಲೇಶ್, ನೀಲಮ್ಮ, ಲಕ್ಷ್ಮೀದೇವಿ, ಸರಳ, ಜಯರಾಮು ಸ್ಟುಡಿಯೋ ಚಂದ್ರು, ನಾಗರಾಜು ಪೌರಾಯುಕ್ತ ಎಂ.ಎಸ್. ಮಹದೇವ ಅಧಿಕಾರಿಗಳಾದ ಪರಿಸರ ಧನಂಜಯ, ನಟರಾಜ್, ಶಶಿಕಲಾ, ಪ್ರಕಾಶ್, ರಾಘಯ್ಯ, ಗಿರೀಶ್, ರಘು ಹಾಜರಿದ್ದರು.ಕೆ ಕೆ ಪಿ ಸುದ್ದಿ 02: ನಗರಸಭೆ ಸಭಾಂಗಣದಲ್ಲಿ ನಗರಸಭಾ

ಅಧ್ಯಕ್ಷೆ ಹೇಮಾ ರಾಜು ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.