ವಸತಿ ಸಚಿವ ಜಮೀರ್ ಅಹಮದ್ ವಜಾಗೆ ಜೆಡಿಎಸ್ ಆಗ್ರಹ

| Published : Jul 01 2025, 01:48 AM IST

ವಸತಿ ಸಚಿವ ಜಮೀರ್ ಅಹಮದ್ ವಜಾಗೆ ಜೆಡಿಎಸ್ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ವಸತಿ ಸಚಿವ ಜಮೀರ್ ಅಹಮದ್ ಉಚ್ಚಾಟನೆಗೆ ಆಗ್ರಹಿಸಿ ಜಾತ್ಯತೀತ ಜನತಾದಳದ ಕಾರ್ಯಕರ್ತರು ಸೋಮವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ವಸತಿ ಯೋಜನೆಗಳಲ್ಲಿ ಮಿತಿ ಮೀರಿದ ಭ್ರಷ್ಚಾಚಾರದಲ್ಲಿ ನಿರತರಾಗಿರುವ ಸಜಿವ ಜಮೀರ್ ಅಹಮದ್ ಅವರನ್ನು ವಜಾಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಾತ್ಯತೀತ ಜನತಾದಳದ ಕಾರ್ಯಕರ್ತರು ಸೋಮವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಒನಕೆ ಓಬವ್ವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಸತಿ ಸಚಿವ ಜಮೀರ್ ಅಹಮದ್ ವಿರುದ್ಧ ಧಿಕ್ಕಾರ ಕೂಗಿದರು. ಇದೇ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಜಯಣ್ಣ, ವಸತಿ ಸಚಿವ ಜಮೀರ್ ಅಹಮದ್ ಮನೆಗಳನ್ನು ನೀಡಲು ಬಡವರಿಂದ ಲಂಚ ಪಡೆದಿದ್ದಾರೆಂದು ಅವರ ಪಕ್ಷದ ಶಾಸಕರಾದ ಬಿ.ಆರ್‌.ಪಾಟೀಲ್, ರಾಜು ಕಾಗೆ ಆಪಾದಿಸುತ್ತಿದ್ದಾರೆ. ಬಿಟ್ಟಿ ಭಾಗ್ಯಗಳನ್ನು ನೀಡಿ ರಾಜ್ಯದ ಜನತೆಯನ್ನು ಮರಳು ಮಾಡುತ್ತಿರುವ ಸಿಎಂ ಸಿದ್ದರಾಮಯ್ಯನವರಿಂದ ಅಭಿವೃದ್ಧಿ ಕುಂಠಿತಗೊಂಡಿದೆ. ಕೂಡಲೆ ಸಚಿವ ಜಮೀರ್ ಅಹಮದ್‍ರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿರವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುವುದು ಬೇಡ ಎಂದು ಆಗ್ರಹಿಸಿದರು.

ಜೆಡಿಎಸ್ ನಿಕಟ ಪೂರ್ವ ಅಧ್ಯಕ್ಷ ಡಿ.ಯಶೋಧರ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗಿವೆ. ಸಿಎಂ ಸಿದ್ದರಾಮಯ್ಯ ಜನತೆಯನ್ನು ಉಚಿತ ಭಾಗ್ಯಗಳ ಭ್ರಮೆಯಲ್ಲಿ ತೇಲಿಸುತ್ತಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಲೂಟಿ ಹೊಡೆಯಲಾಗಿದೆ. ಮುಡಾ ಹಗರಣದಲ್ಲಿ ಭಾಗಿಯಾಗಿರುವ ಮುಖ್ಯಮಂತ್ರಿಗೆ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆಯಿಲ್ಲ. ಕೂಡಲೆ ರಾಜಿನಾಮೆ ನೀಡುವುದರ ಜತೆಗೆ ವಸತಿ ಜಮೀರ್ ಅಹಮದ್‍ರವನ್ನು ಸಚಿವ ಸ್ಥಾನದಿಂದ ಉಚ್ಚಾಟಿಸಬೇಕು. ಕಾಂಗ್ರೆಸ್‍ನಲ್ಲಿ ಗುಂಪುಗಾರಿಕೆ ಶುರವಾಗಿದೆ ಎಂದರು.

ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಲ್ಲ ಒಂದು ರೀತಿಯ ಹಗರಣದಲ್ಲಿ ಕಾಂಗ್ರೆಸ್ ಸರ್ಕಾರ ಸಿಲುಕಿಕೊಂಡಿದೆ. ವಸತಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವಾಗಿರುವುದನ್ನು ಸಂಪೂರ್ಣ ತನಿಖೆಗೆ ಒಳಪಡಿಸಬೇಕು. ಮುಂಬರುವ ಎಲ್ಲಾ ಚುನಾವಣೆಗಳಲ್ಲಿಯೂ ರಾಜ್ಯದ ಜನ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ತಕ್ಕ ಪಾಠ ಕಲಿಸಬೇಕೆಂದು ಮನವಿ ಮಾಡಿದರು.

ಹಿರಿಯೂರು ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ರವೀಂದ್ರಪ್ಪ ಮಾತನಾಡಿ, ರಾಜ್ಯದ ಜನ ಯಾರೂ ಉಚಿತ ಭಾಗ್ಯಗಳನ್ನು ಕೇಳಿಲ್ಲ. ಸಿದ್ದರಾಮಯ್ಯ ಪಂಚ ಗ್ಯಾರಂಟಿಗಳನ್ನು ಘೋಷಿಸಿ ಜನತೆಯನ್ನು ಸೋಮಾರಿಗಳನ್ನಾಗಿ ಮಾಡಿದ್ದಾರೆ. ವಸತಿ ಸಚಿವ ಜಮೀರ್ ಅಹಮದ್‍ರನ್ನು ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿದರು.

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಬಿ.ಕಾಂತರಾಜ್, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ, ಜಿಲ್ಲಾ ಕಾರ್ಯಾಧ್ಯಕ್ಷ ಜಿ.ಬಿ.ಶೇಖರ್, ಚಿತ್ರದುರ್ಗ ತಾಲೂಕು ಅಧ್ಯಕ್ಷ ತಿಮ್ಮಣ್ಣ, ಚಳ್ಳಕೆರೆ ತಾಲೂಕು ಅಧ್ಯಕ್ಷ ಪಿ.ಟಿ.ತಿಪ್ಪೇಸ್ವಾಮಿ, ಹಿರಿಯೂರು ತಾಲೂಕು ಅಧ್ಯಕ್ಷ ಹನುಮಂತರಾಯಪ್ಪ, ಹೊಳಲ್ಕೆರೆ ತಾಲೂಕು ಅಧ್ಯಕ್ಷ ಪರಮೇಶ್ವರಪ್ಪ, ಹೊಸದುರ್ಗ ತಾಲೂಕು ಅಧ್ಯಕ್ಷ ಗಣೇಶ್‍ಮೂರ್ತಿ, ಮೊಳಕಾಲ್ಮುರು ತಾಲೂಕು ಅಧ್ಯಕ್ಷ ವೀರಭದ್ರಣ್ಣ, ಶಿವಶಂಕರ್, ನಗರಸಭೆ ಸದಸ್ಯರುಗಳಾದ ಸೈಯದ್ ನಸ್ರುಲ್ಲಾ, ದೀಪಕ್, ಮಾಜಿ ಸದಸ್ಯ ತಿಪ್ಪೇಸ್ವಾಮಿ ಸೇರಿದಂತೆ ಜೆಡಿಎಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.