ಸಾರಾಂಶ
ಹಾಸನ: ಕೇಂದ್ರ ಸರ್ಕಾರದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಎಚ್.ಡಿ. ಕುಮಾರಸ್ವಾಮಿ ಬಗೆ ಅಸಭ್ಯ ಭಾಷೆ ಬಳಸಿರುವ ಮುಡಾ ವಿಶೇಷ ತನಿಖಾ ದಳದ ಅಧಿಕಾರಿ ಹಾಗೂ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಸೂಕ್ತ ತನಿಖೆ ನಡೆಸಲು ಆಗ್ರಹಿಸಿ ಜೆಡಿಎಸ್ ಪಕ್ಷದಿಂದ ಗುರುವಾರ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಛೇರಿ ಆವರಣಕ್ಕೆ ಬಂತು. ಈ ವೇಳೆ ಪ್ರತಿಭಟನಾಕಾರರು ಮಾತನಾಡಿ, ಜೆಡಿಎಸ್ ರಾಜ್ಯಾಧ್ಯಕ್ಷರಾದ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಐಪಿಎಸ್ ಅಧಿಕಾರಿ ಅಸಭ್ಯ ಭಾಷೆ ಬಳಸಿರುವ ಹದ್ದು ಮೀರಿದ ವರ್ತನೆ ಖಂಡನೀಯ. ಸುಳ್ಳು ಹೇಳಿ, ನಕಲಿ ದಾಖಲೆ ಸೃಷ್ಟಿಸಿ ಕರ್ನಾಟಕದಲ್ಲಿ ಉಳಿದುಕೊಂಡಿರುವ ಚಂದ್ರಶೇಖರ್, ತಮ್ಮ ಕುರ್ಚಿಗೆ ಕಂಠಕ ಬರದಿರಲಿ ಎಂದು ಸರ್ಕಾರ ಹಾಗೂ ಸಂಬಂಧಪಟ್ಟ ಸಚಿವರನ್ನು ಓಲೈಕೆ ಮಾಡಲು ರಾಜಕಾರಣಿಯಂತೆ ಹೇಳಿಕೆ ನೀಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಕರ್ನಾಟಕದ ಹೆಮ್ಮೆಯ ರಾಜಕಾರಣಿ ಎನಿಸಿಕೊಂಡಿರುವ ಕುಮಾರಸ್ವಾಮಿ ಅವರ ವಿರುದ್ಧ ಲಘು ಪದ ಬಳಕೆ ಮಾಡಿ ತಮ್ಮ ಅವಿವೇಕತನ ಪ್ರದರ್ಶನ ಮಾಡಿರುವ ಎಡಿಜಿಪಿ ಏನು ಸಾಚಾ ಅಲ್ಲ, ಅಕ್ರಮ, ಭ್ರಷ್ಟಾಚಾರದಲ್ಲಿ ಶಾಮೀಲಾಗಿದ್ದಾರೆ ಎಂದು ದೂರಿದರು. ಅಷ್ಟೇ ಅಲ್ಲ ಕ್ರಿಮಿನಲ್ ಪ್ರಕರಣಗಳಲ್ಲೂ ಭಾಗಿಯಾಗಿದ್ದಾರೆ. ಅನೇಕ ಪ್ರಕರಣ ಕೋರ್ಟ್ ಮೆಟ್ಟಿಲೇರಿವೆ. ಇಂಥವರು, ೨ ಬಾರಿ ಸಿಎಂ ಆಗಿ, ಹತ್ತು ಹಲವು ಜನಪರ ಕೆಲಸ ಮಾಡಿರುವ ಕುಮಾರಸ್ವಾಮಿ ವಿರುದ್ಧ ನಾಲಗೆ ಹರಿಯಬಿಟ್ಟಿರುವುದು ಸರಿಯಲ್ಲ. ಕೂಡಲೇ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ, ತನಿಖೆ ನಡೆಸಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ದುರ್ನಡತೆ ತೋರುವ ಮೂಲಕ ನಿಯಮ ಉಲ್ಲಂಘನೆ ಮಾಡಿರುವ ಅಧಿಕಾರಿಯನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಬೇಕು. ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಆದರೂ ಕಳಂಕಿತ ಅಧಿಕಾರಿ ಪರ ರಾಜ್ಯ ಸರ್ಕಾರ ವಿಪಕ್ಷ ನಾಯಕರ ವಿರುದ್ಧ ಮಾತನಾಡಲು ಬಿಟ್ಟಿದೆಯೇ ಎಂಬ ಅನುಮಾನ ಮೂಡುತ್ತದೆ ಎಂದರು.ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್. ಲಿಂಗೇಶ್, ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್, ಶಾಸಕ ಎ. ಮಂಜು, ಸಿ.ಎನ್. ಬಾಲಕೃಷ್ಣ ಮಾತನಾಡಿ, ಎಡಿಜಿಪಿಗೆ ಅಧಿಕಾರ ನೀಡಿರುವುದು ತನಿಖೆ ಮಾಡುವುದಕ್ಕಷ್ಟೆ. ಅದನ್ನು ಮಾಡಲಿ, ಎಲ್ಲೆ ಮೀರಿ ಪತ್ರ ಬರೆದು ಹಂದಿ ಪದ ಬಳಕೆ ಮಾಡಿರುವುದು ಖಂಡನೀಯ, ಈ ಪದ ಕೇವಲ ಕುಮಾರಸ್ವಾಮಿ ಅವರಿಗೆ ಅಷ್ಟೇ ಅಲ್ಲ, ಕಾಂಗ್ರೆಸ್‌ನವರಿಗೂ ಅನ್ವಯ ಆಗಲಿದೆ. ಯಾರಿಗೆ ಅಂದರೂ ಒಂದೆ. ಏಕೆಂದರೆ ನಾವೆಲ್ಲರೂ ಶಾಸಕಾಂಗದ ಪ್ರತಿನಿಧಿಗಳು. ಎಫ್‌ಐಆರ್ ಆದ ಮೇಲೆ ಜವಾಬ್ದಾರಿ ಸ್ಥಾನದಲ್ಲಿರದೆ ನೈತಿಕತೆಯಿಂದ ಸಿಎಂ ರಾಜೀನಾಮೆ ನೀಡಿ ತನಿಖೆಗೆ ಸಹಕಾರ ಕೊಡಲಿ ಎಂದರು.
ಶಂಕರ ಬಿದಿರಿ ಪ್ರಕರಣವನ್ನು ಸಿಎಂ ನೆನಪಿಸಿಕೊಳ್ಳಲಿ. ವಿಶೇಷ ತನಿಖಾ ದಳದ ಅಧಿಕಾರಿ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಇವರ ವಿರುದ್ಧವೂ ಪೊಲೀಸ್ ಠಾಣೆ, ಕೋರ್ಟ್‌ಗಳಲ್ಲಿ ದೂರು ಸಲ್ಲಿಕೆಯಾಗಿವೆ. ದಂಧೆ, ಸುಲಿಗೆ ಇತ್ಯಾದಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಇವರು, ಎರಡು ಬಾರಿ ಸಿಎಂ ಆಗಿ ತಮ್ಮದೇ ಅಭಿವೃದ್ಧಿ ಕೆಲಸ ಮಾಡಿರುವ ಕುಮಾರಸ್ವಾಮಿ ವಿರುದ್ಧ ನಾಲಗೆ ಹರಿಯಬಿಟ್ಟಿರುವುದು ಸರಿಯಲ್ಲ. ಇಂದು ಕುಮಾರಣ್ಣ ಅವರ ವಿರುದ್ಧ ಮಾತನಾಡಿರುವ ಅಧಿಕಾರಿ, ನಾಳೆ ಬೇರೆಯವರ ವಿರುದ್ಧವೂ ಮಾತನಾಡಬಹುದು. ಇದು ಸಮಸ್ತ ರಾಜಕಾರಣಿಗಳಿಗೆ ಮಾಡಿದ ಅವಮಾನ, ಆದರೆ ಕುಮಾರಸ್ವಾಮಿ ವಿರುದ್ಧ ನಿಂದನಾರ್ಹ ಪದ ಬಳಸಿರುವ ಅಧಿಕಾರಿಯನ್ನು ಕೂಡಲೇ ಅಮಾನತು ಮಾಡಿ, ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸುತ್ತೇವೆ ಎಂದರು.ಚಂದ್ರಶೇಖರ್ ಅವರು ಐಪಿಎಸ್ ಅಧಿಕಾರಿಯೋ ಅಥವಾ ರಾಜಕಾರಣಿಯೋ ಇಲ್ಲವೆ ಕಾಂಗ್ರೆಸ್ ಪಕ್ಷದ ವಕ್ತಾರರೋ ಎಂಬ ಅನುಮಾನ ಮೂಡಿದೆ. ದುರ್ನಡತೆ ತೋರುವ ಮೂಲಕ ನಿಯಮ ಉಲ್ಲಂಘನೆ ಮಾಡಿರುವ ಅಧಿಕಾರಿಯನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಬೇಕು. ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಭ್ರಷ್ಟ ಹಾಗೂ ಕಳಂಕಿತ ಅಧಿಕಾರಿ ವಿರುದ್ಧ ಹಲವು ಗಂಭೀರ ಆರೋಪ ಇದ್ರೂ ಯಾವುದೇ ಕ್ರಮ ಕೈಗೊಳ್ಳದ ರಾಜ್ಯ ಕಾಂಗ್ರೆಸ್ ಸರ್ಕಾರ ವಿಪಕ್ಷ ನಾಯಕರ ವಿರುದ್ಧ ಮಾತಾನಾಡಲು ಬಿಟ್ಟಿದೆಯೇ ಎಂಬ ಅನುಮಾನ ಮೂಡುತ್ತದೆ. ಇಂದು ಕುಮಾರಸ್ವಾಮಿ ಅವರ ವಿರುದ್ಧ ಮಾತನಾಡಿರುವ ಅಧಿಕಾರಿಯನ್ನು ಹೀಗೆಯೇ ಬಿಟ್ರೆ ನಾಳೆ ನಿಮ್ಮ ವಿರುದ್ಧವೂ ಮಾತಾನಾಡಬಹುದು. ಹಾಗಾಗಿ ತಪ್ಪಿತಸ್ಥ ಅಧಿಕಾರಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಸ್.ಎಸ್.ರಘುಗೌಡ, ಜೆಡಿಎಸ್ ವಕ್ತಾರ ಹೊಂಗೆರೆ ರಘು, ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಪರಮ ದೇವರಾಜೇಗೌಡ, ಮಂಜೇಗೌಡ, ಬೈಲಹಳ್ಳಿ ಸತ್ಯನಾರಾಯಣ, ಎನ್.ಆರ್. ಸಂತೋಷ್, ಲಕ್ಷ್ಮೇಗೌಡ, ಗಿರೀಶ್ ಚನ್ನವೀರಪ್ಪ ಇತರರು ಉಪಸ್ಥಿತರಿದ್ದರು.ಚಂದ್ರಶೇಖರ್ ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಕೀಳುಮಟ್ಟದ ಅಭಿರುಚಿ ಪ್ರದರ್ಶಿಸಿದ್ದರೂ, ಸಿಎಂ ಕೂಡ ಸಮರ್ಥನೆ ಮಾಡಿಕೊಂಡಿರುವುದು ವಿಷಾದನೀಯ.
- ಎಚ್.ಕೆ.ಕುಮಾರಸ್ವಾಮಿ, ಮಾಜಿ ಸಚಿವ