ಸಾರಾಂಶ
ಸಭೆ । ಸಂವಿಧಾನ ಅಭದ್ರತೆಗೆ ಕಾರಣವಾಗಿದೆ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣಜೆಡಿಎಸ್ ತನ್ನ ಸ್ವಾಭಿಮಾನವನ್ನು ಬಿಜೆಪಿಗೆ ಅಡ ಇಟ್ಟು ಕಾರ್ಯಕರ್ತರನ್ನು ದಿಕ್ಕಾಪಾಲು ಮಾಡಿ ಸಂವಿಧಾನದ ಅಭ್ರತೆಗೆ ಕಾರಣವಾಗಿದೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಎಚ್.ಎಸ್.ಮಂಜುನಾಥ್ ಆರೋಪಿಸಿದ್ದಾರೆ.
ಪಟ್ಟಣದ ಅರಳೀಕಟ್ಟೆ ಬಳಿಯ ರೈತ ಸಂಘದ ಕಚೇರಿಯಲ್ಲಿ ಸೋಮವಾರ ಜನಪರ ಚಳುವಳಿಗಳ ಒಕ್ಕೂಟ ಆಯೋಜಿಸಿದ್ದ ಪ್ರಗತಿಪರ ಸಂಘಟನೆಗಳ ಮುಖಂಡರ ಸಭೆಯಲ್ಲಿ ಮಾತನಾಡಿ, ರೈತರು, ಕಾರ್ಮಿಕರು, ದಲಿತರು, ಅಲ್ಪಸಂಖ್ಯಾತರು, ವಿದ್ಯಾರ್ಥಿಗಳು, ಯುವಜನತೆಗೆ ಬಿಜೆಪಿ ಯಾವ ಯೋಜನೆಗಳನ್ನು ತರಲಿಲ್ಲ, ಎನ್‌ಡಿಎ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರನ್ನು ಸೋಲಿಸಲು ಎಲ್ಲಾ ಸಂಘಟನೆಗಳ ಮುಖಂಡರು ಜನರಿಗೆ ಮನವರಿಕೆ ಮಾಡಿಕೊಡಲು ಮುಂದಾಗಬೇಕು ಎಂದು ಹೇಳಿದರು.ಕಳೆದ ೧೦ ವರ್ಷಗಳ ಹಿಂದೆ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವಾಗ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ, ಸ್ವಿಸ್ ಬ್ಯಾಂಕ್‌ಗಳಲ್ಲಿ ಕೂಡಿಟ್ಟಿರುವ ಕಪ್ಪು ಹಣವನ್ನು ದೇಶಕ್ಕೆ ಮರಳಿ ತರುತ್ತೇವೆ, ಜನರ ಹಣವನ್ನು ತಿನ್ನುವುದಿಲ್ಲ, ಬೇರೆಯವರಿಗೂ ತಿನ್ನಲು ಬಿಡುವುದಿಲ್ಲ. ತಾನು ಈ ದೇಶದ ಜನರ ಖಜಾನೆಯ ಕಾವಲುಗಾರ, ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ರೈತರ ಸಾಲಮನ್ನಾ ಮಾಡಿ ಅವರು ಬೆಳೆದ ಬೆಳೆಗೆ ಡಾ. ಸ್ವಾಮಿನಾಥನ್ ಶಿಫಾರಸ್ಸಿನಂತೆ ಕನಿಷ್ಠ ಬೆಂಬಲ ಬೆಲೆ ನೀಡುತ್ತೇವೆ, ಯುವಜನರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸಲಾಗುವುದು, ಅಗತ್ಯ ವಸ್ತುಗಳ ಬೆಲೆ ಇಳಿಸುತ್ತೇವೆ ಎಂದಿದ್ದರು. ಆದರೆ ಬಿಜೆಪಿ ಮಾಡಿದ್ದೇನು ಎಂದು ಪ್ರಶ್ನಿಸಿದರು.
ತಾಲೂಕು ರೈತ ಮುಖಂಡರಾದ ಮಾಳೇನಹಳ್ಳಿ ಹರೀಶ್, ನುಗ್ಗೇಹಳ್ಳಿ ರಾಮಚಂದ್ರು, ಜಾವಿದ್ ಮಾತನಾಡಿ, ಕಾಲ ಕಾಲಕ್ಕೆ ಪ್ರತಿ ವರ್ಷ ಜಾಗತಿಕವಾಗಿ ಪ್ರಕಟಿಸುವ ಹಸಿವು, ಆರೋಗ್ಯ, ನಿರುದ್ಯೋಗ, ಬಡತನ, ಅಪೌಷ್ಟಿಕತೆ, ಭ್ರಷ್ಟಾಚಾರ ಮುಕ್ತ, ಮಾಧ್ಯಮ ಸ್ವಾತಂತ್ರ‍್ಯ, ಶಿಕ್ಷಣ, ಆರ್ಥಿಕ ಮತ್ತಿತರೆ ಜಾಗತಿಕ ಸೂಚ್ಯಂಕಗಳ ಪಟ್ಟಿಯಲ್ಲಿ ದೇಶದ ಸ್ಥಾನ ವರ್ಷದಿಂದ ವರ್ಷಕ್ಕೆ ಅತ್ಯಂತ ಕೆಳಮಟ್ಟಕ್ಕೆ ಕುಸಿಯುತ್ತಲೇ ಇದೆ. ಹಾಗಾದರೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸಾಧಿಸಿದ್ದೇನು? ಅಗತ್ಯ ವಸ್ತುಗಳು, ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆಗಳನ್ನು ಇಳಿಸುವ ಬದಲಿಗೆ ಏರಿಕೆ ಮಾಡುತ್ತಿದೆ ಎಂದು ದೂರಿದರು.ಕಳೆದ 10 ವರ್ಷಗಳಲ್ಲಿ ಲಕ್ಷಾಂತರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರ್ಮಿಕರ ವೇತನದ ಪಾಲು ಕಡಿಮೆಯಾಗಿ ಮಾಲೀಕರ ಲಾಭದ ಪಾಲು ಹೆಚ್ಚಾಗುತ್ತಿದೆ. ಬಿಜೆಪಿ ತನ್ನ ಅಕ್ರಮ, ದುರಾಡಳಿತ, ಭ್ರಷ್ಟಾಚಾರ ಮುಚ್ಚಿಟ್ಟುಕೊಳ್ಳಲು ಹಿಂದುತ್ವ ಧರ್ಮ, ಸಂಸ್ಕೃತಿ ಹೆಸರಿನಲ್ಲಿ ಜನರನ್ನು ವಿಭಜಿಸಿ ವಿಧ್ವಂಸಕ ರಾಜಕಾರಣದಲ್ಲಿ ತೊಡಗಿದೆ. ದೇಶದ ಸಂವಿಧಾನವನ್ನೇ ಬುಡಮೇಲು ಮಾಡಲು ಸಂಚು ರೂಪಿಸಿದೆ. ದೇಶದ ಸಂವಿಧಾನಬದ್ಧ ಸ್ವಾಯತ್ತ ತನಿಖಾ ಸಂಸ್ಥೆಗಳು, ವಿರೋಧ ಪಕ್ಷಗಳು, ಚಳವಳಿಗಳು ಮತ್ತು ಮಾಧ್ಯಮ ಸಂಸ್ಥೆಗಳನ್ನು ಮಟ್ಟಹಾಕಿ ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಲು ಬಳಸುತ್ತಿದೆ. ಭಾರತ ಉಳಿಯಬೇಕಿದ್ದರೆ ಬಿಜೆಪಿ ಸೋಲಲೇ ಬೇಕು ಎಂದರು.
ರೈತ ಸಂಘದ ತಾಲೂಕು ಅಧ್ಯಕ್ಷ ಸಿ.ಜಿ. ರವಿ, ಸಿ.ಎ.ರವಿಕುಮಾರ್, ಚಿಕ್ಕೇಗೌಡ, ನಾಗರತ್ನ, ಪ್ರೇಮಮ್ಮ, ಸಿ.ಎಂ.ಶಿವಕುಮಾರ್, ಕರಿಯಮ್ಮ, ದಲಿತ ಮುಖಂಡರಾದ ಮಾದಿಹಳ್ಳಿ ಮಂಜು, ಪ್ರಸನ್ನ, ಚನ್ನಕೇಶವ, ನರಸಿಂಹಮೂರ್ತಿ, ನಾಗಣ್ಣ ಇದ್ದರು.ಚನ್ನರಾಯಪಟ್ಟಣ ರೈತ ಸಂಘದ ಕಚೇರಿಯಲ್ಲಿ ಜನಪರ ಚಳವಳಿಗಳ ಒಕ್ಕೂಟದಿಂದ ನಡೆದ ಪ್ರಗತಿಪರ ಸಂಘಟನೆಗಳ ಮುಖಂಡರ ಸಭೆ.