ರಾಜಕೀಯ ಏಳುಬೀಳುಗಳ ನಡುವೆ ಮಂಕಾಗಿರುವ ಜೆಡಿಎಸ್ ಪುಟಿದೇಳಲು ರಣತಂತ್ರ ರೂಪಿಸುತ್ತಿದ್ದು, ಇದಕ್ಕಾಗಿ ತನ್ನ ತವರು ನೆಲದಿಂದಲೇ ಪ್ರಯತ್ನ ಶುರು ಮಾಡಿದೆ. ಇದರ ಪ್ರಯತ್ನದ ಮೊದಲ ಹಂತವಾಗಿ ಹಾಸನ ನಗರದ ಬೂವನಹಳ್ಳಿ ಬೈಪಾಸಿನಲ್ಲಿ ಜ.24ರಂದು ಜೆಡಿಎಸ್ ಜನತಾ ಸಮಾವೇಶ ಹಮ್ಮಿಕೊಂಡಿದೆ.
ಕನ್ನಡಪ್ರಭ ವಾರ್ತೆ ಹಾಸನ
ರಾಜಕೀಯ ಏಳುಬೀಳುಗಳ ನಡುವೆ ಮಂಕಾಗಿರುವ ಜೆಡಿಎಸ್ ಪುಟಿದೇಳಲು ರಣತಂತ್ರ ರೂಪಿಸುತ್ತಿದ್ದು, ಇದಕ್ಕಾಗಿ ತನ್ನ ತವರು ನೆಲದಿಂದಲೇ ಪ್ರಯತ್ನ ಶುರು ಮಾಡಿದೆ. ಇದರ ಪ್ರಯತ್ನದ ಮೊದಲ ಹಂತವಾಗಿ ಹಾಸನ ನಗರದ ಬೂವನಹಳ್ಳಿ ಬೈಪಾಸಿನಲ್ಲಿ ಜ.24ರಂದು ಜೆಡಿಎಸ್ ಜನತಾ ಸಮಾವೇಶ ಹಮ್ಮಿಕೊಂಡಿದೆ.ಜನತಾ ಸಮಾವೇಶದ ಹಿನ್ನೆಲೆಯಲ್ಲಿ ಶಕ್ತಿ ಪ್ರದರ್ಶನಕ್ಕೆ ಅಗತ್ಯವಿರುವ ಎಲ್ಲಾ ಪೂರ್ವ ಸಿದ್ಧತೆ ಪೂರ್ಣಗೊಳಿಸಲಾಗಿದೆ. ನಗರದ ಹುಡಾ ಹೊಸ ಬಡಾವಣೆ ಪ್ರದೇಶದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಸಮಾವೇಶಕ್ಕೆ ಸುಮಾರು ಐವತ್ತು ಸಾವಿರಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಶಾಸಕ ಎಚ್.ಪಿ.ಸ್ವರೂಪ್ ತಿಳಿಸಿದ್ದಾರೆ.ಸಿದ್ಧತೆ ವೀಕ್ಷಣೆ ಮಾಡಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಸ್ವರೂಪ್, ಈ ಸಮಾವೇಶಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ.ರೇವಣ್ಣ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಎಂಎಲ್‌ಸಿ ಸೂರಜ್ ರೇವಣ್ಣ, ಪಕ್ಷದ ಶಾಸಕರು, ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಎಲ್ಲಾ ಮುಖಂಡರು ಆಗಮಿಸುತ್ತಿದ್ದಾರೆ ಎಂದರು.
ಸಮಾವೇಶವು ಶಾಂತಿಯುತವಾಗಿ ಹಾಗೂ ಸುಸೂತ್ರವಾಗಿ ನಡೆಯುವ ನಿಟ್ಟಿನಲ್ಲಿ ಭದ್ರತಾ ವ್ಯವಸ್ಥೆಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳಲಾಗಿದ್ದು, ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿ ಒಟ್ಟು ೧೪೦೦ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಸಂಚಾರ ನಿಯಂತ್ರಣ, ಜನಸಂದಣಿ ನಿರ್ವಹಣೆ ಹಾಗೂ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಪೊಲೀಸ್ ಇಲಾಖೆ ವಿಶೇಷ ಕ್ರಮಗಳನ್ನು ಕೈಗೊಂಡಿದೆ. ಸಮಾವೇಶದಲ್ಲಿ ಭಾಗವಹಿಸುವ ಎಲ್ಲಾ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಇದಕ್ಕಾಗಿ 4 ಬೃಹತ್ ಊಟದ ಕೌಂಟರ್‌ಗಳನ್ನು ತೆರೆಯಲಾಗಿದ್ದು, ಆಹಾರ ವಿತರಣೆ ಸುಗಮವಾಗಿ ನಡೆಯಲು ಒಂದು ಸಾವಿರಕ್ಕೂ ಅಧಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಯಾವುದೇ ಗೊಂದಲ ಉಂಟಾಗದಂತೆ ವ್ಯವಸ್ಥಿತವಾಗಿ ಊಟ ವಿತರಿಸಲು ಯೋಜನೆ ರೂಪಿಸಲಾಗಿದೆ. ೧೨೫೦ಕ್ಕೂ ಅಧಿಕ ಬಸ್‌ಗಳ ನಿಯೋಜನೆ ಮಾಡಲಾಗಿದೆ.1250 ಬಸ್‌ಗಳ ವ್ಯವಸ್ಥೆ:
ಜಿಲ್ಲೆಯ ವಿವಿಧ ಭಾಗಗಳಿಂದ ಕಾರ್ಯಕರ್ತರು ಹಾಗೂ ಬೆಂಬಲಿಗರನ್ನು ಕರೆತರಲು ೯೫೦ ಕೆಎಸ್‌ಆರ್‌ಟಿಸಿ ಬಸ್‌ಗಳು ಹಾಗೂ ೩೦೦ ಖಾಸಗಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆಯೇ ಬಸ್‌ಗಳು ವಿವಿಧ ತಾಲೂಕುಗಳಿಂದ ಸಮಾವೇಶ ಸ್ಥಳಕ್ಕೆ ಆಗಮಿಸುವ ನಿರೀಕ್ಷೆಯಿದ್ದು, ವಾಹನಗಳ ಪಾರ್ಕಿಂಗ್‌ಗೂ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ.ಪ್ರಮುಖ ಶಕ್ತಿ ಪ್ರದರ್ಶನ:
ಈ ಜನತಾ ಸಮಾವೇಶವನ್ನು ಜೆಡಿಎಸ್ ಪಕ್ಷದ ಪ್ರಮುಖ ಶಕ್ತಿ ಪ್ರದರ್ಶನವೆಂದು ಪರಿಗಣಿಸಲಾಗುತ್ತಿದ್ದು, ಪಕ್ಷದ ನಾಯಕರು, ಜನಪ್ರತಿನಿಧಿಗಳು, ಕಾರ್ಯಕರ್ತರು ಹಾಗೂ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾವೇಶದ ಮೂಲಕ ಪಕ್ಷದ ಸಂಘಟನೆಗೆ ಮತ್ತಷ್ಟು ಬಲ ನೀಡುವ ಉದ್ದೇಶ ಹೊಂದಲಾಗಿದೆ. ಒಟ್ಟಾರೆ, ವೇದಿಕೆ ನಿರ್ಮಾಣದಿಂದ ಹಿಡಿದು ಭದ್ರತೆ, ಸಾರಿಗೆ ಹಾಗೂ ಊಟದ ವ್ಯವಸ್ಥೆಯವರೆಗೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದು, ಸಮಾವೇಶವು ಯಶಸ್ವಿಯಾಗಲಿದೆ ಎಂದು ಸ್ವರೂಪ್ ವಿಶ್ವಾಸ ವ್ಯಕ್ತಪಡಿಸಿದರು.ಇದೆ ವೇಳೆ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ದ್ಯಾವೇಗೌಡ, ಮುಖಂಡರಾದ ರಘುಗೌಡ, ಸ್ವಾಮೀಗೌಡ ಇದ್ದರು.