ರೈತರು ತಮ್ಮ ಭೂಮಿ ಬಿಟ್ಟು ಕೊಡಲು ಸಿದ್ಧರಿಲ್ಲದಿದ್ದರೂ, ಅವರ ಹಣವನ್ನು ಕೋರ್ಟ್‌ನಲ್ಲಿ ಜಮೆ ಮಾಡಿ ಜಮೀನು ಕಿತ್ತುಕೊಳ್ಳುವ ಕರಾಳ ಎಚ್ಚರಿಕೆಯನ್ನು ಸರ್ಕಾರ ನೀಡುತ್ತಿದೆ. ಇದರಿಂದ ಹೈನುಗಾರಿಕೆ, ರೇಷ್ಮೆ ಮತ್ತು ತೋಟಗಾರಿಕೆ ಉದ್ಯಮದ ಸಂಪೂರ್ಣ ವಿನಾಶವಾಗಲಿದೆ.
ಹುಬ್ಬಳ್ಳಿ:
ಬಿಡದಿ ಟೌನ್‌ಶಿಪ್ ವಿರೋಧಿಸಿ ಜೆಡಿಎಸ್ ಗ್ರಾಮೀಣ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಕಾರ್ಯಕರ್ತರು, ತಹಸೀಲ್ದಾರ್ ಕಚೇರಿಗೆ ತೆರಳಿ ಕೆಲಕಾಲ ಧರಣಿ ನಡೆಸಿದರು.
ರೈತರ ಬಳಿ ಒತ್ತಾಯ ಪೂರ್ವಕವಾಗಿ ಕೃಷಿ ಭೂಮಿ ಕಸಿದುಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದ್ದು ಖಂಡನೀಯ. ಸದ್ಯ ಕೇವಲ 500 ಎಕರೆಗೆ ಅಧಿಸೂಚನೆ ಹೊರಡಿಸಿದ್ದು ಇದು ಇಷ್ಟಕ್ಕೆ ಸೀಮಿತವಾಗಿಲ್ಲ. 9600 ಎಕರೆ ವರೆಗೂ ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಕೂಡಲೇ ಬಿಡದಿ ಟೌನ್‌ಶಿಪ್ ಯೋಜನೆ ಕೈಬಿಡಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ರೈತರು ತಮ್ಮ ಭೂಮಿ ಬಿಟ್ಟು ಕೊಡಲು ಸಿದ್ಧರಿಲ್ಲದಿದ್ದರೂ, ಅವರ ಹಣವನ್ನು ಕೋರ್ಟ್‌ನಲ್ಲಿ ಜಮೆ ಮಾಡಿ ಜಮೀನು ಕಿತ್ತುಕೊಳ್ಳುವ ಕರಾಳ ಎಚ್ಚರಿಕೆಯನ್ನು ಸರ್ಕಾರ ನೀಡುತ್ತಿದೆ. ಇದರಿಂದ ಹೈನುಗಾರಿಕೆ, ರೇಷ್ಮೆ ಮತ್ತು ತೋಟಗಾರಿಕೆ ಉದ್ಯಮದ ಸಂಪೂರ್ಣ ವಿನಾಶವಾಗಲಿದೆ. ಇಡೀ ವಲಯವು ಹಸಿರು ಭೂಮಿಯಾಗಿದ್ದು ಹೈನುಗಾರಿಕೆಯೇ ಅಲ್ಲಿನ ಜನರ ಪ್ರಮುಖ ಜೀವನಾಧಾರವಾಗಿದೆ. ಈ ಯೋಜನೆಯಿಂದ ಪ್ರತಿ ತಿಂಗಳು ಉತ್ಪಾದನೆಯಾಗುತ್ತಿದ್ದ ಬರೋಬ್ಬರಿ 6 ಲಕ್ಷ ಲೀಟರ್ ಹಾಲು ನಿಂತು ಹೋಗಲಿದ್ದು ರಾಜ್ಯದ ಹಾಲಿನ ಮಾರುಕಟ್ಟೆ ಮೇಲೆ ದೊಡ್ಡ ಹೊಡೆತ ಬೀಳಲಿದೆ ಎಂದು ಎಚ್ಚರಿಸಿದರು.ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಮಾಜಿ ಸಚಿವ ಕೆ.ಎನ್. ಗಡ್ಡಿ, ಗ್ರಾಮೀಣ ಜಿಲ್ಲಾಧ್ಯಕ್ಷ ಬಿ.ಬಿ. ಗಂಗಾಧರಮಠ, ನವೀನಕುಮಾರ ಮಡಿವಾಳರ, ಇಸ್ಮಾಯಿಲ್, ರಾಜಶೇಖರ ಮತ್ತಿಹಳ್ಳಿ, ಮೃತ್ಯುಂಜಯ ಸೇರಿದಂತೆ ಹಲವರು ಇದ್ದರು.