ಒಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆ, ಮತ್ತೊಂದೆಡೆ ಹಾಲು ಮತ್ತು ಹಾಲಿನ ಉತ್ಪನ್ನಗಳ ದರ ಹೆಚ್ಚಳ, ಇದರ ಬೆನ್ನಲ್ಲೇ ಸಾರ್ವಜನಿಕ ಸಾರಿಗೆ ಪ್ರಯಾಣ ದರ ಏರಿಕೆ. ಹೀಗೆ ಸಾಲುಸಾಲು ಬೆಲೆ ಏರಿಕೆಗಳಿಂದ ಸಾಮಾನ್ಯ ಜನರ ಬದುಕು ದುಸ್ತರವಾಗುತ್ತಿದ್ದರೂ ಸರ್ಕಾರ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ಶನಿವಾರ ಪ್ರತಿಭಟನೆ ನಡೆಸಿತು. ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ, ಜನಸಾಮಾನ್ಯರ ಮೇಲಿನ ಆರ್ಥಿಕ ಹೊರೆ ತಗ್ಗಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತು.
ಕನ್ನಡಪ್ರಭ ವಾರ್ತೆ ಹಾಸನ
ಒಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆ, ಮತ್ತೊಂದೆಡೆ ಹಾಲು ಮತ್ತು ಹಾಲಿನ ಉತ್ಪನ್ನಗಳ ದರ ಹೆಚ್ಚಳ, ಇದರ ಬೆನ್ನಲ್ಲೇ ಸಾರ್ವಜನಿಕ ಸಾರಿಗೆ ಪ್ರಯಾಣ ದರ ಏರಿಕೆ. ಹೀಗೆ ಸಾಲುಸಾಲು ಬೆಲೆ ಏರಿಕೆಗಳಿಂದ ಸಾಮಾನ್ಯ ಜನರ ಬದುಕು ದುಸ್ತರವಾಗುತ್ತಿದ್ದರೂ ಸರ್ಕಾರ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ಶನಿವಾರ ಪ್ರತಿಭಟನೆ ನಡೆಸಿತು. ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ, ಜನಸಾಮಾನ್ಯರ ಮೇಲಿನ ಆರ್ಥಿಕ ಹೊರೆ ತಗ್ಗಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತು.ಇದೇ ವೇಳೆ ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ನಟರಾಜು ಹಾಗೂ ಆಲೂರು ತಾಲೂಕು ಅಧ್ಯಕ್ಷ ಮಂಜೇಗೌಡ ಉದ್ದೇಶಿಸಿ ಮಾತನಾಡುತ್ತಾ, ಹಾಲು, ಮೊಸರು, ತುಪ್ಪ, ಬೆಣ್ಣೆ, ಪನ್ನೀರು ಸೇರಿದಂತೆ ಕರ್ನಾಟಕ ಹಾಲು ಒಕ್ಕೂಟದ ವಿವಿಧ ಉತ್ಪನ್ನಗಳ ಬೆಲೆಯನ್ನು ೮ರಿಂದ ೩೫ರವರೆಗೆ ಹೆಚ್ಚಿಸಿರುವುದು ಕೇವಲ ಗ್ರಾಹಕರಿಗೆ ಮಾತ್ರವಲ್ಲದೆ ಹೋಟೆಲ್ ಉದ್ಯಮ, ಆಹಾರ ಮಳಿಗೆಗಳು ಹಾಗೂ ಸಣ್ಣ ವ್ಯಾಪಾರಿಗಳ ಮೇಲೂ ಪರಿಣಾಮ ಬೀರಿದೆ. ಹಾಲು ಪ್ರತಿಯೊಂದು ಕುಟುಂಬದ ದೈನಂದಿನ ಅಗತ್ಯವಾಗಿದ್ದು, ಮಕ್ಕಳ ಪೌಷ್ಟಿಕ ಆಹಾರದಿಂದ ಹಿಡಿದು ವೃದ್ಧರ ಆಹಾರದವರೆಗೂ ಅದರ ಬಳಕೆ ಅನಿವಾರ್ಯವಾಗಿದೆ. ಇಂತಹ ಅಗತ್ಯ ವಸ್ತುವಿನ ಬೆಲೆ ಹೆಚ್ಚಳದಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಾಸಿಕ ಬಜೆಟ್ ಮತ್ತಷ್ಟು ಅಸ್ತವ್ಯಸ್ತವಾಗಿದೆ ಎಂದು ಜೆಡಿಎಸ್ ಮುಖಂಡರು ದೂರಿದರು. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಲಾಭ ಗಳಿಸುವ ಉದ್ಯಮಕ್ಕಿಂತಲೂ ಜನಸಾಮಾನ್ಯರ ಸೇವೆಯ ಉದ್ದೇಶ ಹೊಂದಿರಬೇಕು. ಆದರೆ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯದ ಸಾರಿಗೆ ನಿಗಮಗಳ ಪ್ರಯಾಣ ದರ ಹೆಚ್ಚಳದಿಂದ ಪ್ರತಿನಿತ್ಯ ಉದ್ಯೋಗಕ್ಕೆ ತೆರಳುವ ಕಾರ್ಮಿಕರು, ನೌಕರರು, ವಿದ್ಯಾರ್ಥಿಗಳು ಹಾಗೂ ಗ್ರಾಮೀಣ ಭಾಗದ ಪ್ರಯಾಣಿಕರು ಹೆಚ್ಚುವರಿ ಹಣ ವ್ಯಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಕುಟುಂಬ ನಿರ್ವಹಣೆಯ ವೆಚ್ಚ ಹೆಚ್ಚಾಗಿರುವ ಸಂದರ್ಭದಲ್ಲಿ ಸಾರಿಗೆ ದರ ಏರಿಕೆಯ ಹೊಣೆಯನ್ನೂ ಸಾರ್ವಜನಿಕರ ಮೇಲೆ ಹಾಕಿರುವುದು ಸರಿಯಲ್ಲ ಎಂಬುದು ಪಕ್ಷದ ಆಕ್ಷೇಪವಾಗಿದೆ.ರಾಜ್ಯದ ಹಲವು ಭಾಗಗಳಲ್ಲಿ ಬರದ ಪರಿಸ್ಥಿತಿ, ಕೃಷಿ ಉತ್ಪಾದನೆಯ ಕುಸಿತ, ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ಕೊರತೆಯಿಂದ ರೈತಾಪಿ ವರ್ಗ ಸಂಕಷ್ಟ ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ರೈತರಿಗೆ ವಿಶೇಷ ಪರಿಹಾರ ನೀಡುವ ಬದಲು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರ ಬದುಕನ್ನು ಮತ್ತಷ್ಟು ಕಷ್ಟಕ್ಕೆ ತಳ್ಳಲಾಗುತ್ತಿದೆ ಎಂದು ಪ್ರತಿಭಟನಾಕಾರರು ಟೀಕಿಸಿದರು. ಸರ್ಕಾರ ಜನರ ಆರ್ಥಿಕ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಹಾಲಿನ ಉತ್ಪನ್ನಗಳ ಬೆಲೆ ಏರಿಕೆಯನ್ನು ಹಿಂಪಡೆಯಬೇಕು. ಸಾರಿಗೆ ನಿಗಮಗಳ ಪ್ರಯಾಣ ದರ ಹೆಚ್ಚಳವನ್ನು ಮರುಪರಿಶೀಲಿಸಿ ವಾಪಸ್ ಪಡೆಯಬೇಕು. ಬರಪೀಡಿತ ರೈತರಿಗೆ ಪರಿಹಾರ, ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವು ಒದಗಿಸಬೇಕು. ಅಕ್ಕಿ, ಸಕ್ಕರೆ, ಬೇಳೆಕಾಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂಬುದು ಜೆಡಿಎಸ್ನ ಪ್ರಮುಖ ಆಗ್ರಹವಾಗಿದೆ ಎಂದು ಹೇಳಿದರು.ಜನಸಾಮಾನ್ಯರ ಬದುಕಿಗೆ ಸಂಬಂಧಿಸಿದ ಈ ಸಮಸ್ಯೆಗಳನ್ನು ಸರ್ಕಾರ ನಿರ್ಲಕ್ಷಿಸಿದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು. ಹಾಲಿನ ಉತ್ಪನ್ನಗಳು ಹಾಗೂ ಬಸ್ ಪ್ರಯಾಣ ದರಗಳ ಹೆಚ್ಚಳವನ್ನು ಹಿಂಪಡೆಯಲು ಸರ್ಕಾರ ವಿಫಲವಾದಲ್ಲಿ ಜನತಾದಳ (ಜಾತ್ಯತೀತ) ವತಿಯಿಂದ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.ಪ್ರತಿಭಟನೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಸಮೀರ್, ಚಂದ್ರಶೇಖರ್, ಎಂ.ಕೆ. ಕಮಲ್ ಕುಮಾರ್, ಲಕ್ಷ್ಮಣ್, ಕಾರ್ಲೆ ಇಂದ್ರೇಶ್, ಜಗದೀಶ್ ರಾಮಘಟ್ಟ ಇತರರು ಉಪಸ್ಥಿತರಿದ್ದರು.