ಸಾರಾಂಶ
ಆಶ್ರಯ ಮನೆಗಳ ವಿತರಣೆಯಲ್ಲಿ ಕಾಂಗ್ರೆಸ್ ಶಾಸಕರು, ಮುಖಂಡರು ಸಾಕ್ಷಿ ಸಮೇತ ಭ್ರಷ್ಟಾಚಾರ ಮಾಡಿರುವ ಕುರಿತು ಹೇಳಿಕೆ ನೀಡಿದ್ದಾರೆ. ಪರಿಶಿಷ್ಟರಿಗೆ ಮೀಸಲಿರುವ ಹಣದಲ್ಲೂ ತಾರತಮ್ಯ ಮಾಡಲಾಗಿದೆ. ಜನರಿಗೆ ಮೂಲಭೂತ ಸೌಕರ್ಯ ನೀಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ.
ಧಾರವಾಡ: ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದ ವೈಫಲ್ಯ ಕಂಡಿದ್ದು, ಬರೀ ಭ್ರಷ್ಟಾಚಾರದಲ್ಲಿ ಮುಳುಗಿದೆ. ಸಂವಿಧಾನ ಬದ್ಧ ಆಡಳಿತ ನಡೆಸಲು ವಿಫಲವಾಗಿದ್ದು ಕೂಡಲೇ ರಾಜ್ಯ ಸರ್ಕಾರದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಜೆಡಿಎಸ್ ಮುಖಂಡರು ಆಗ್ರಹಿಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ನಡೆಸಿದ ಜೆಡಿಎಸ್ ಮುಖಂಡರು, ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಮಹಾನಗರ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ, ಆಶ್ರಯ ಮನೆಗಳ ವಿತರಣೆಯಲ್ಲಿ ಕಾಂಗ್ರೆಸ್ ಶಾಸಕರು, ಮುಖಂಡರು ಸಾಕ್ಷಿ ಸಮೇತ ಭ್ರಷ್ಟಾಚಾರ ಮಾಡಿರುವ ಕುರಿತು ಹೇಳಿಕೆ ನೀಡಿದ್ದಾರೆ. ಪರಿಶಿಷ್ಟರಿಗೆ ಮೀಸಲಿರುವ ಹಣದಲ್ಲೂ ತಾರತಮ್ಯ ಮಾಡಲಾಗಿದೆ. ಜನರಿಗೆ ಮೂಲಭೂತ ಸೌಕರ್ಯ ನೀಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಗುತ್ತಿಗೆದಾರರ ಹಣ ಪಾವತಿಯಲ್ಲೂ ಹಿಂದೆ ಬಿದ್ದಿದೆ. ರಾಜ್ಯ ಸರ್ಕಾರ ಕೇವಲ ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ರಾಜೀವ ಗಾಂಧಿ ವಸತಿ ನಿಗಮದ ವತಿಯಿಂದ ಫಲಾನುಭವಿಗಳಿಗೆ ಮನೆಗಳ ಹಂಚಿಕೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವುದು, ಸಚಿವ ಜಮೀರ್ ಅಹ್ಮದ್ ವಿರುದ್ಧ ಆಪಾದನೆ ಮಾಡಿರುವುದು ಸ್ಪಷ್ಟವಾಗಿದ್ದು, ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಬೇಕೆಂದು ಹುಣಸಿಮರದ ಆರೋಪಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಬಿ. ಗಂಗಾಧರಮಠ ಸೇರಿದಂತೆ ಪಕ್ಷದ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.