ಕನ್ನಡಪ್ರಭ ವಾರ್ತೆ ಬೆಂಗಳೂರು
ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಮೈತ್ರಿ ಪಕ್ಷ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇ ಬಿಜೆಪಿಗೆ ಮುಳುವಾಗಿದ್ದು, ಅಡ್ಡಮತದಾನಕ್ಕೆ ಸಿಲುಕಿ ಇದೀಗ ತೀವ್ರ ಮುಜುಗರಕ್ಕೀಡಾಗಿದೆ.ವಿಧಾನಸಭೆಯಲ್ಲಿ ಶಾಸಕರ ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್‌ಗೆ ನಾಲ್ಕು ಮತ್ತು ಬಿಜೆಪಿಗೆ ಎರಡು ಸ್ಥಾನ ಅನಾಯಸವಾಗಿ ಸಿಗುತ್ತಿತ್ತು. ಈ ನಡುವೆ ಕಾಂಗ್ರೆಸ್ ಪಕ್ಷ 5ನೇ ಅಭ್ಯರ್ಥಿ ಹಾಕಿತು. ಕಾಂಗ್ರೆಸ್‌ನ ಈ 5ನೇ ಅಭ್ಯರ್ಥಿಗೆ ಸುಲಭವಾಗಿ ಗೆಲುವು ದಕ್ಕಲು ಬಿಡಬಾರದು ಎಂಬ ಕಾರಣಕ್ಕೆ ಜೆಡಿಎಸ್ ತನ್ನ ಬಳಿ ಗೆಲ್ಲುವಷ್ಟು ಮತಗಳು ಇಲ್ಲದಿದ್ದರೂ ಅಭ್ಯರ್ಥಿಯನ್ನು ಚುನಾವಣಾ ಕಣಕ್ಕಿಳಿಸಿತು. ಮೈತ್ರಿ ಪಕ್ಷ ಜೆಡಿಎಸ್‌ನ ಈ ನಿರ್ಧಾರ ಅವಿರೋಧ ಆಯ್ಕೆಯ ಲೆಕ್ಕಾಚಾರದಲ್ಲಿದ್ದ ಬಿಜೆಪಿಗೆ ನಿರಾಸೆ ಮೂಡಿಸಿತು. ಆದರೂ ಮೈತ್ರಿಧರ್ಮ ಪಾಲನೆಗಾಗಿ ಹೆಚ್ಚುವರಿ ಮತಗಳನ್ನು ಜೆಡಿಎಸ್ ಅಭ್ಯರ್ಥಿಗೆ ನೀಡುವ ಭರವಸೆ ನೀಡಿತ್ತು.
ಈಗ ಚುನಾವಣೆಯಲ್ಲಿ 11 ಮತಗಳು ಅಡ್ಡಮತದಾನವಾಗಿವೆ. ಕಣ್ಣಿಗೆ ಕಾಣುವಂತೆ ಬಿಜೆಪಿಯ ಮೂರು ಮತ್ತು ಜೆಡಿಎಸ್‌ನ ನಾಲ್ಕು ಮತಗಳು ಕಾಂಗ್ರೆಸ್ ಅಭ್ಯರ್ಥಿ ಪಾಲಾಗಿವೆ. ಇದರಿಂದ ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳಿಗೂ ತೀವ್ರ ಮುಖಭಂಗವಾಗಿದೆ. ಚುನಾವಣೆಯಲ್ಲಿ ತಮ್ಮ ಇಬ್ಬರು ಅಭ್ಯರ್ಥಿಗಳು ಗೆದ್ದರೂ ಬಿಜೆಪಿ ನಾಯಕರು ಹೆಚ್ಚು ಸಂಭ್ರಮಿಸದಿರುವ ಸ್ಥಿತಿಗೆ ತಲುಪಿದ್ದಾರೆ. ಆಡಳಿತರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬೀಳುತ್ತಿದ್ದ ಬಿಜೆಪಿ ನಾಯಕರು ಇದೀಗ ದನಿ ತಗ್ಗಿಸುವಂತಾಗಿದೆ. ಈ ಬಗ್ಗೆ ಬಿಜೆಪಿ ಪಾಳೆಯದಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ.ನಿಯತ್ತು ಪರೀಕ್ಷಿಸಲು ಅಭ್ಯರ್ಥಿ ಕಣಕ್ಕೆ?:
ಈ ಚುನಾವಣೆಯಲ್ಲಿ ಗೆಲ್ಲುವಷ್ಟು ಮತಗಳು ತಮ್ಮ ಬಳಿ ಇಲ್ಲ ಎಂಬುದು ಗೊತ್ತಿದ್ದರೂ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಪಕ್ಷದ ಶಾಸಕರ ನಿಯತ್ತು ಪರೀಕ್ಷಿಸುವ ಉದ್ದೇಶದಿಂದಲೇ ಅಭ್ಯರ್ಥಿ ಹಾಕಿತ್ತು. ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಚುನಾವಣಾ ಪೂರ್ವದಲ್ಲಿ ನಡೆದ ಶಾಸಕರ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದರು. ನಿರೀಕ್ಷೆಯಂತೆ ಪಕ್ಷದಲ್ಲಿ ಅಡ್ಡಮತದಾನವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಪಕ್ಷದ್ರೋಹ ಮಾಡಿದ ಶಾಸಕರನ್ನು ಪತ್ತೆ ಹಚ್ಚಿ ಶಿಸ್ತು ಕ್ರಮ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.