ಸಾರಾಂಶ
ಜೆಡಿಎಸ್‌ನಲ್ಲಿ ಎಚ್.ಡಿ. ಕುಮಾರಸ್ವಾಮಿ ಜತೆ ಅವಿನಾಭಾವ ಸಂಬಂಧ ಹೊಂದಿದ್ದ ಕೂಡ್ಲಿಗಿಯ ಮಾಜಿ ಸಚಿವ ಎನ್.ಎಂ. ನಬಿ ಹಾಗೂ ಅವರ ಪುತ್ರ ಎನ್.ಎಂ. ನೂರ್ ಅಹಮದ್ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡಿದ್ದರು.
ಕೂಡ್ಲಿಗಿ: ಮಾಜಿ ಸಚಿವ, ರಾಜ್ಯ ಜೆಡಿಎಸ್ ಕಾರ್ಯಾಧ್ಯಕ್ಷ ಎನ್.ಎಂ. ನಬಿ ಹಾಗೂ ಅವರ ಪುತ್ರ ಜೆಡಿಎಸ್ ಯುವ ಘಟಕದ ರಾಜ್ಯ ಕಾರ್ಯಾಧ್ಯಕ್ಷ ಎನ್.ಎಂ. ನೂರ್ ಅಹಮದ್ ಹಾಗೂ ಜೆಡಿಎಸ್ ಮಹಿಳಾ ಘಟಕದ ರಾಜ್ಯ ಕಾರ್ಯಾಧ್ಯಕ್ಷೆ ಹಾಗೂ ಜೆಡಿಎಸ್ ವಕ್ತಾರೆ ನಜ್ಮಾ ನಜೀರ್ ಶುಕ್ರವಾರ ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೖತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.
ಜೆಡಿಎಸ್‌ನಲ್ಲಿ ಎಚ್.ಡಿ. ಕುಮಾರಸ್ವಾಮಿ ಜತೆ ಅವಿನಾಭಾವ ಸಂಬಂಧ ಹೊಂದಿದ್ದ ಕೂಡ್ಲಿಗಿಯ ಮಾಜಿ ಸಚಿವ ಎನ್.ಎಂ. ನಬಿ ಹಾಗೂ ಅವರ ಪುತ್ರ ಎನ್.ಎಂ. ನೂರ್ ಅಹಮದ್ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡಿದ್ದರು. ಈಗ ಪುನಃ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಲೋಕಸಭೆ ಚುನಾವಣಾ ಹೊತ್ತಿನಲ್ಲಿ ಕೂಡ್ಲಿಗಿ ಕ್ಷೇತ್ರದಲ್ಲಿ ಎನ್.ಎಂ. ನಬಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರಿಂದ ರಾಜಕೀಯ ಲೆಕ್ಕಾಚಾರಗಳು ಶುರುವಾಗಿವೆ. ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ ಬರುತ್ತಾ ಎಂಬುದು ಚರ್ಚೆಗೆ ಗ್ರಾಸವಾಗಿದೆ.ಜೆಡಿಎಸ್ ಕೋಮುವಾದಿ ಪಕ್ಷದ ಜೊತೆ ಕೈಜೋಡಿಸಿದ್ದರಿಂದ ನಾನು, ನನ್ನ ಪುತ್ರ ನೂರ್ ಅಹಮದ್ ಹಾಗೂ ಜೆಡಿಎಸ್ ವಕ್ತಾರೆ ನಜ್ಮಾ ನಜೀರ್ ಹಾಗೂ ಅಪಾರ ಕಾರ್ಯಕರ್ತರ ಜೊತೆ ಕಾಂಗ್ರೆಸ್ ಸೇರ್ಪಡೆಗೊಂಡಿದ್ದೇವೆ. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಜನಪರ ಆಡಳಿತ ನೀಡುತ್ತಿದ್ದಾರೆ. ಅವರ ಜೊತೆ ಕೈ ಜೋಡಿಸಲು ಕಾಂಗ್ರೆಸ್ ಸೇರ್ಪಡೆಗೊಂಡಿದ್ದೇನೆ ಎನ್ನುತ್ತಾರೆ ಮಾಜಿ ಸಚಿವ ಎನ್.ಎಂ.ನಬಿ.