ಸಾರಾಂಶ
ಶಿವಮೊಗ್ಗ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ದುರಾಳಿತವನ್ನು ಖಂಡಸಿ ಶಿವಮೊಗ್ಗ ನಗರ ಜೆಡಿಎಸ್ ಘಟಕದಿಂದ ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಪ್ರತಿಭಟನೆಗೂ ಮುನ್ನ ಜಿಲ್ಲಾ ಜೆಡಿಎಸ್ ಕಚೇರಿ ಮುಂಭಾಗದಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಅಮೀರ್ ಅಹ್ಮದ್ ವೃತ್ತ, ಸೀನಪ್ಪಶೆಟ್ಟಿ ವೃತ್ತದ ಮಾರ್ಗವಾಗಿ ಡಿಸಿ ಕಚೇರಿಗೆ ತಲುಪಿತು. ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಎಲ್ಲ ಇಲಾಖೆಗಳಲ್ಲಿ ಲಂಚಗುಳಿತನ, ಭ್ರಷ್ಟಾಚಾರ ಹೆಚ್ಚುತ್ತಿದ್ದು, ಸ್ವಜನಪಕ್ಷಪಾತ ತುಂಬಿತುಳುಕುತ್ತಿದೆ. ಪಕ್ಷದ ಹಿರಿಯ ಶಾಸಕರು ಹಾಗೂ ಮುಖಂಡರು, ರಾಜ್ಯ ಸರ್ಕಾರದ ಮತ್ತು ಸಚಿವರುಗಳ ವಿರುದ್ಧ ಬಹಿರಂಗವಾಗಿ ಸಾಕ್ಷಿಸಮೇತ ದಾಖಲೆಗಳೊಂದಿಗೆ ಆರೋಪಿಸಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ವಸತಿ ಇಲಾಖೆಯು ರಾಜ್ಯದಲ್ಲಿನ ಅತ್ಯಂತ ಹಿಂದುಳಿದ, ಬಡತನದ ಕುಟುಂಬಗಳ ನಿವೇಶನ ಹಾಗೂ ವಸತಿ ರಹಿತ ನೈಜ ಫಲಾನುಭವಿಗಳಿಗೆ ಮೀಸಲಾಗಿರುವ ವಸತಿ ಯೋಜನೆಗಳನ್ನು ಲಂಚ ನೀಡಿದವರಿಗೆ ಮಾತ್ರ ನೀಡುತ್ತಿದ್ದು, ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿದರು.ರಾಜ್ಯ ಸರ್ಕಾರ ಮೂಲಭೂತ ಸೌಲಭ್ಯಗಳಾದ ರಸ್ತೆ, ಸೇತುವೆ, ಕೆರೆ-ಕಟ್ಟೆಗಳ ಪುನಶ್ಚೇತನ, ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರನ್ನು ಸಮರ್ಪಕವಾಗಿ ಒದಗಿಸುವಲ್ಲಿ ಸಂಪೂರ್ಣವಿಫಲವಾಗಿದೆ. ಹಾಗೆಯೇ ಗುತ್ತಿಗೆದಾರರ ಬಾಕಿಹಣ ಪಾವತಿ ಮಾಡುವಲ್ಲಿಯೂ ಸಹ ವಿಳಂಬ ಮಾಡುತ್ತಿದೆ ಎಂದು ದೂರಿದರು. ಬಡವರ ಹಾಗೂ ರೈತವಿರೋಧಿ ಸರ್ಕಾರವಾಗಿದ್ದು, ಪರಿಶಿಷ್ಟ ಜಾತಿಯವರಿಗೆ ಮೀಸಲಿಟ್ಟ ಹಣದಲ್ಲಿಯೂ ತಾರತಮ್ಯ ಎಸಗುತ್ತಿದೆ. ಈ ವರ್ಗದ ಜನರಿಗೆ ಅನ್ಯಾಯ ಮಾಡುತ್ತಾ, ಕೇವಲ ತುಷ್ಠೀಕರಣದ ರಾಜಕಾರಣ ಮಾಡುತ್ತಾ, ರಾಜ್ಯದ ಜನರಿಗೆ ಘೋರ ಅನ್ಯಾಯ ಎಸಗುತ್ತಿದೆ ಎಂದು ಆರೋಪಿಸಿದರು. ವಾಲ್ಮೀಕಿ ನಿಗಮದಲ್ಲಿ ನೂರಾರು ಕೋಟಿ ರು. ಹಗರಣವಾಗಿದೆ ಎಂದು ಮೇಲ್ನೋಟಕ್ಕೆ ಸಾಬೀತಾಗಿದೆ. ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರದ ಆರೋಪ ವ್ಯಾಪಕವಾಗಿ ಕೇಳಿಬರುತ್ತಿದ್ದು, ವಸತಿ ಸಚಿವ ಜಮೀರ್ ಅಹ್ಮದ್‍ಖಾನ್ ಅವರನ್ನು ಸರ್ಕಾರ ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.ಬೆಂಗಳೂರಿನಲ್ಲಿ ಆರ್‌ಸಿಬಿ ಕ್ರಿಕೆಟ್ ತಂಡದ ವಿಜಯೋತ್ಸವ ಆಚರಣೆ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಗಲಭೆ ಮತ್ತು ಕಾಲ್ತುಳಿತದಲ್ಲಿ ಅಮಾಯಕರನ್ನು ಬಲಿ ತೆಗೆದುಕೊಂಡಿರುವುದು ಸರ್ಕಾರದ ಆತುರದ ನಿರ್ಧಾರ ಮತ್ತು ಭದ್ರತೆಯ ವೈಫಲ್ಯತೆಯೇ ನೆರ ಕಾರಣವಾಗಿದೆ ಎಂದು ದೂರಿದರು.ಭ್ರಷ್ಟಾಚಾರ ಆಡಳಿತ ವೈಫಲ್ಯದಲ್ಲಿ ತೊಡಗಿರುವ ರಾಜ್ಯ ಸರ್ಕಾರ ಸಂವಿಧಾನಬದ್ಧವಾಗಿ ಆಡಳಿತ ನಡೆಸಲು ವಿಫಲವಾಗಿರುವುದರಿಂದ ಸರ್ಕಾರದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕಡಿದಾಳ್ ಗೋಪಾಲ್, ನಗರ ಜೆಡಿಎಸ್ ಅಧ್ಯಕ್ಷ ದೀಪಕ್ ಸಿಂಗ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಸತೀಶ್, ಪ್ರಮುಖರಾದ ಎಚ್.ಎಂ.ಸಂಗಯ್ಯ, ಅಬ್ದುಲ್ ವಾಜೀದ್, ತ್ಯಾಗರಾಜ್, ದಾದಾಪೀರ್, ಮಧುಕುಮಾರ್, ಕಾಂತ್‍ರಾಜ್, ನರಸಿಂಹ ಗಂಧದಮನೆ ಮತ್ತಿತರರಿದ್ದರು.