ಮಂಜುನಾಥ ಕೆ.ಎಂ.

ಬಳ್ಳಾರಿ: ಇಲ್ಲಿನ ಕೇಂದ್ರ ಕಾರಾಗೃಹದ ಕೈದಿಗಳಿಗೆ ಜೀನ್ಸ್‌ ಉಡುಪುಗಳ ಹೊಲಿಗೆ ತರಬೇತಿ ನೀಡಿ, ಬಳಿಕ ಪೂರಕ ಮಾರುಕಟ್ಟೆಯನ್ನು ರೂಪಿಸಲು ಜಿಂದಾಲ್ ಕಂಪನಿ ಜೊತೆ ಒಡಂಬಡಿಕೆ ಮಾಡಿಕೊಳ್ಳುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಶೀಘ್ರವೇ ಜೈಲಿನ ಕೈದಿಗಳಿಗೆ ಜೀನ್ಸ್ ಉಡುಪುಗಳಿಗೆ ತರಬೇತಿ ನೀಡುವ ಕೈಂಕರ್ಯಕ್ಕೆ ಚಾಲನೆ ದೊರೆಯಲಿದೆ.

ಬಳ್ಳಾರಿ ಕಾರಾಗೃಹದಲ್ಲಿರುವ ಕೈದಿಗಳಿಗೆ ಈಗಾಗಲೇ ಕರಕುಶಲ ಹಾಗೂ ಇತರೆ ವೃತ್ತಿಪರ ತರಬೇತಿಗಳನ್ನು ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಹಾಗೂ ಪುನರ್ವಸತಿ ಕಲ್ಪಿಸಲು ಕಾರಾಗೃಹ ಇಲಾಖೆ ಕ್ರಮ ವಹಿಸಿದೆ. ಆದರೆ, ಬಳ್ಳಾರಿ ಜೈಲಿನಲ್ಲಿರುವ ಕಠಿಣ ಸಜೆ ಅನುಭವಿಸುತ್ತಿರುವ ಎಲ್ಲ ಕೈದಿಗಳಿಗೆ ಸಮರ್ಪಕ ಕೆಲಸ ನೀಡಲು ಈವರೆಗೆ ಸಾಧ್ಯವಾಗಿಲ್ಲ. ಹೀಗಾಗಿ ಗಣಿಜಿಲ್ಲೆ ಬಳ್ಳಾರಿಯಲ್ಲಿ ನೆಲೆಯೂರಿರುವ ಜಿಂದಾಲ್ ಕಂಪನಿಯ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿಯ ನೆರವು ಪಡೆದು ಕೇಂದ್ರ ಕಾರಾಗೃಹದಲ್ಲಿ ಜೀನ್ಸ್‌ ಉಡುಪುಗಳ ತಯಾರಿಕಾ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಪೂರಕವಾಗಿ ಕೈದಿಗಳಿಗೆ ತರಬೇತಿ ನೀಡಲು ಇಲ್ಲಿನ ಕೇಂದ್ರ ಕಾರಾಗೃಹ ಅಧಿಕಾರಿಗಳು ನಿರ್ಧರಿಸಿದ್ದಾರೆ. ಜಿಲ್ಲಾಧಿಕಾರಿ ಕೆ.ನಾಗೇಂದ್ರ ಪ್ರಸಾದ್ ಸಹ ಹೆಚ್ಚಿನ ಆಸ್ಥೆ ವಹಿಸಿ ಜಿಂದಾಲ್ ಕಂಪನಿ ಜೊತೆ ಮಾತುಕತೆ ನಡೆಸಿದ್ದು, ಇನ್ನು ನಾಲ್ಕೈದು ದಿನದಲ್ಲಿ ಜಿಂದಾಲ್‌ನ ಅಧಿಕಾರಿಗಳು ಬಳ್ಳಾರಿ ಕಾರಾಗೃಹಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿರುವ ಕೈದಿಗಳಿಗೆ ಪೂರ್ಣ ಪ್ರಮಾಣದ ಕೆಲಸ ಸಿಕ್ಕು ಅವರ ಆರ್ಥಿಕ ಶಕ್ತಿಯೂ ವೃದ್ಧಿಸಲಿದೆ.

ಕೈದಿಗಳಿಗೆ ತರಬೇತಿ: ಬಳ್ಳಾರಿ ಜೈಲಿನಲ್ಲಿ ಶುರುಗೊಳ್ಳುವ ಜೀನ್ಸ್‌ ಉಡುಪುಗಳ ಹೊಲಿಗೆ ತರಬೇತಿ ಘಟಕದಲ್ಲಿ ಆಧುನಿಕ ಉಡುಪುಗಳ ವಿನ್ಯಾಸ, ಹೊಲಿಗೆ ವಿಧಾನಗಳು ಹಾಗೂ ಕೌಶಲ್ಯಗಳನ್ನು ಕಲಿಸಿಕೊಡಲಾಗುತ್ತದೆ. ಕಾರಾಗೃಹದಿಂದ ಮಾನವ ಸಂಪನ್ಮೂಲ ಮಾತ್ರ ನೀಡಲಿದ್ದು, ಉಳಿದಂತೆ ಜೀನ್ಸ್‌ ಯೂನಿಟ್ ಸ್ಥಾಪನೆ, ಕೈದಿಗಳಿಗೆ ತರಬೇತಿ, ಜೀನ್ಸ್ ಉಡುಪುಗಳ ಖರೀದಿ, ಘಟಕ ನಿರ್ವಹಣೆ ಕೆಲಸವನ್ನು ಜಿಂದಾಲ್ ಕಂಪನಿಯೇ ನೋಡಿಕೊಳ್ಳಲಿದೆ.

ಸದ್ಯ ಬಳ್ಳಾರಿ ಕಾರಾಗೃಹದಲ್ಲಿ 464 ಕೈದಿಗಳಿದ್ದಾರೆ. ಈ ಪೈಕಿ 215 ಕಠಿಣ ಸಜೆಗೆ ಒಳಗಾದವರಾಗಿದ್ದಾರೆ. ನಿಯಮ ಪ್ರಕಾರ ಕಠಿಣ ಸಜೆಗೆ ಗುರಿಯಾದವರಿಗೆ ಕಡ್ಡಾಯವಾಗಿ ಪೂರ್ಣ ಪ್ರಮಾಣದ ಕೆಲಸವನ್ನು ನೀಡಬೇಕು. ಇದರಿಂದ ಅವರಿಗೆ ಹೆಚ್ಚಿನ ದಿನಗೂಲಿ ದೊರೆತು ಆರ್ಥಿಕ ಸದೃಢಗೊಳ್ಳುತ್ತಾರೆ. ಜೈಲುವಾಸ ಮುಗಿಸಿದ ಬಳಿಕ ಜೈಲಿನಲ್ಲಿ ದುಡಿದ ಹಣದಲ್ಲಿ ಸ್ವಯಂ ಉದ್ಯೋಗ ಸೃಷ್ಟಿಸಿಕೊಳ್ಳಲು ಸಹಕಾರಿಯಾಗುತ್ತದೆ. ಬಳ್ಳಾರಿ ಕಾರಾಗೃಹದಲ್ಲಿರುವ 215 ಕಠಿಣ ಸಜೆ ಕೈದಿಗಳ ಪೈಕಿ ಮೊದಲ ಹಂತದಲ್ಲಿ 50 ಜನರಿಗೆ ತರಬೇತಿ ನೀಡಿ, ಹಂತ ಹಂತವಾಗಿ ಉಳಿದವರಿಗೆ ತರಬೇತಿ ನೀಡಿ ಜೀನ್ಸ್ ಉಡುಪುಗಳ ತಯಾರಿಕೆಗೆ ಕ್ರಮ ವಹಿಸಲು ನಿರ್ಧರಿಸಲಾಗಿದೆ.


ಜಿಂದಾಲ್ ಜೊತೆ ಡಿಸಿ ಮಾತುಕತೆ: ಬಳ್ಳಾರಿ ಜೈಲಿನಲ್ಲಿ ಜೀನ್ಸ್ ಉಡುಪುಗಳ ತಯಾರಿಕಾ ಘಟಕ ಸ್ಥಾಪನೆ ಕುರಿತಂತೆ ಕನ್ನಡಪ್ರಭ ಜೊತೆ ಮಾತನಾಡಿದ ಕಾರಾಗೃಹದ ಅಧೀಕ್ಷಕಿ ಲತಾ, ಜಿಂದಾಲ್ ಕಂಪನಿಯ ಸಹಯೋಗದಲ್ಲಿ ಘಟಕ ಸ್ಥಾಪನೆಗೆ ಮುಂದಾಗಿದ್ದೇವೆ. ಈಗಾಗಲೇ ಜಿಂದಾಲ್ ಕಂಪನಿ ಜೊತೆ ಜಿಲ್ಲಾಧಿಕಾರಿ ಮಾತುಕತೆ ನಡೆಸಿದ್ದಾರೆ. ಆದಷ್ಟು ಶೀಘ್ರ ಘಟಕ ಸ್ಥಾಪನೆಗೊಂಡು ಜೀನ್ಸ್‌ ಉಡುಪುಗಳ ತಯಾರಿಕೆ ಕಾರ್ಯ ಶುರುವಾಗಲಿದೆ ಎಂದು ತಿಳಿಸಿದರು.

ಜಿಂದಾಲ್ ಅಧಿಕಾರಿಗಳಿಗೆ ಜೈಲಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಮನವಿ ಮಾಡಿದ್ದೇವೆ. ನಾಲ್ಕೈದು ದಿನದೊಳಗೆ ಬರಲಿದ್ದಾರೆ. ಜೀನ್ಸ್ ಉಡುಪುಗಳ ತಯಾರಿಕಾ ಘಟಕ ಸ್ಥಾಪನೆಗೆ ಪ್ರಾಥಮಿಕ ಕೆಲಸ ಶುರುವಾಗಿದೆ ಎನ್ನುತ್ತಾರೆ ಬಳ್ಳಾರಿ ಕೇಂದ್ರ ಕಾರಾಗೃಹ ಅಧೀಕ್ಷಕಿ ಲತಾ.