ಜೀಪ್ ಆಫ್‌ ರೋಡ್ ರ‍್ಯಾಲಿಗೆ ಚಾಲನೆ

| Published : Sep 28 2025, 02:01 AM IST

ಸಾರಾಂಶ

ಜೀಪ್‌ ಆಫ್‌ ರೋಡ್‌ ಗ್ರಾಮೀಣ ಜನರನ್ನು ರಂಜಿಸಿತು. 125 ವಾಹನಗಳಲ್ಲಿ 250 ಸ್ಪರ್ಧಿಗಳು ಭಾಗವಹಿಸಿದ್ದರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಟೀಮ್ 12 ಆಫ್ ರೋಡರ್ಸ್ ವತಿಯಿಂದ ತಾಲೂಕಿನ ಕೊತ್ನಳ್ಳಿ, ಕುಡಿಗಾಣ, ಬೆಂಕಳ್ಳಿ ಗ್ರಾಮಗಳ ಖಾಸಗಿ ಜಮೀನಿನಲ್ಲಿ ನಡೆದ ಜೀಪ್ ಆಫ್‌ರೋಡ್ ರ‍್ಯಾಲಿ ಗ್ರಾಮೀಣ ಜನರನ್ನು ರಂಜಿಸಿತು.ಕೊತ್ನಳ್ಳಿ ಗ್ರಾಮಸ್ಥರು ರ‍್ಯಾಲಿಗೆ ಚಾಲನೆ ನೀಡಿದರು. ಜೀಪ್ಗಳು ತೆರಳುತ್ತಿದ್ದಂತೆ ಧಾರಾಕಾರ ಮಳೆ ಸುರಿಯಲು ಪ್ರಾರಂಭಿಸಿತು. ಕಡಿದಾದ ರಸ್ತೆಯಲ್ಲಿ ಅನೇಕ ವಾಹನಗಳು ಸಿಲುಕಿಕೊಂಡವು. ನಂತರ ಟ್ರ್ಯಾಕ್ಟರ್ ಮತ್ತು ಕ್ರೇನ್ ಬಳಸಿ ವಾಹನಗಳನ್ನು ಟ್ರ್ಯಾಕ್‌ಗಳಿಗೆ ತರಲಾಯಿತು.ಅತೀ ಹೆಚ್ಚು ಮಳೆ ಬೀಳುವ ಕುಡಿಗಾಣ, ಕೊತ್ತನಳ್ಳಿ ಗ್ರಾಮದ ಖಾಸಗಿ ಜಾಗದ ಕಾಫಿ, ಏಲಕ್ಕಿ ತೋಟಗಳ ಕಚ್ಚಾರಸ್ತೆಯಲ್ಲಿ ತೆರಳುವುದು ಚಾಲಕರಿಗೆ ಸವಾಲಾಗಿ ಪರಿಣಮಿಸಿತು. ರಾಜ್ಯದ ವಿವಿಧ ಭಾಗಗಳಿಂದ 125 ವಾಹನಗಳಲ್ಲಿ 250 ರಷ್ಟು ಸ್ಪರ್ಧಿಗಳು ಭಾಗವಹಿಸಿದ್ದರು. ಖಾಸಗಿ ಜಮೀನಿನಲ್ಲೇ ಆಫ್‌ರೋಡ್ ರ‍್ಯಾಲಿಯನ್ನು ಆಯೋಜಿಸಿಲಾಗಿದೆ. ಅರಣ್ಯ ಪ್ರದೇಶದಲ್ಲಿ ಸಂಚರಿಸದೇ ಕಾಫಿ, ಏಲಕ್ಕಿ ತೋಟದ ರಸ್ತೆಯಲ್ಲಿ ನಡೆಯಲಿದೆ. ಆಫ್‌ರೋಡ್ ಸ್ಫೋರ್ಟ್ಸ್‌ ಇವೆಂಟ್ ಆಗಿರುವುದರಿಂದ ಸರ್ಕಾರದ ಎಲ್ಲಾ ನಿಯಮಗಳನ್ನು ಪಾಲಿಸಲಾಗಿದೆ. ರ‍್ಯಾಲಿ ಆಯೋಜನೆಗೆ ಮೊದಲು ಆಯೋಜಕರು ತಮ್ಮ ಸ್ವಂತ ಖರ್ಚಿನಲ್ಲಿ ತೋಟದೊಳಗೆ ಅನೇಕ ರಸ್ತೆಗಳನ್ನು ಮಾಡಿಕೊಡಲಾಗಿದೆ. ಇದರಿಂದ ಗ್ರಾಮಸ್ಥರು ಆಫ್‌ರೋಡ್ ರ‍್ಯಾಲಿ ನಡೆಸಲು ಪ್ರತಿವರ್ಷ ಸಹಕಾರ ನೀಡುತ್ತ ಬಂದಿದ್ದಾರೆ. ಪ್ರಕೃತಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಎಲ್ಲಾ ಮುನ್ನೆಚ್ಚೆರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಟೀಮ್ 12 ಆಯೋಜಕರಾದ ಪಿ.ಕೆ.ರವಿ ಹೇಳಿದರು. ಸಿ ಆ್ಯಂಡ್ ಡಿ ಜಾಗದಲ್ಲಿ ರ‍್ಯಾಲಿಗೆ ತಡೆ:

ಅರಣ್ಯ ಪ್ರದೇಶದಲ್ಲಿ ಆಫ್‌ರೋಡ್ ರ‍್ಯಾಲಿ ನಡೆಸದಂತೆ ಕೊತ್ನಳ್ಳಿ ಗ್ರಾಮದ ಕೆ.ಪಿ. ಅಜಿತ್ ಎಂಬವರು ಹೈಕೋರ್ಟ್ನಲ್ಲಿ ರಿಟ್ ಪಿಟಿಷನ್ ಹಾಕಿರುವುದರಿಂದ, ಇದರ ಮಾಹಿತಿ ಪಡೆದ ಅರಣ್ಯ ಇಲಾಖೆ ಮತ್ತು ತಾಲೂಕು ಆಡಳಿತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿತ್ತು. ಶಾಂತಳ್ಳಿ ಜಂಕ್ಷನ್‌ನಿಂದ ಆಫ್‌ರೋಡ್ ವಾಹನಗಳು ತೆರಳದಂತೆ ಅರಣ್ಯ ಇಲಾಖೆ, ಪೊಲೀಸ್ ಹಾಗು ತಾಲೂಕು ಆಡಳಿತ ತಡೆ ಹಾಕಿತು. ಅರಣ್ಯ ಹಾಗು ಸಿ ಆ್ಯಂಡ್ ಡಿ ಜಾಗದೊಳಗೆ ಆಫ್ ರೋಡ್ ವಾಹನಗಳು ತೆರಳಲು ಅವಕಾಶವಿಲ್ಲ ಎಂದು ಎಸಿಎಫ್ ಗೋಪಾಲ್, ತಹಸೀಲ್ದಾರ್ ಕೃಷ್ಣಮೂರ್ತಿ, ಇನ್ಸ್ಪೆಕ್ಟರ್ ಮುದ್ದು ಮಹಾದೇವ ಹೇಳಿದರು. ಖಾಸಗಿ ಜಾಗದಲ್ಲಿ ವಾಹನಗಳು ತೆರಳಲು ಡಿಎಫ್‌ಒ ಅವರಿಂದ ಅನುಮತಿ ಪತ್ರ ಸಿಕ್ಕ ನಂತರ ಅಧಿಕಾರಿಗಳು ವಾಹನಗಳನ್ನು ಬಿಟ್ಟರು.