ಜೆರೋಸಾ ಶಾಲಾ ಹಿಂದು ನಿಂದೆ ಪ್ರಕರಣ: ಪ್ರಮುಖರ ವಿಚಾರಣೆ ದಾಖಲಿಸಿದ ತನಿಖಾ ತಂಡ

| Published : Feb 21 2024, 02:00 AM IST

ಜೆರೋಸಾ ಶಾಲಾ ಹಿಂದು ನಿಂದೆ ಪ್ರಕರಣ: ಪ್ರಮುಖರ ವಿಚಾರಣೆ ದಾಖಲಿಸಿದ ತನಿಖಾ ತಂಡ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಕರಣದ ತನಿಖಾಧಿಕಾರಿಯಾಗಿರುವ ಕಲಬುರಗಿ ವಿಭಾಗದ ಶಾಲಾ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತ ಡಾ.ಆಕಾಶ್ ಎದುರು ಹಾಜರಾಗಿ ವಿವರಣೆ ನೀಡಿದ್ದಾರೆ. ಕೊಟ್ಟಾರ ಬಳಿಯ ದ.ಕ. ಜಿಲ್ಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ದಿನಪೂರ್ತಿ ತನಿಖೆ ನಡೆಸಲಾಗಿದೆ. ತನಿಖೆ ವೇಳೆ ಲಿಖಿತ ಹಾಗೂ ವಿಡಿಯೋ ಮೂಲಕ ಹೇಳಿಕೆ ದಾಖಲಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನ ಜೆರೋಸಾ ಶಿಕ್ಷಣ ಸಂಸ್ಥೆ ಶಿಕ್ಷಕಿಯಿಂದ ಶ್ರೀರಾಮನ ಅವಹೇಳನ ಆರೋಪ ಹಿನ್ನೆಲೆಯಲ್ಲಿ ಸರ್ಕಾರ ನೇಮಿಸಿದ ತನಿಖಾ ಸಮಿತಿ ವಿಚಾರಣೆ ಕೈಗೆತ್ತಿಕೊಂಡಿದೆ. ಮಂಗಳವಾರ ತನಿಖಾ ಸಮಿತಿ ಎದುರು ಹಾಜರಾಗಲು ಮಕ್ಕಳು ಮತ್ತು ಪೋಷಕರಿಗೆ ನೊಟೀಸ್ ಜಾರಿಗೊಳಿಸಿದ್ದು, ಅಗತ್ಯ ವಿಚಾರಣೆ ನಡೆಸಿದೆ.

ಮಂಗಳವಾರವೇ 7ನೇ ತರಗತಿಯ ವಿದ್ಯಾರ್ಥಿಗಳ ಪಾಲಕರು ತಮ್ಮ ಮಕ್ಕಳೊಂದಿಗೆ ಹಾಜರಾಗಲು ನೊಟೀಸ್ ನೀಡಲಾಗಿದೆ. ಈ ಪ್ರಕರಣದ ತನಿಖಾಧಿಕಾರಿಯಾಗಿರುವ ಕಲಬುರಗಿ ವಿಭಾಗದ ಶಾಲಾ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತ ಡಾ.ಆಕಾಶ್ ಎದುರು ಹಾಜರಾಗಿ ವಿವರಣೆ ನೀಡಿದ್ದಾರೆ. ಕೊಟ್ಟಾರ ಬಳಿಯ ದ.ಕ. ಜಿಲ್ಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ದಿನಪೂರ್ತಿ ತನಿಖೆ ನಡೆಸಲಾಗಿದೆ. ತನಿಖೆ ವೇಳೆ ಲಿಖಿತ ಹಾಗೂ ವಿಡಿಯೋ ಮೂಲಕ ಹೇಳಿಕೆ ದಾಖಲಿಸಲಾಗಿದೆ.

ಸಂಜೆ 5 ಗಂಟೆಯೊಳಗೆ ತಾವು ಹೇಳ ಬಯಸುವ ವಿಷಯವನ್ನು ಮೌಖಿಕವಾಗಿ ಅಥವಾ ಲಿಖಿತ ರೂಪದಲ್ಲಿ ನೀಡುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ ಆರೋಪಕ್ಕೆ ಸಂಬಂಧಿಸಿ ಸೂಕ್ತ ದಾಖಲೆಗಳೇನಾದರೂ ಇದ್ದಲ್ಲಿ ಅದನ್ನು ಸಲ್ಲಿಸುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಕಚೇರಿ ಆವರಣ ನಿರ್ಬಂಧ: ಡಿಡಿಪಿಐ ಕಚೇರಿಯಲ್ಲಿ ಐಎಎಸ್ ಅಧಿಕಾರಿ ವಿಚಾರಣೆ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಮಾಧ್ಯಮಗಳಿಗೆ ಡಿಡಿಪಿಐ ಕಚೇರಿ ಪ್ರವೇಶ ನಿರ್ಬಂಧಿಸಿ ಅಧಿಕಾರಿಗಳು ನೋಟಿಸ್‌ ಅಂಟಿಸಿದ್ದಾರೆ. ಕಚೇರಿ ಆವರಣದೊಳಗೆ ಮೊಬೈಲ್ ಫೋನ್ ಬಳಕೆಯನ್ನೂ ನಿರ್ಬಂಧಿಸಲಾಗಿದೆ. ಕಚೇರಿ ಆವರಣದಲ್ಲಿ ಫೋಟೋ ಹಾಗೂ ವಿಡಿಯೋ ಚಿತ್ರೀಕರಣ ಕೂಡ ಮಾಡುವಂತಿಲ್ಲ. ಜಿ.ಪಂ. ಆವರಣದ ಡಿಡಿಪಿಐ ಕಚೇರಿ ಬಳಿ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಮುಖ್ಯ ದ್ವಾರದ ಬಳಿಯೇ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಶಿಕ್ಷಕರ, ಪೋಷಕರ ವಿಚಾರಣೆ:

ಮಂಗಳೂರಿನ ಜೆರೋಸಾ ಶಿಕ್ಷಣ ಸಂಸ್ಥೆಯ ಶಿಕ್ಷಕಿಯಿಂದ ಶ್ರೀರಾಮನ ಅವಹೇಳನ ಆರೋಪದ ಬಗ್ಗೆ ಮಧ್ಯಾಹ್ನ ವರೆಗೆ ಶಾಲಾ ಶಿಕ್ಷಕರನ್ನು ವಿಚಾರಣೆ ನಡೆಸಲಾಗಿದೆ. ಬೆಳಗ್ಗಿನಿಂದ ಶಾಲಾ ಶಿಕ್ಷಕರು, ಮುಖ್ಯಶಿಕ್ಷಕಿ, ಶಿಕ್ಷಕರು, ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಹಾಗೂ ಶಾಲೆಯ ಆಡಳಿತದ ಅಧಿಕೃತರು ಆಗಮಿಸಿ ತನಿಖಾ ಸಮಿತಿ ಎದುರು ಹಾಜರಾಗಿದ್ದಾರೆ.

ಆ ಬಳಿಕ ಮಧ್ಯಾಹ್ನ 2 ಗಂಟೆಯವರೆಗೆ ಹಿಂದು ಸಂಘಟನೆ ಮುಖಂಡರು ಹಾಗೂ ದೂರುದಾರ ಪೋಷಕರ ವಿಚಾರಣೆ ನಡೆಸಲಾಗಿದೆ. ಸಂಜೆ 5 ಗಂಟೆ ಯವರೆಗೆ 7ನೇ ತರಗತಿಯ ವಿದ್ಯಾರ್ಥಿಗಳ ಪಾಲಕರು ತಮ್ಮ ಮಕ್ಕಳೊಂದಿಗೆ ಹಾಜರಾಗಿ ಹೇಳಿಕೆ ನೀಡಿದ್ದಾರೆ. ಸಿಸ್ಟರ್‌ ಪ್ರಭಾ ವಿಚಾರಣೆ ಬಾಕಿ:

ಮಂಗಳವಾರ ತನಿಖಾಧಿಕಾರಿಗಳ ಮುಂದೆ ಬೇರೆ ಶಿಕ್ಷಕಿಯರ ವಿಚಾರಣೆ ಮಾತ್ರ ನಡೆದಿದ್ದು, ಶಿಕ್ಷಕಿ ಸಿಸ್ಟರ್ ಪ್ರಭಾ ಅವರ ವಿಚಾರಣೆ ನಡೆಸಿಲ್ಲ. ಸಿಸ್ಟರ್ ಪ್ರಭಾ ಅವರ ಹೇಳಿಕೆಯನ್ನು ಈ ಮೊದಲು ಶಿಕ್ಷಣ ಇಲಾಖೆ ದಾಖಲಿಸಿತ್ತು. ಹೀಗಾಗಿ ಎಲ್ಲರ ವಿಚಾರಣೆ ಮುಗಿದ ಬಳಿಕ ಮತ್ತೆ ಸಿಸ್ಟರ್ ಪ್ರಭಾ ವಿಚಾರಣೆ ಸಾಧ್ಯತೆ ಬಗ್ಗೆ ಹೇಳಲಾಗುತ್ತಿದೆ. ವಿಹಿಂಪ ಮುಖಂಡರ ವಿಚಾರಣೆ:

ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಕೆ.ಪುರುಷೋತ್ತಮ್, ಶಿವಾನಂದ ಮೆಂಡನ್, ಶರತ್‌ ಕುಮಾರ್‌ ಕೂಡ ತನಿಖಾಧಿಕಾರಿ ಮುಂದೆ ಹಾಜರಾಗಿ ವಿವರ ನೀಡಿದ್ದಾರೆ. ಇವರ ಜತೆ ಇಬ್ಬರು ಹಳೆ ವಿದ್ಯಾರ್ಥಿನಿಯರೂ ಆಗಮಿಸಿದ್ದು, ಅವರು ಕೂಡ ತನಿಖಾಧಿಕಾರಿಗೆ ಮಾಹಿತಿ ನೀಡಿದ್ದಾರೆ.

ಕಳೆದ ಸೋಮವಾರ ಡಿಡಿಪಿಐ ಕಚೇರಿ ಎದುರು ವಿಹಿಂಪ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು. ಆ ವೇಳೆ ಶಿಕ್ಷಕಿ ಪ್ರಭಾ ವಿರುದ್ಧ ಕ್ರಮಕ್ಕೆ ವಿಹಿಂಪ ಮನವಿ ಸಲ್ಲಿಸಿತ್ತು.

ಸಂಜೆ ವೇಳೆಗೆ ಶಾಲೆಗೆ ಸಂಬಂಧಿಸಿದ ಅಧಿಕೃತರ ವಿಚಾರಣೆ ಮುಕ್ತಾಯವಾಗಿದೆ.

ಹಿಂದು ನಿಂದನೆ ಅವ್ಯಾಹತ: ಹಳೆ ವಿದ್ಯಾರ್ಥಿನಿ ಹೇಳಿಕೆ

ಮಂಗಳೂರಿನ ಜೆರೋಸಾ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯಿಂದ ಶ್ರೀರಾಮನ ಅವಹೇಳನ ಆರೋಪ ವಿಚಾರ

ವಿಚಾರಣೆಗೆ ಮುಗಿಸಿ ಹೊರಬಂದ ಶಾಲೆಯ ಹಳೆ ವಿದ್ಯಾರ್ಥಿನಿಯೊಬ್ಬರು ಹಿಂದು ನಿಂದನೆ ಅನೇಕ ವರ್ಷಗಳಿಂದ ನಡೆಯುತ್ತಿರುವ ಬಗ್ಗೆ ತನಿಖಾಧಿಕಾರಿಗೆ ಮಾಹಿತಿ ನೀಡಿದ್ದಾರೆ.

ತನಿಖಾಧಿಕಾರಿಯವರು ಹಲವು ರೀತಿಯಲ್ಲಿ ನನಗೆ ಪ್ರಶ್ನೆ ಮಾಡಿದ್ದರು. ಶಾಲೆಯಲ್ಲಿ ಕಲಿಯುತ್ತಿದ್ದಾಗ ಏನೆಲ್ಲಾ ಹೇಳಿದ್ದರು ಎಂದು ಪ್ರಶ್ನಿಸಿದರು. ಆಗ ನಾನು ಕಲ್ಲು ನಾಗನಿಗೆ ಹಾಲು ಯಾಕೆ ಹಾಕ್ತೀರಿ ಎಂದು ಹೇಳಿದ್ದರು ಎಂದೆ. ಅದಕ್ಕೆ ತನಿಖಾಧಿಕಾರಿ, ಶಿಕ್ಷಕಿ ಒಳ್ಳೆಯ ದೃಷ್ಟಿಕೋನದಲ್ಲಿ ಹೇಳಿದ್ದಾ ಎಂದು ಮರು ಪ್ರಶ್ನಿಸಿದರು. ಆಗ ನಾನು ಅವರು ಬೇರೆ ವಿಚಾರ ಹೇಳಿದ ಬಗ್ಗೆಯೂ ಹೇಳಿದೆ. ಗಣಪತಿ ದೊಡ್ಡ ಹೊಟ್ಟೆ, ಮಂಗನ ಮುಖ ಅಂತೆಲ್ಲಾ ಹೇಳುತ್ತಿದ್ದರು. ನನ್ನ ಎಸ್‌ಎಸ್‌ಎಲ್‌ಸಿ ಸರ್ಟಿಫಿಕೇಟ್ ಕೂಡ ನಾನು ಸಲ್ಲಿಕೆ ಮಾಡಿದ್ದೇನೆ. ಆಗ ಈ ಬಗ್ಗೆ ಹೇಳಲು ಭಯ ಇತ್ತು, ಆಗ ಟೀಚರ್ ಭಯದಲ್ಲಿ ಹೇಳಿರಲಿಲ್ಲ ಎಂದಿದ್ದೇನೆ. ನಮ್ಮ ಧರ್ಮದ ಆಚಾರ ವಿಚಾರಗಳನ್ನು ಮಾಡಲೇ ಬೇಕು. ಶಿಕ್ಷಕಿ ಹೇಳಿದ್ದು ಕೆಟ್ಟ ದೃಷ್ಟಿಯಲ್ಲಿ ಎಂದಿದ್ದೇನೆ. ಸಿಸ್ಟರ್ ಪ್ರಭಾ ಅವರ ಬೆಳಗ್ಗೆಯೇ ನಾನು ಹೆಚ್ಚಾಗಿ ಹೇಳಿದೆ ಎಂದಿದ್ದಾರೆ. ನ್ಯಾಯ ಸಿಗದಿದ್ದರೆ ಕೋರ್ಟ್‌ಗೆ:

ನಮಗೆ ಈ ತನಿಖೆಯಲ್ಲಿ ನ್ಯಾಯ ಸಿಗುವ ವಿಶ್ವಾಸ ಇದೆ, ನ್ಯಾಯ ಸಿಗದೇ ಇದ್ದರೆ ನಾವು ನ್ಯಾಯಾಲಯದ ಮೆಟ್ಟಿಲೇರುತ್ತೇವೆ ಎಂದು ವಿಹಿಂಪ ಮುಖಂಡ ಪುರುಷೋತ್ತಮ್‌ ಪ್ರತಿಕ್ರಿಯಿಸಿದ್ದಾರೆ.

ವಿಚಾರಣೆಗೆ ಮುಗಿಸಿ ಹೊರಬಂದ ಬಳಿಕ ಸುದ್ದಿಗಾರರಲ್ಲಿ ಮಾತನಾಡಿದ ಅವರು, ನಮ್ಮೆಲ್ಲರನ್ನು ಒಟ್ಟಿಗೆ ಕೂರಿಸಿ ವಿಚಾರಣೆ ಮಾಡಿದ್ದಾರೆ. ಆ ಬಳಿಕ ಒಬ್ಬೊಬ್ಬರನ್ನೇ ಕರೆದು ವಿಚಾರಣೆ ನಡೆಸಿದರು. ನಿಮಗೆ ಹೇಗೆ ಈ ವಿಷಯ ಗಮನಕ್ಕೆ ಬಂತು ಎಂದು ಕೇಳಿದ್ದಾರೆ, ಆಗ ನಾನು ಪೋಷಕರು ನಮಗೆ ದೂರು ಕೊಟ್ಟರು ಎಂದೆ. ಅದರಂತೆ ನಮ್ಮ ಮೌಖಿಕ ಮತ್ತು ಲಿಖಿತ ಹೇಳಿಕೆ ದಾಖಲಿಸಿದ್ದಾರೆ ಎಂದರು.