ಹೊರಗುತ್ತಿಗೆ ಕಾರ್ಮಿಕರಿಗೆ ವೇತನ ನೀಡಿ, ಹಿತ ಕಾಯಿರಿ: ಡಿ.ಹನುಮಂತಪ್ಪ

| Published : Feb 21 2024, 02:00 AM IST

ಹೊರಗುತ್ತಿಗೆ ಕಾರ್ಮಿಕರಿಗೆ ವೇತನ ನೀಡಿ, ಹಿತ ಕಾಯಿರಿ: ಡಿ.ಹನುಮಂತಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ನಾಲ್ಕೈದು ತಿಂಗಳ ವೇತನವನ್ನು ರಾಯಚೂರು ಮೂಲದ ದೀಕ್ಷಾ ಏಜೆನ್ಸಿ ನೀಡದೇ, ಹೊರಗುತ್ತಿಗೆ ನೌಕರರಿಗೆ ಸತಾಯಿಸುತ್ತಿದೆ. ಇಲ್ಲಿನ ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾಸ್ಪತ್ರೆ ಅಧೀಕ್ಷಕರಿಗೆ ಈ ಬಗ್ಗೆ ಗಮನಕ್ಕೆ ತಂದರೂ ಯಾರೊಬ್ಬರೂ ಸ್ಪಂದಿಸುತ್ತಿಲ್ಲ. ಹೊರ ಗುತ್ತಿಗೆ ಕಾರ್ಮಿಕರ ಹಿತ ಕಾಯಬೇಕಾದ ಅಧಿಕಾರಿಗಳು ಗುತ್ತಿಗೆ ಏಜೆನ್ಸಿ ಬಗ್ಗೆ ಮೆದು ಧೋರಣೆ ತೋರುತ್ತಿರುವುದು ಏಕೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಹೊರ ಗುತ್ತಿಗೆ ನಾನ್ ಕ್ಲಿನಿಕಲ್ ಡಿ ಗ್ರೂಪ್‌ ದಿನಗೂಲಿ ಕಾರ್ಮಿಕರಿಗೆ ತಕ್ಷಣವೇ ವೇತನ ಬಿಡುಗಡೆಗೆ ಒತ್ತಾಯಿಸಿ ಡಾ.ಬಿ.ಆರ್‌.ಅಂಬೇಡ್ಕರ್ ರಾಜ್ಯ ಸರ್ಕಾರಿ ಆಸ್ಪತ್ರೆಗಳ ಗುತ್ತಿಗೆ ನೌಕರರ ಹಾಗೂ ಇತರೆ ದಿನಗೂಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಹೊರ ಗುತ್ತಿಗೆ ನೌಕರರು ನಗರದ ಜಿಲ್ಲಾಸ್ಪತ್ರೆ ಮುಂಭಾಗ ಮಂಗಳವಾರ ಪ್ರತಿಭಟನಾ ಧರಣಿ ನಡೆಸಿದರು.

ನಗರದ ಜಿಲ್ಲಾಸ್ಪತ್ರೆ ಎದುರು ಸಂಘದ ರಾಜ್ಯಾಧ್ಯಕ್ಷ ಡಿ.ಹನುಮಂತಪ್ಪ ಇತರರ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆಸಿದ ಜಿಲ್ಲಾಸ್ಪತ್ರೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೊರಗುತ್ತಿಗೆ ನಾನ್ ಕ್ಲಿನಿಕಲ್‌ ಡಿ ಗ್ರೂಪ್‌ ದಿನಗೂಲಿ ನೌಕರರು ತಮ್ಮ ವೇತನವನ್ನು ತಕ್ಷಣ ಬಿಡುಗಡೆಗೆ ಮಾಡುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.

ಈ ವೇಳೆ ಮಾತನಾಡಿದ ಡಿ.ಹನುಮಂತಪ್ಪ, ಕಳೆದ ನಾಲ್ಕೈದು ತಿಂಗಳ ವೇತನವನ್ನು ರಾಯಚೂರು ಮೂಲದ ದೀಕ್ಷಾ ಏಜೆನ್ಸಿ ನೀಡದೇ, ಹೊರಗುತ್ತಿಗೆ ನೌಕರರಿಗೆ ಸತಾಯಿಸುತ್ತಿದೆ. ಇಲ್ಲಿನ ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾಸ್ಪತ್ರೆ ಅಧೀಕ್ಷಕರಿಗೆ ಈ ಬಗ್ಗೆ ಗಮನಕ್ಕೆ ತಂದರೂ ಯಾರೊಬ್ಬರೂ ಸ್ಪಂದಿಸುತ್ತಿಲ್ಲ. ಹೊರ ಗುತ್ತಿಗೆ ಕಾರ್ಮಿಕರ ಹಿತ ಕಾಯಬೇಕಾದ ಅಧಿಕಾರಿಗಳು ಗುತ್ತಿಗೆ ಏಜೆನ್ಸಿ ಬಗ್ಗೆ ಮೆದು ಧೋರಣೆ ತೋರುತ್ತಿರುವುದು ಏಕೆಂದು ಪ್ರಶ್ನಿಸಿದರು.

ಗುತ್ತಿಗೆದಾರರು ತಮ್ಮ ಏಜೆನ್ಸಿಯಿಂದ 3 ತಿಂಗಳವನ್ನು ಯಾವುದೇ ಸಬೂಬು ಹೇಳದೇ, ಕಾರ್ಮಿಕರ ಖಾತೆಗೆ ಜಮಾ ಮಾಡುವ ಒಪ್ಪಂದವಾಗಿದ್ದರೂ, ಅದನ್ನು ಪಾಲಿಸುತ್ತಿಲ್ಲ. ಕಾರ್ಮಿಕ ಇಲಾಖೆಗೆ ಸುಮಾರು ಸಲ ದೂರು ನೀಡಿದ್ದರೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಗುತ್ತಿಗೆದಾರರ ಪರವಾಗಿ ಆರೋಗ್ಯ ಇಲಾಖೆ, ಕಾರ್ಮಿಕ ಇಲಾಖೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆಯೇ ಹೊರತು, ಯಾರಿಗೂ ಹೊರಗುತ್ತಿಗೆ ಕಾರ್ಮಿಕರ ಹಿತ ಕಾಯುವ ಆಲೋಚನೆಯೇ ಇಲ್ಲ ಎಂದು ದೂರಿದರು.

ಸರ್ಕಾರದ ನಿಯಮಾನುಸಾರ ನೀಡಬೇಕಾದ ಸೌಲಭ್ಯಗಳನ್ನೂ ನೀಡುತ್ತಿಲ್ಲ. ಅನ್ಯಾಯ ಪ್ರಶ್ನಿಸಿದರೆ ಅಂತಹ ಹೊರ ಗುತ್ತಿಗೆ ನೌಕರರನ್ನು ಗುರಿಯಾಗಿಟ್ಟು, ತೊಂದರೆ ನೀಡುವುದು ಸಾಮಾನ್ಯವಾಗುತ್ತಿದೆ. ರಾಯಚೂರು ಏಜೆನ್ಸಿಯಿಂದ ಬರಬೇಕಾದ ನಾಲ್ಕೈದು ತಿಂಗಳ ವೇತನ ಜಿಲ್ಲಾಡಳಿತ ಕೊಡಿಸಿ, ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ದೀಕ್ಷಾ ಕನ್ಸಲ್ಟೆನ್ಸಿ ಏಜೆನ್ಸಿಯವರು ಹೊರಗುತ್ತಿಗೆ ಕಾರ್ಮಿಕರಿಗೆ ಮಾಡುತ್ತಿರುವ ಅನ್ಯಾಯದ ಬಗ್ಗೆ ಸಂಪೂರ್ಣ ಮಾಹಿತಿ, ಅರಿವು ಇದ್ದರೂ ಸಹ ಎನ್ಆರ್‌ಎಚ್‌ಎಂ ಮಾನವ ಸಂಪನ್ಮೂಲ ಟೆಂಡರ್‌ನ್ನು ಮತ್ತೆ ಮತ್ತೆ ನೀಡಲಾಗುತ್ತಿದೆ. ತಕ್ಷಣವೇ ದೀಕ್ಷಾ ಕನ್ಸಲ್ಟೆನ್ಸಿ ಏಜೆನ್ಸಿಗೆ ನೀಡಿರುವ ಟೆಂಡರ್ ಆದೇಶವನ್ನು ರದ್ಧುಪಡಿಸಬೇಕು ಎಂದು ಜಿಲ್ಲಾಡಳಿತಕ್ಕೆ ಹನುಮಂತಪ್ಪ ಆಗ್ರಹಿಸಿದರು.

ಹೊರ ಗುತ್ತಿಗೆ ಕಾರ್ಮಿಕರಾದ ದುಗ್ಗಮ್ಮ, ಕಮಲಮ್ಮ, ವಿನೋದಾ ಬಾಯಿ, ಗೌರಮ್ಮ, ಜಿ.ಬಸವರಾಜ, ಸುರೇಶ, ದೇವರಾಜ ಇತರರಿದ್ದರು.