ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಝ್‌ಗಾರ್ ಆ್ಯಂಡ್ ಆಜೀವಿಕ ಮಿಷನ್ (ವಿಬಿ ಜಿರಾಮ್‌ಜಿ) ಎಂದು ಹೆಸರಿಟ್ಟು, ಮಹಾತ್ಮಾ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯ ಪರಿಕಲ್ಪನೆಗೆ ಪೂರಕವನ್ನಾಗಿ ಮಾಡಿದೆ. ಆದರೆ ಕಾಂಗ್ರೆಸ್ ಪಕ್ಷ ಈ ಸುಧಾರಣೆ ಬಗ್ಗೆ ಅಪ ಪ್ರಚಾರ ಮಾಡುತ್ತಿದೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಆರೋಪಿಸಿದ್ದಾರೆ.
ಉಡುಪಿ: ಎನ್‌ಡಿಎ ಸರ್ಕಾರದ ಮನರೇಗಾ ಯೋಜನೆಯಲ್ಲಿದ್ದ ತಪ್ಪುಗಳನ್ನು ಸರಿಪಡಿಸಿ, ಅದಕ್ಕೆ ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಝ್‌ಗಾರ್ ಆ್ಯಂಡ್ ಆಜೀವಿಕ ಮಿಷನ್ (ವಿಬಿ ಜಿರಾಮ್‌ಜಿ) ಎಂದು ಹೆಸರಿಟ್ಟು, ಮಹಾತ್ಮಾ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯ ಪರಿಕಲ್ಪನೆಗೆ ಪೂರಕವನ್ನಾಗಿ ಮಾಡಿದೆ. ಆದರೆ ಕಾಂಗ್ರೆಸ್ ಪಕ್ಷ ಈ ಸುಧಾರಣೆ ಬಗ್ಗೆ ಅಪ ಪ್ರಚಾರ ಮಾಡುತ್ತಿದೆ. ಗ್ರಾಮ ಸ್ವರಾಜ್ಯ ಮೂಲಕ ರಾಮ ರಾಜ್ಯದ ಪರಿಕಲ್ಪನೆ ಕೊಟ್ಟಿದ್ದ ಮಹಾತ್ಮಾ ಗಾಂಧೀಜಿ ಅವರಿಗೆ ಇಷ್ಟವಾಗುವಂತೆ ಈ ಹೊಸ ಹೆಸರು ಇಡಲಾಗಿದೆ ಎಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಶುಕ್ರವಾರ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನರೇಗಾದಲ್ಲಿ 2006ರಿಂದ 2013ರವರೆಗೆ ಸಾವಿರಾರು ಕೋಟಿ ರು. ಭ್ರಷ್ಟಾಚಾರ ನಡೆದಿತ್ತು, ನಕಲಿ ಜಾಬ್‌ಕಾರ್ಡ್, ನಕಲಿ ಫಲಾನುಭವಿಗಳು, ಕಾರ್ಮಿಕರ ಬದಲು ಯಂತ್ರಗಳ ಬಳಕೆ, ಸುಳ್ಳು ಕಾಮಗಾರಿಗಳನ್ನು ನಡೆಸಲಾಗಿತ್ತು. ಯೋಜನೆಯ ಜಾರಿಯಲ್ಲಿ ಪಾರದರ್ಶಕತೆ ಇರಲಿಲ್ಲ, ಇದನ್ನೆಲ್ಲ ತಡೆಯಲು ಯೋಜನೆಯನ್ನು ಸುಧಾರಿಸಿ ಜಿ ರಾಮ್ ಜಿ ಎಂದು ಜಾರಿಗೆ ತರಲಾಗಿದೆ ಎಂದರು.ಇನ್ನುಮುಂದೆ ಜಿ ರಾಮ್ ಜಿ ಮೂಲಕ ಭ್ರಷ್ಟಚಾರಕ್ಕೆ, ಹಣ ಸೋರಿಕೆಗೆ ಕಡಿವಾಣ ಬೀಳಲಿದೆ, ನಿಜವಾದ ಫಲಾನುಭವಿಗಳಿಗೆ ಲಾಭವಾಗಲಿದೆ. ಇದು ಕಾಂಗ್ರೆಸ್ ಗೆ ಬೇಕಾಗಿಲ್ಲ, ಆದ್ದರಿಂದ ಮತ ಗಳಿಕೆಗಾಗಿ ಬಿಜೆಪಿ ಯೋಜನೆಯ ಹೆಸರನ್ನು ಬದಲಾಯಿಸಿದೆ ಎಂದು ಅಪ ಪ್ರಚಾರ ಮಾಡುತ್ತಿದೆ ಎಂದು ವಿಶ್ಲೇಷಿಸಿದರು.ಈ ಸಂದರ್ಭ ಜಿಲ್ಲಾ ಬಿಜೆಪಿ ಅಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು, ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ಶ್ರೀಕಾಂತ ನಾಯಕ್ ಅಲೆವೂರು, ಪ್ರಮುಖರಾದ ಶಿಲ್ಪಾ ಸುವರ್ಣ, ಕಮಲಾಕ್ಷ ಹೆಬ್ಬಾರ್, ಕಲ್ಯಾ ದಿನಾಕರ ಶೆಟ್ಟಿ ಮತ್ತಿತರರಿದ್ದರು.