ರಾಜ್ಯದಲ್ಲಿ ಹಾಗೂ ದೇಶದಲ್ಲಿ ಮುಂದೆ ಎಂದೂ ಕಾಂಗ್ರೆಸ್ ಅಧಿಕಾರಕ್ಕೆ ಬರೋದಿಲ್ಲ. ಕಾಂಗ್ರೆಸ್‌ನಲ್ಲಿ ನಾಯಕತ್ವ ಇಲ್ಲ, ಚಡ್ಡಿ-ಅಂಗಿ ಹಾಕಿಕೊಂಡು ಬರುವ ಹುಡುಗನ ನಾಯಕತ್ವವನ್ನು ಯಾರಾದರೂ ಒಪ್ಪಿಕೊಳ್ತಾರಾ? ಎಂದು ರಮೇಶ ಜಿಗಜಿಣಗಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ವಿಬಿ-ಜಿ ರಾಮ್ ಜಿ ಹೆಸರಿನ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಯೋಜನೆಯು ಗ್ರಾಮೀಣ ಭಾಗದ ಜನರ ಬದುಕಿಗೆ ಭರವಸೆಯ ಬೆಳಕು ನೀಡಿ, ಆದಾಯದ ಮೂಲ ಖಾತ್ರಿಪಡಿಸುವ ಯೋಜನೆಯಾಗಿದೆ‌ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಯೋಜನೆಯು ಕೃಷಿಕರ ಪರಿಶ್ರಮಕ್ಕೆ ಶಕ್ತಿ ತುಂಬುವ ಮೂಲಕ ವಿಕಸಿತ ಭಾರತದ ಸಂಕಲ್ಪ ಸಾಕಾರಗೊಳಿಸುವ ಮಹತ್ವದ ಭಾಗವಾಗಿದೆ.‌ ಆದರೆ, ಹತಾಶೆಯ ಅಂಚಿನಲ್ಲಿರುವ ಕಾಂಗ್ರೆಸ್ಸಿಗರು ಗಾಂಧಿ ಮಹಾತ್ಮನ ಹೆಸರಿನಲ್ಲಿ ರಾಜಕೀಯ ಗೊಂದಲ ಸೃಷ್ಟಿಸಲು ಹೊರಟಿದ್ದಾರೆ. ಗ್ರಾಮೀಣ ಶ್ರಮಿಕರ ಜೀವನಾಡಿಯಾಗಬಹುದಾದ ಈ ಯೋಜನೆಗೆ ಶ್ರೀರಾಮನ ಹೆಸರು ಸೇರಿಸಿಕೊಂಡಿರುವುದು ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳಿಗೆ ನುಂಗಲಾರದ ತುತ್ತಾಗಿದೆ ಎಂದರು.

ಹೆಸರು ಬದಲಾಯಿಸಿ ಗಾಂಧಿಜಿ ಹೆಸರನ್ನು ತೆರೆಮರೆಗೆ ಸರಿಸಿ, ಅವರ ಹೆಸರನ್ನು ಕೊಲ್ಲಲಾಗಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿ, ಗಾಂಧಿಜಿಯನ್ನು ಕೊಂದವರು ಅವರು. ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ತೆಗೆದುಹಾಕಬೇಕು ಎಂದು ಗಾಂಧಿಜಿ ಹೇಳಿದ್ದರು. ಆದರೆ ಕಾಂಗ್ರೆಸ್ ತೆಗೆದರಾ?. ಗಾಂಧಿಜಿಯವರ ಒಂದೇ ಒಂದು ಕನಸನ್ನು ಇವರು ನನಸು ಮಾಡಿದರಾ ಎಂದು ಪ್ರಶ್ನಿಸಿದರು.

ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಅವರ ಪಾರ್ಟಿಯದ್ದು (ಕಾಂಗ್ರೆಸ್) ನನಗೇನು ಗೊತ್ತು?. ಕಾಂಗ್ರೆಸ್‌ನಲ್ಲಿ ವಿಪರೀತವಾಗಿ ಟಗರು- ಕೋಣಿನ ಕುಸ್ತಿ ನಡೆದಿದೆ. ಹೀಗಾಗಿ ಏನು ನಿರ್ಣಯ ಮಾಡಬೇಕು ಎಂಬುದು ಅವರಿಗೆ ತಿಳಿಯುತ್ತಿಲ್ಲ. ಅದನ್ನು ಜಿಲ್ಲಾ ಉಸ್ತುವಾರಿ ಮಂತ್ರಿಗಳನ್ನು ಅಥವಾ ಕಾಂಗ್ರೆಸ್ ನಾಯಕರನ್ನು ಕೇಳಿ‌. ರಾಜ್ಯದಲ್ಲಿ ಮುಖ್ಯಮಂತ್ರಿ ಯಾರಾದರೂ ಆಗಲಿ ನಮಗೆ ಕೇಂದ್ರದಲ್ಲಿ ಮೋದಿ ಪ್ರಧಾನಮಂತ್ರಿ ಆಗಿರಬೇಕು ಒಂದೇ ಆಸೆ ಇದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಬೇಕು ಎಂದು ನಡೆದ ಹೋರಾಟಕ್ಕೆ ನಾವು ಹೋಗಿ ಬೆಂಬಲ‌ ಸೂಚಿಸಿದ್ದೇವೆ. ಮೆಡಿಕಲ್‌ ಕಾಲೇಜು ಹೋರಾಟಗಾರರ ಮೇಲಿನ ಕೇಸ್ ವಾಪಸ್ ತೆಗೆಯಬೇಕು. ಗುಂಡಾಗಿರಿ ನಡೆಯುತ್ತದೆ ಎಂದು ದೌರ್ಜನ್ಯ ಮಾಡಿದರಾ?. ಸಿದ್ರಾಮಣ್ಣ ಮೊದಲಿನಿಂದಲೂ ನನಗೆ ಬಹಳ ಆತ್ಮೀಯನಾಗಿದ್ದ. ನಮ್ಮ ಜೊತೆಗಿದ್ದಾಗ ತುಂಬಾ ಒಳ್ಳೆಯವನಿದ್ದ. ಯಾವಾಗ ಕಾಂಗ್ರೆಸ್ ಸೇರಿದ ಮೇಲೆ ಭಯಂಕರವಾಗಿ ಕೆಟ್ಟಿದ್ದಾನೆ ಎಂದು ನಗೆಚಟಾಕಿ ಹಾರಿಸಿದರು.

ಬಿಜೆಪಿ ಎಸ್.ಟಿ ಮೋರ್ಚಾ ಜಿಲ್ಲಾಧ್ಯಕ್ಷ ರವಿಕುಮಾರ ವಗ್ಗೆ ಮಾತನಾಡಿ, ಗ್ರಾಮಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗುತ್ತದೆ ಎಂಬ ದೂರದೃಷ್ಠಿಯಿಂದ ಯೋಜನೆಯಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ. ವಾಸ್ತವವಾಗಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯು ರದ್ದಾಗಿಲ್ಲ. ಬದಲಾಗಿ ಅದನ್ನು ಇನ್ನಷ್ಟು ಸಶಕ್ತಗೊಳಿಸುವ ದಿಸೆಯಲ್ಲಿ ಉದ್ಯೋಗ ಭರವಸೆಯನ್ನು ದ್ವಿಗುಣಗೊಳಿಸುವ ಉದ್ದೇಶದಿಂದ ಕೆಲಸದ ದಿನವನ್ನು 100 ರಿಂದ 125 ದಿನಗಳ ವರೆಗೆ ವಿಸ್ತರಿಸಲಾಗಿದೆ. ದಿನಗೂಲಿ ₹370 ನಿಗದಿ ಮಾಡಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಈರಣ್ಣ ರಾವೂರ, ರೈಮೋರ್ಚಾ ಜಿಲ್ಲಾ‌ಧ್ಯಕ್ಷ ಬಾಲರಾಜ ರೆಡ್ಡಿ, ವಿಜಯ ಜೋಶಿ, ಸಾಬು ಮಾಶ್ಯಾಳ ಇದ್ದರು.

ಈ ಹಿಂದೆ ಸಿಎಂ ಇಂಡಿಗೆ ಬಂದಾಗ ಇಂಡಿ ಅಭಿವೃದ್ಧಿಗೆ ₹4 ಸಾವಿರ ಕೋಟಿ ಕೊಡುತ್ತೇನೆ ಎಂದಿದ್ದರು. ಈಗ ವಿಜಯಪುರಕ್ಕೆ ಬಂದು ₹8 ಸಾವಿರ ಕೋಟಿ ಕೊಡುತ್ತೇನೆ ಎಂದರು. ಇದೆಲ್ಲ ದೀಪ ಆರುವಾಗ ಜೋರಾಗಿ ಉರಿಯುತ್ತಿದೆ ಅಷ್ಟೆ. ಈ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಮುಂದೆ ಎಂದೂ ಕಾಂಗ್ರೆಸ್ ಅಧಿಕಾರಕ್ಕೆ ಬರೋದಿಲ್ಲ. ಕಾಂಗ್ರೆಸ್‌ನಲ್ಲಿ ನಾಯಕತ್ವ ಇಲ್ಲ, ಚಡ್ಡಿ-ಅಂಗಿ ಹಾಕಿಕೊಂಡು ಬರುವ ಹುಡುಗನ ನಾಯಕತ್ವವನ್ನು ಯಾರಾದರೂ ಒಪ್ಪಿಕೊಳ್ತಾರಾ? ಎಂದು ರಮೇಶ ಜಿಗಜಿಣಗಿ ಹೇಳಿದರು.