ಸಂಸ್ಕಾರಯುತ ಜ್ಞಾನ ನೀಡುವಲ್ಲಿ ಜಿದ್ದಿ ಕಾರ್‍ಯ ಅಮೋಘ

| Published : Feb 11 2025, 12:49 AM IST

ಸಾರಾಂಶ

ಶಿಕ್ಷಣವನ್ನು ವ್ಯಾಪಾರೀಕರಣ ಮಾಡದೇ ಉನ್ನತಮಟ್ಟದ ಸಂಸ್ಕಾರಯುತ ಜ್ಞಾನ ನೀಡುವಲ್ಲಿ ಜಿದ್ದಿಯವರ ಕಾರ್ಯ ಮೆಚ್ಚಲೇಬೇಕು

ಕನ್ನಡಪ್ರಭ ವಾರ್ತೆ ವಿಜಯಪುರ

ಸಮಾಜಮುಖಿ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದುಕೊಂಡು ಬಡ ವಿದ್ಯಾರ್ಥಿಗಳಿಗೆ ವಿದ್ಯಾದಾನ, ಅನ್ನದಾನ ಮಾಡಿದವರು ಜಿದ್ದಿಯವರು. ಶಿಕ್ಷಣವನ್ನು ವ್ಯಾಪಾರೀಕರಣ ಮಾಡದೇ ಉನ್ನತಮಟ್ಟದ ಸಂಸ್ಕಾರಯುತ ಜ್ಞಾನ ನೀಡುವಲ್ಲಿ ಜಿದ್ದಿಯವರ ಕಾರ್ಯ ಮೆಚ್ಚಲೇಬೇಕು ಎಂದು ಸಿಂದಗಿ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.

ಮಾಜಿ ವಿಧಾನ ಪರಿಷತ್ ಸದಸ್ಯ, ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ದಿ.ಎಸ್.ಎ.ಜಿದ್ದಿ ಅವರ ಪ್ರತಿಮೆ ಅನಾವರಣ ಹಾಗೂ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ತಮ್ಮ ಶಿಕ್ಷಣ ಸಂಸ್ಥೆಯ ಮೂಲಕ ಬಡ ವಿದ್ಯಾರ್ಥಿಗಳಿಗೂ ವಿದ್ಯಾರ್ಜನೆ, ಬದುಕು ಕಲ್ಪಿಸಿಕೊಟ್ಟು ಪ್ರೇರಣಾಶಕ್ತಿಯಾಗಿ ಜಿದ್ದಿಯವರು ನಡೆದುಕೊಂಡರು. ರಾಜಕಾರಣ ದಲ್ಲಿಯೂ ಸರಳ ಸಜ್ಜನಿಕೆ ವ್ಯಕ್ತಿ. ವಿದ್ಯಾರ್ಥಿಗಳಿಗೆ ಅವರು ಒಂದು ದಾರಿದೀಪ, ಜಿದ್ದಿ ಅವರಲ್ಲಿ ದೈವಿಕಳೆ ಎದ್ದು ಕಾಣುತ್ತಿತ್ತು ಎಂದರು.

ಸಮಾಜಕ್ಕಾಗಿ ದುಡಿಯುವ ವ್ಯಕ್ತಿ ಅಜರಾಮರವಾಗಿ ಇರುತ್ತಾರೆ ಎನ್ನುವುದಕ್ಕೆ ಜಿದ್ದಿಯರನ್ನೆ ಕಾಣಬೇಕು. ಗುರು ಸುಮ್ಮನೆ ಶಿಷ್ಯರ ಮೇಲೆ ಕೈ ಇಡಲಾರರು. ಅವರಲ್ಲಿ ಒಂದು ಅದ್ಭುತ ಶಕ್ತಿ ಇದ್ದಾಗಲೇ, ಅರಿತಾಗಲೇ ಗುರುವಿನ (ಡಿ.ಎಸ್‌.ಕಣವಿ) ಹಸ್ತ ಅವರ ಮೇಲೆ ಇಡಲು ಸಾಧ್ಯ. ಈ ರೀತಿ ಇದ್ದಾಗಲೇ ಜಿದ್ದಿಯವರ ಮೇಲೆ ಅವರ ಗುರುವಿನ ಕರುಣೆ ತುಂಬಿ ಬಂದಿತು. ಉತ್ತಮ ಸಂಸ್ಕಾರ ಪಡೆದು ಸನ್ಮಾರ್ಗದಲ್ಲಿ ಸಾಗಿ ವಿದ್ಯಾರ್ಥಿಗಳಿಗೂ ಕೂಡ ಸಂಸ್ಕಾರಯುತ ಶಿಕ್ಷಣವನ್ನು ನೀಡುವುದಕ್ಕೆ ಈ ಕಾಳಿದಾಸ ಶಿಕ್ಷಣ ಸಂಸ್ಥೆ ಬೆಳೆಸಿದ್ದು ಇಂದಿನ ದಿನಮಾನಗಳಲ್ಲಿ ಯೋಗ್ಯವಾದುದಾಗಿದೆ ಎಂದು ಶ್ರೀಗಳು ನುಡಿದರು.

ರೂಗಿ ಅಡವಿ ಸಿದ್ದೇಶ್ವರ ಆಶ್ರಮದ ಶ್ರೀ ನಿತ್ಯಾನಂದ ಮಹಾಸ್ವಾಮೀಜಿ ಮಾತನಾಡಿ, ತಮಗೆ ಬಂದ ಎಲ್ಲ ನಿಂದನೆ ಸಹಿಸಿಕೊಂಡು ಉತ್ತಮ ಸಮಾಜಕ್ಕೆ ಕೊಡುಗೆ ನೀಡುವಲ್ಲಿ ಹಾಗೂ ಸಂಸ್ಕಾರಯುತ ಶಿಕ್ಷಣ ದಾನ ಮಾಡುವುದರಲ್ಲಿ ಜಿದ್ದಿಯವರ ಕಾರ್ಯ ಅಪಾರ. ಜಿದ್ದಿ ಅವರಲ್ಲಿಯ ಒಳ್ಳೆಯ ವಿಶಾಲವಾದ ಹೃದಯ ಎಲ್ಲರ ಮನಸ್ಸನ್ನು ಗೆಲ್ಲುವಂತಿತ್ತು ಎಂದು ಶ್ರೀಗಳು ಹೊಗಳಿದರು.

ಡಾ.ಕಂಠೀರವ ಕುಲ್ಲಳ್ಳಿ ಮಾತನಾಡಿ, ಬಡವರಿಗೆ ಶಿಕ್ಷಣ ಸಿಗುವುದು ಕಠಿಣ ಎಂದು ಅರಿತ ಜಿದ್ದಿಯವರು ನಮ್ಮ ಒಡನಾಟದೊಂದಿಗೆ ಸಹಕರಿಸಿ ಉಚಿತ ವಿದ್ಯಾದಾನಕ್ಕೆ ಬೆಲೆಕೊಟ್ಟು ಶೈಕ್ಷಣಿಕ ರಂಗ ಬೆಳಿಸಿದ ಧೀಮಂತ ವ್ಯಕ್ತಿ ಎಂದರು. ವಿ.ಡಿ.ವಸ್ತ್ರದ ಗುರುಗಳು ಮಾತನಾಡಿ, 1969ರಲ್ಲಿಯೆ ನಮ್ಮ ಜಿದ್ದಿಯವರ ಗೆಳೆತನ ಬೆಳೆದು ಬಂದು ಧರ್ಮ- ಜಾತಿ ಮಧ್ಯಬಾರದೆ ಉತ್ತಮ ಗೆಳೆತನ ರೂಢಿಸಿಕೊಂಡು ನಮ್ಮೆಲ್ಲರ ಒಡನಾಟದೊಂದಿಗೆ ಡಿ.ಕೆ.ನಾಯ್ಕರ ಸಹಕಾರದಿಂದ ಈ 4 ಎಕರೆ ಜಾಗ ಪಡೆದು ಇಂದು ಅದ್ಭುತವಾಗಿ ಬಡವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವಲ್ಲಿ ಸಹಕಾರಿಯಾಗುವಂತೆ ಈ ಸಂಸ್ಥೆ ಬೆಳೆಸಿದ ಅವರ ಮುಂದಿನ ಪೀಳಿಗೆಯು ಇದನ್ನು ನಿರಂತರವಾಗಿ ನಡೆಸಿಕೊಂಡು ಹೊಗಲಿ. ಇದಕ್ಕೆ ನನ್ನ ಸಂಪೂರ್ಣ ಸಹಕಾರವಿದೆ ಎಂದರು.

ಸಂಸ್ಥೆಯ ಅಧ್ಯಕ್ಷ ಅಶೋಕ ಜಿದ್ದಿ ಮಾತನಾಡಿ, ಎಲ್ಲ ಹಿರಿಯ, ಗಣ್ಯರ ಆಶೀರ್ವಾದ ನಮ್ಮ ತಂದೆಯವರ ಮೇಲೆ ಇದ್ದಂತೆ ನಿರಂತರವಾಗಿ ನಮ್ಮ ಮೇಲೂ ಇರಲಿ. ಸಿಬ್ಬಂದಿ ಕೊಡ ಅಷ್ಟೆ ಸಹಕಾರದಿಂದ ಶಿಕ್ಷಣ ಸಂಸ್ಥೆ ಮುನ್ನಡೆಸಲಿ ಎಂಬ ಬಯಕೆ ನಮ್ಮದಾಗಿದೆ ಎಂದರು.

ಜಿದ್ದಿಯವರಿಗೆ ಪಾಠ ಕಲಿಸಿದ ಗುರುಗಳಾದ ಡೋಂಗ್ರಿಸಾಬ ಕಣವಿ, ಆರ್‌.ಯರನಾಳ, ಅಪ್ಪಾಸಾಬ ಈರಗೌಡ, ಕೆ.ಆರ್‌.ನಾಗೋಡ, ಪ್ರಧಾನ ಕಾರ್ಯದರ್ಶಿ ಸುಭಾಸ ಜಿದ್ದಿ, ಬಿ.ಆರ್‌. ಬನಸೂಡೆ, ಗುರನಗೌಡ ಪಾಟೀಲ, ಅಪ್ಪಾಸಬ ಯರನಾಳ, ರೈತ ಹೋರಾಟಗಾರ ಅರವಿಂದ ಕುಲಕರ್ಣಿ ಸೇರಿ ಅನೇಕರಿದ್ದರು. ಪ್ರಾಚಾರ್ಯ ಕೆ.ಆರ್‌. ಜಾಧವ ಸ್ವಾಗತಿಸಿ, ಜಿ.ಎಚ್.ಮರನೂರ ನಿರೂಪಿಸಿ, ಎಸ್.ಡಿ.ದುರಗಣ್ಣವರ ನಡೆಸಿಕೊಟ್ಟರು. ಕೊನೆಯಲ್ಲಿ ಆರ್‌.ಎಸ್.ವಾಡೇದ ಉಪಸ್ಥಿತರಿದ್ದರು.

-----

ಕೋಟ್‌..

ಉತ್ತಮ ಸಂಸ್ಕಾರ ಪಡೆದು ಸನ್ಮಾರ್ಗದಲ್ಲಿ ಸಾಗಿ ವಿದ್ಯಾರ್ಥಿಗಳಿಗೂ ಕೂಡ ಸಂಸ್ಕಾರಯುತ ಶಿಕ್ಷಣವನ್ನು ನೀಡುವುದಕ್ಕೆ ಈ ಕಾಳಿದಾಸ ಶಿಕ್ಷಣ ಸಂಸ್ಥೆಯನ್ನು ಜಿದ್ದಿಯವರು ಬೆಳೆಸಿದ್ದು ಇಂದಿನ ದಿನಮಾನಗಳಲ್ಲಿ ಯೋಗ್ಯವಾದುದು.

- ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಸಿಂದಗಿ ಸಾರಂಗಮಠ