ಸಾರಾಂಶ
ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸುವರು. ರಾಜ್ಯ ಸರ್ಕಾರ ವಾಗ್ದಾನ ನೀಡಿದಂತೆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದು, ಕೋಟ್ಯಾಂತರ ಜನರು ಯೋಜನೆಗಳ ಫಲಾನುಭವಿಗಳಾಗಿದ್ದಾರೆ ಎಂದು ಹೇಳಿದರು.ಸಮಾವೇಶದಲ್ಲಿ 50 ಸಾವಿರ ಫಲಾನುಭವಿಗಳು ಭಾಗಿಯಾಗಲಿದ್ದು, ಅವರಿಗೆ ವ್ಯವಸ್ಥಿತ ಕುಡಿಯುವ ನೀರು, ಊಟದ ವ್ಯವಸ್ಥೆ ಮಾಡಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಕನ್ನಡಪ್ರಭ ವಾರ್ತೆ ಮೈಸೂರು
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳ ಸಮಾವೇಶ ಮಾ.15ರ ಮಧ್ಯಾಹ್ನ 12ಕ್ಕೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು.ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಗ್ಯಾರಂಟಿಗಳ ಸಮಾವೇಶ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸುವರು. ರಾಜ್ಯ ಸರ್ಕಾರ ವಾಗ್ದಾನ ನೀಡಿದಂತೆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದು, ಕೋಟ್ಯಾಂತರ ಜನರು ಯೋಜನೆಗಳ ಫಲಾನುಭವಿಗಳಾಗಿದ್ದಾರೆ ಎಂದು ಹೇಳಿದರು.
ಸಮಾವೇಶದಲ್ಲಿ 50 ಸಾವಿರ ಫಲಾನುಭವಿಗಳು ಭಾಗಿಯಾಗಲಿದ್ದು, ಅವರಿಗೆ ವ್ಯವಸ್ಥಿತ ಕುಡಿಯುವ ನೀರು, ಊಟದ ವ್ಯವಸ್ಥೆ ಮಾಡಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಲ್ಲಿ 6.73 ಲಕ್ಷ, ಗೃಹಜ್ಯೋತಿ 9 ಲಕ್ಷ, ಯುವನಿಧಿ 783, ಅನ್ನಭಾಗ್ಯ ಯೋಜನೆಯಲ್ಲಿ 22.76 ಲಕ್ಷ ಫಲಾನುಭವಿಗಳಿದ್ದು 7.10 ಲಕ್ಷ ಪಡಿತರ ಚೀಟಿಗಳಿವೆ ಎಂದು ಅವರು ವಿವರಿಸಿದರು.
ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಮಾತನಾಡಿ, 256 ಗ್ರಾಪಂ ಹಾಗೂ 16 ಸ್ಥಳೀಯ ಸಂಸ್ಥೆಗಳಿಂದ 50 ಸಾವಿರ ಫಲಾನುಭವಿಗಳು ಆಗಮಿಸುತಿದ್ದು, 500 ಬಸ್ ಗಳ ಏರ್ಪಾಡು ಮಾಡಲಾಗಿದೆ. ಸಂಬಂಧಿಸಿದ ಅಧಿಕಾರಿಗಳು ಸಮಾವೇಶಕ್ಕೆ ಆಗಮಿಸುವ ವಾಹನಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ, ವೇದಿಕೆ, ಆಹಾರದ ವ್ಯವಸ್ಥೆಯ ಜವಾಬ್ದಾರಿಯನ್ನು ಎಂಡಿಎ ಆಯುಕ್ತರು ನೋಡಿಕೊಳ್ಳಬೇಕು ಎಂದು ತಿಳಿಸಿದರು.ಜಿಪಂ ಸಿಇಒ ಕೆ.ಎಂ. ಗಾಯತ್ರಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.