ಮನರೇಗಾ ಯೋಜನೆಯಲ್ಲಿ ಪ್ರತ ಪಂಚಾಯಿತಿಗೆ ವರ್ಷದಲ್ಲಿ ₹1ರಿಂದ 2ಕೋಟಿ ಅನುದಾನ ಸಿಗುತ್ತಿತ್ತು.
ಕೊಟ್ಟೂರು: ಮನರೇಗಾ ಬದಲಿಗೆ ಜಿರಾಂಜಿ ಹೆಸರು ಬದಲಾವಣೆ ಮಾತ್ರವಲ್ಲದೇ ಇಡೀ ಯೋಜನೆಯಲ್ಲಿ ಬದಲಾವಣೆ ಮಾಡುವ ಮೂಲಕ ಗ್ರಾಮ ಪಂಚಾಯಿತಿ ಅಧಿಕಾರವನ್ನು ಕಸಿಯುವುದು ಕೇಂದ್ರ ಸರ್ಕಾರದ ಹುನ್ನಾರವಾಗಿದೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ ಹೇಳಿದರು.
ತಾಲೂಕಿನ ಹಾರಕನಾಳು ಗ್ರಾಮದಲ್ಲಿ ಮನರೇಗಾ ಉಳಿಸಿ ಆಂದೋಲನದಲ್ಲಿ ಅವರು ಸೋಮವಾರ ಮಾತನಾಡಿದರು.ಮನರೇಗಾ ಯೋಜನೆಯಲ್ಲಿ ಪ್ರತ ಪಂಚಾಯಿತಿಗೆ ವರ್ಷದಲ್ಲಿ ₹1ರಿಂದ 2ಕೋಟಿ ಅನುದಾನ ಸಿಗುತ್ತಿತ್ತು. ಗ್ರಾಮೀಣ ಭಾಗದಲ್ಲಿ ಮೂಲ ಸೌಕರ್ಯಗಳನ್ನು ಬಲಪಡಿಸುವ ಕೆಲಸವಾಗುತ್ತಿತ್ತು. ಬಡವರಿಗೆ ಕೂಲಿ ಸಿಗುತ್ತಿತ್ತು. ಮನರೇಗಾದಡಿ ಕಾಮಗಾರಿಗಳಿಗೆ ಗ್ರಾಪಂ ಆಡಳಿತವೇ ಅನುಮೋದನೆ ನೀಡುವ ಅಧಿಕಾರವಿತ್ತು. ಆದರೆ ವಿಬಿ ಜಿ ರಾಮ್ ಜಿನಲ್ಲಿ ಕೇಂದ್ರ ಸರಕಾರದಿಂದ ಕಾಮಗಾರಿಗೆ ಅನುಮೋದನೆ ಪಡೆಯಬೇಕು. ಇದರಿಂದ ಗ್ರಾಪಂಗಳಿಗೆ ಇದ್ದ ಅಧಿಕಾರ ಮೊಟಕುಗೊಳ್ಳಲಿದೆ. ಕಾಮಗಾರಿಯಲ್ಲಿ ಶೇ.40ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಬೇಕಾಗಿದೆ. ಈಗಾಗಲೇ ಜಿಎಸ್‌ಟಿಯಿಂದ ರಾಜ್ಯ ಸರ್ಕಾರಕ್ಕೆ ಭಾರೀ ಹೊಡೆತವಾಗಿದ್ದು, ಮನರೇಗಾ ಯೋಜನೆ ಬದಲಾಳದರೆ ಸರ್ಕಾರಕ್ಕೆ ಮತ್ತಷ್ಟು ಆರ್ಥಿಕ ಹೊರೆಯಾಗಲಿದೆ ಎಂದರು.ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಗುರುಸಿದ್ದನಗೌಡ ಮಾತನಾಡಿ, ಕೇಂದ್ರ ಸರ್ಕಾರ ಜಾರಿ ಮಾಡಲಿರುವ ಜಿ ರಾಮ್ ಜಿ ಯೋಜನೆಯಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಳವಾಗಲಿದೆ. ಮಹಿಳೆಯರ ಪಾಲ್ಗೊಳ್ಳುವಿಕೆಗೂ ಕಷ್ಟವಾಗುತ್ತದೆ. ಗ್ರಾಪಂ ಅಧಿಕಾರ ಮೊಟಕು ಮಾಡುವುದರಿಂದ ಕೇವಲ ಅನುಷ್ಟಾನಕ್ಕಷ್ಟೇ ಪಂಚಾಯಿತಿಗಳು ಸೀಮಿತವಾಗಲಿವೆ. ಕನಿಷ್ಠ ವೇತನದ ರಕ್ಷಣೆಯಿಲ್ಲದೇ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಈ ಯೋಜನೆಯಡಿ ಗ್ರಾಪಂಗಳು ಕೇಂದ್ರ ಸರ್ಕಾರದ ಅಣತಿಯಂತೆ ನಡೆದುಕೊಳ್ಳುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಯೋಜನೆಯನ್ನು ವಿರೋಧಿಸುತ್ತಿದೆ. ಎಲ್ಲ ಗ್ರಾಪಂ ಸದಸ್ಯರು ಇದಕ್ಕೆ ಬೆಂಬಲವಾಗಿ ನಿಂತು ದೊಡ್ಡ ಮಟ್ಟದಲ್ಲಿ ಜಾಗೃತಿ ಮೂಡಿಸಬೇಕೆಂದರು.
ಕಾಂಗ್ರೆಸ್ ಮುಖಂಡರಾದ ಎಸ್.ರಾಜೇಂದ್ರಪ್ರಸಾದ್, ಕಾನಮಡುಗು ಶರಣಪ್ಪ, ಹಾರಕನಾಳು ರಾಜಣ್ಣ, ಸುರೇಶ, ದಂಡೆಪ್ಪ, ನಾಗರಾಜ, ಮಂಜುನಾಥ, ಮರುಳಸಿದ್ದಪ್ಪ ಇದ್ದರು.