ಸಾರಾಂಶ
ಗೋಕರ್ಣ: ಶ್ರೀರಾಮನಂಥ ಮಹಾಪುರುಷರು ಮಾತ್ರವೇ ಜೀವಯಾನವನ್ನು ದೇವಯಾನವಾಗಿ ಪರಿವರ್ತಿಸಬಲ್ಲರು. ರಾಮನನ್ನು ಆಶ್ರಯಿಸಿದ ಎಲ್ಲರೂ ಮೋಕ್ಷವನ್ನು ಪಡೆಯುತ್ತಾರೆ. ಬೇರೆಯವರಿಗೆ ಜೀವಯಾನ ಕ್ಲೇಶಕರವಾದರೆ, ಅನನ್ಯನಾಗಿ ರಾಮನನ್ನು ಆಶ್ರಯಿಸುವವರಿಗೆ ಮೋಕ್ಷ ಸಾಧನೆಯಾಗುತ್ತದೆ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ಕೈಗೊಂಡಿರುವ ಶ್ರೀಗಳು 23ನೇ ದಿನವಾದ ಸೋಮವಾರ ಜೀವಯಾನ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿ, ಜೀವಯಾನ ಒಂದರ್ಥದಲ್ಲಿ ದೇವಯಾನ; ಜೀವ- ದೇವ ಯಾನ. ರಾಮಾವತಾರದ ಕೊನೆಯ ಭಾಗದಲ್ಲಿ ಬರುವ ಶ್ರೀರಾಮನ ನಿರ್ಯಾಣದ ಪಯಣವನ್ನು ಬಣ್ಣಿಸಿದರು.ರಾಮಾವತಾರದ ಕೊನೆಯ ದಿನಗಳಲ್ಲಿ ತಾಪಸನೊಬ್ಬ ಬಂದು ಲಕ್ಷ್ಮಣ ಬಳಿ ಬಂದು ರಾಮನ ಭೇಟಿಯ ಇಂಗಿತ ವ್ಯಕ್ತಪಡಿಸುತ್ತಾನೆ. ಅದರಂತೆ ರಾಮನ ಬಳಿಗೆ ಆತನನ್ನು ಕರೆತಂದಾಗ, ಇಬ್ಬರು ಮಾತ್ರ ಮಾತನಾಡಬೇಕೆಂದು, ನಮ್ಮಿಬ್ಬರ ಸಂಭಾಷಣೆಯನ್ನು ಕೇಳಿಸಿಕೊಂಡರೆ ಆತನಿಗೆ ಮೃತ್ಯುದಂಡ ನೀಡಬೇಕೆಂದು ಷರತ್ತು ವಿಧಿಸುತ್ತಾನೆ. ಬಾಗಿಲಲ್ಲಿ ನಿಂತು ಕಾಯುವಂತೆ ಲಕ್ಷ್ಮಣನಿಗೆ ಸೂಚಿಸುತ್ತಾನೆ. ಅಲ್ಲಿಗೆ ಬಂದ ತಾಪಸಿ ನಿಜವಾಗಿ ಬ್ರಹ್ಮದೇವ ಕಳುಹಿಸಿಕೊಟ್ಟ ಕಾಲಪುರುಷನಾಗಿದ್ದ. ಯಮ ಕಾಲಾತ್ಮಕನಾಗಿ ಅಲ್ಲಿಗೆ ಬಂದಿದ್ದ ಎಂದು ವಿವರಿಸಿದರು.
ಸುಮಾರು 350 ವರ್ಷಗಳ ಪಂಚಾಂಗಗಳ ಸಂಗ್ರಹವನ್ನು ಜಯಾ ಪಂಡಿತ್ ಅನಾವರಣಗೊಳಿಸಿದರು. ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಕಾರ್ಯದರ್ಶಿ ಜಿ.ಕೆ. ಮಧು, ವ್ಯವಸ್ಥಾಪಕ ಪ್ರಮೋದ್ ಮುಡಾರೆ, ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಶ್ರೀಶ ಶಾಸ್ತ್ರಿ, ವಿವಿವಿ ಆಡಳಿತಾಧಿಕಾರಿ ಡಾ.ಪ್ರಸನ್ನ ಕುಮಾರ್ ಟಿ.ಜಿ., ಹಿರಿಯ ಲೋಕ ಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಜಿ.ವಿ. ಹೆಗಡೆ, ಮೋಹನ ಭಟ್ ಹರಿಹರ, ಸುಧಾಕರ ಬಡಗಣಿ, ಪರಂಪರಾ ವಿಭಾಗದ ವರಿಷ್ಠಾಚಾರ್ಯ ಸತ್ಯನಾರಾಯಣ ಶರ್ಮಾ, ಪರಂಪರಾ ಗುರುಕುಲದ ಪ್ರಾಚಾರ್ಯ ನರಸಿಂಹ ಭಟ್, ಪಿಯು ಪ್ರಾಚಾರ್ಯರಾದ ಶಶಿಕಲಾ ಕೂರ್ಸೆ, ಮುಖ್ಯಶಿಕ್ಷಕಿ ಸೌಭಾಗ್ಯ ಭಟ್ಟ ಮತ್ತಿತರರು ಉಪಸ್ಥಿತರಿದ್ದರು. ಪ್ರಶಾಂತ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.