ಜೆಜೆಎಂ ಕಾಮಗಾರಿ: ಶೇ.20 ಬಿಲ್‌ ಬಿಡುಗಡೆ ಮಾಡಲು ಆಗ್ರಹ

| Published : Jul 07 2024, 01:16 AM IST

ಜೆಜೆಎಂ ಕಾಮಗಾರಿ: ಶೇ.20 ಬಿಲ್‌ ಬಿಡುಗಡೆ ಮಾಡಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಮನೆಮನೆ ಕೊಳಾಯಿ ಆಳವಡಿಕೆಯ ಜೆಜೆಎಂ ಕಾಮಗಾರಿಯು ಪೂರ್ಣಗೊಂಡಿದ್ದರೂ ಶೇ.20 ರಷ್ಟು ಬಿಲ್ಲನ್ನು ತಡೆಯಿಡಿಯುತ್ತಿರುವುದರಿಂದ ಗುತ್ತಿಗೆದಾರರಿಗೆ ತುಂಬಾ ತೊಂದರೆಯಾಗುತ್ತಿದೆ.

ಕನ್ನಡಪ್ರಭ ವಾರ್ತೆ ಪಾವಗಡ

ಮನೆಮನೆ ಕೊಳಾಯಿ ಆಳವಡಿಕೆಯ ಜೆಜೆಎಂ ಕಾಮಗಾರಿಯು ಪೂರ್ಣಗೊಂಡಿದ್ದರೂ ಶೇ.20 ರಷ್ಟು ಬಿಲ್ಲನ್ನು ತಡೆಯಿಡಿಯುತ್ತಿರುವುದರಿಂದ ಗುತ್ತಿಗೆದಾರರಿಗೆ ತುಂಬಾ ತೊಂದರೆಯಾಗುತ್ತಿದೆ. ಈ ಸಮಸ್ಯೆ ಗಂಭೀರವಾಗಿ ಪರಿಗಣಿಸಿ ನಿವಾರಿಸುವಂತೆ ಆಗ್ರಹಿಸಿ ತಾಲೂಕಿನ ಗುತ್ತಿಗೆದಾರರ ಸಂಘದಿಂದ ಕುಡಿವ ನೀರು ಹಾಗೂ ನೈರ್ಮಲ್ಯ ವಿಭಾಗದ ಕಚೇರಿಯ ಎಇಇ ಹನುಮಂತಯ್ಯಗೆ ಮನವಿ ಸಲ್ಲಿಸಲಾಯಿತು.

ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿದ 2,350 ಕೋಟಿ ರು. ವೆಚ್ಚದ ಬಹುಗ್ರಾಮಗಳ ಕುಡಿವ ನೀರು ಯೋಜನೆ ಪ್ರಗತಿಗೆ ಸಂಬಂಧಪಟ್ಟಂತೆ ವಿಜಯನಗರ ಜಿಲ್ಲೆ ಹೊಸಪೇಟೆ ಡ್ಯಾಂನಿಂದ ತುಂಗಭದ್ರಾ ಕುಡಿವ ನೀರು ಪಾವಗಡ ತಾಲೂಕಿಗೆ ಪೂರೈಕೆಗೆ ಕೆಲವೇ ದಿನ ಬಾಕಿ ಉಳಿದಿದೆ. ಈ ಸಂಬಂಧ ಕೊಳಾಯಿ ಮೂಲಕ ಮನೆ ಮನೆಗೆ ನಲ್ಲಿ ಆಳವಡಿಕೆಯ ಜೆಜೆಎಂ ಕಾಮಗಾರಿ ಪ್ರಗತಿಯಲ್ಲಿದ್ದು, ಈಗಾಗಲೇ ತಾಲೂಕಿನದ್ಯಂತ ಜಲ ಜೀವನ್ ಮಿಷನ್ ಯೋಜನೆಯಡಿ (ಜೆಜೆಎಂ) ಕಾಮಗಾರಿ ಅಂತಿಮ ಹಂತದಲ್ಲಿದೆ. ನಿಗದಿತ ಅವಧಿಯಲ್ಲಿ ಸರ್ಕಾರದ ನಿಯಮನುಸಾರ ಜೆಜೆಎಂ ಯೋಜನೆಯಡಿಯಲ್ಲಿ ಕಾಮಗಾರಿ ನಿರ್ವಹಿಸಿದ್ದರೂ, ನಾನಾ ಕಾರಣಗಳ ನೆಪದಲ್ಲಿ ಬಿಲ್‌ ಪಾಸ್‌ ವಿಳಂಬವಾಗುತ್ತಿದೆ.

ಜೆಜೆಎಂ ಬಿಲ್‌ ಮೊತ್ತದಲ್ಲಿ ಶೇ.10 ಸಿ.ಸಿ. ಹಣ ಕಡಿತ ಸೇರಿದಂತೆ ಬೆಂಗಳೂರು ಗ್ರಾ.ಕು.ನೀ. ಮತ್ತು ನೈ. ಇಲಾಖೆಯ ಕಚೇರಿಯಿಂದ ತಾಂತ್ರಿಕ ಮಂಜೂರಾತಿ ನೀಡಿ ಕಳುಹಿಸಿರುವ ವರ್ಕ್‌ಸ್ಲಿಪ್‌ಗಳಿಗೆ ಜಿಪಂನಿಂದ ಅನುಮೋದನೆ ವಿಳಂಬವಾಗುತ್ತಿದೆ. ಇದರಿಂದ ಸಮಸ್ಯೆ ಎದುರಾಗುತ್ತಿದ್ದು, ತುರ್ತಾಗಿ ವರ್ಕ್‌ಸ್ಲಿಪ್‌ಗಳಿಗೆ ಅನುಮೋದನೆ ದೊರಕಿಸಿಕೊಡಬೇಕೆಂದು ಮನವಿ ಮಾಡಿದರು. ಕೆಲ ಕಾಮಗಾರಿಗಳು ಪೂರ್ಣಗೊಂಡಿದ್ದು ಸಂಬಂಧಪಟ್ಟ ಗ್ರಾಪಂಗೆ ಹಸ್ತಾಂತರಿಸಿದ್ದರೂ ಸಹ ಜಿಪಂನಿಂದ ಪದೇ ಪದೇ ನೋಟಿಸ್ ನೀಡುತ್ತಿರುವ ಕಾರಣ ತೀವ್ರ ತರದ ಸಮಸ್ಯೆ ಎದುರಿಸುವಂತಾಗಿದೆ ಎಂದು ಮನವಿಯಲ್ಲಿ ಒತ್ತಾಯಿಸಿದರು.

ತಾಲೂಕು ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷರಾದ ಎ.ಶಂಕರರೆಡ್ಡಿ, ಅಧ್ಯಕ್ಷ ಚಂದ್ರಶೇಖರ ರೆಡ್ಡಿ, ದಿವಾಕರ್‌, ಸಂಘದ ಉಪಾಧ್ಯಕ್ಷ ಗಂಗಪ್ಪ, ಪ್ರಧಾನ ಕಾರ್ಯದರ್ಶಿ ಡಿ.ಬಿ.ಲೋಕೇಶ್ ಪಾಳೇಗಾರ್, ಸಹ ಕಾರ್ಯದರ್ಶಿ ತಿಮ್ಮರಾಜು, ಖಜಾಂಚಿ ಪಾಲನಾಯ್ಕ, ನಿರ್ದೇಶಕರಾದ ಭಾಸ್ಕರ್ ನಾಯ್ಡು, ಸಿಮೆಂಟ್ ರಾಮಾಂಜಿನಪ್ಪ, ಈರಾರೆಡ್ಡಿ, ಬ್ರಹ್ಮಾನಂದ ರೆಡ್ಡಿ, ರಮೇಶ್, ಮಂಜುನಾಥ್, ಮಾರಪ್ಪ ಮತ್ತಿತರರಿದ್ದರು.ಜಿಪಂ ಕುಡಿವ ನೀರು ಹಾಗೂ ನೈರ್ಮಲ್ಯ ವಿಭಾಗ ಕಚೇರಿಯ ಎಇಇ ಹನುಮಂತಯ್ಯ ಮಾತನಾಡಿ, ಜೆಜೆಎಂ ಶೇ.20ರಷ್ಟು ಬಿಲ್‌ ತಡೆ ಹಾಗೂ ಮತ್ತಿತರರೆ ಸಮಸ್ಯೆ ಕುರಿತು ತಾಲೂಕು ಗುತ್ತಿಗೆದಾರರ ಸಂಘದಿಂದ ಮನವಿ ಸಲ್ಲಿಸಿದ್ದಾರೆ. ಸರ್ಕಾರದ ನಿಯಮನುಸಾರ ಕಾಮಗಾರಿ ಪರಿಶೀಲನೆ ಬಳಿಕ ಬಿಲ್‌ ಪಾಸ್‌ ಮಾಡಲು ಕ್ರಮವಹಿಸಲಿದ್ದೇವೆ. ತಾಲೂಕಿಗೆ ಬಹುಗ್ರಾಮಗಳ ತುಂಗಭದ್ರಾ ಕುಡಿವ ನೀರು ಸರಬರಾಜ್‌ ಹಿನ್ನಲೆಯಲ್ಲಿ ಸರ್ಕಾರದ ಆದೇಶನ್ವಯ ಈಗಾಗಲೇ ತ್ವರಿತ ಜೆಜೆಎಂ ಕಾಮಗಾರಿಗಳ ನಿರ್ವಹಣೆಗೆ ಅಗತ್ಯ ಕ್ರಮವಹಿಸಿದ್ದು, ತಾಲೂಕಿನ ಗುತ್ತಿಗೆದಾರರ ಸಮಸ್ಯೆ ಕುರಿತು ನೀಡಿದ ಮನವಿಯನ್ನು ಮಧುಗಿರಿ ಜಿಪಂ ಉಪವಿಭಾಗದ ಮುಖ್ಯ ಕಾರ್ಯಪಾಲಕ ಅಭಿಯಂತರರಿಗೆ ವರದಿ ಸಲ್ಲಿಸಲಾಗಿದೆ. ಸಮಸ್ಯೆ ಪರಿಶೀಲಿಸಿ ಮುಂದಿನ ಕ್ರಮವಹಿಸಲಾಗುವುದು ಎಂದು ತಿಳಿಸಿದ್ದಾರೆ.